1 : ಯೂದನೂ ಅವನ ಪಡೆಗಳೂ ಸಮಾರಿಯ ಪ್ರಾಂತ್ಯದಲ್ಲಿರುವುದಾಗಿ ನಿಕಾನೋರನಿಗೆ ಗೊತ್ತಾಯಿತು. ಆಗ ಅವನು ಸಬ್ಬತ್ ದಿನದಲ್ಲಿ ತಾನು ಮಾತ್ರ ಸುರಕ್ಷಿತವಾಗಿದ್ದು ಯೆಹೂದ್ಯರ ಮೇಲೆ ದಾಳಿಮಾಡಬೇಕೆಂದು ನಿಶ್ಚಯಿಸಿದನು.
2 : ತನ್ನ ಪಡೆಸಮೇತ ಬರಬೇಕೆಂದು ಕೆಲವು ಮಂದಿ ಯೆಹೂದ್ಯರಿಗೆ ಆಜ್ಞೆ ಮಾಡಿದಾಗ, ಅವರು: “ಕ್ರೂರ ಹಾಗು ಬರ್ಬರ ರೀತಿಯಲ್ಲಿ ನಮ್ಮವರನ್ನು ನಾಶಮಾಡಬೇಡಿ. ಸಕಲವನ್ನೂ ವೀಕ್ಷಿಸುವ ದೇವರು ಈ ದಿನವನ್ನು ಪ್ರತ್ಯೇಕವಾಗಿ ಪವಿತ್ರೀಕರಿಸಿದ್ದಾರೆ; ಅದಕ್ಕೆ ಮಾನ್ಯತೆ ನೀಡಿ,” ಎಂದರು.
3 : “ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞೆಮಾಡುವಂಥ ಅರಸ ಪರಲೋಕದಲ್ಲಿ ಇರುವುದುಂಟೆ?” ಎಂದು ಮುಮ್ಮುಡಿ ನೀಚನಾದ ಆ ನಿಕಾನೋರನು ಹೇಳಿದನು.
4 : ಆಗ ಅವರು “ಪರಲೋಕದಲ್ಲಿರುವ ಜೀವಂತ ದೇವರಾದ ಸರ್ವೇಶ್ವರಸ್ವಾಮಿಯೇ ನಾವು ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾರೆ,” ಎಂದರು.
5 : ಅದಕ್ಕವನು, “ನಾನು ಸಹ ಈ ಲೋಕದಲ್ಲಿ ಅರಸನಾಗಿದ್ದೇನೆ: ಶಸ್ತ್ರಗಳನ್ನು ತೆಗೆದುಕೊಂಡು ಅರಸನ ಆಜ್ಞೆಯನ್ನು ಈಡೇರಿಸಬೇಕೆಂದು ನಿಮಗೆ ಕಟ್ಟಪ್ಪಣೆ ಮಾಡುತ್ತೇನೆ,” ಎಂದು ಮರುತ್ತರ ಕೊಟ್ಟನು. ಆದರೆ ಅವನ ದುಷ್ಟಯೋಜನೆಯನ್ನು ಕಾರ್ಯಗತಮಾಡಲು ಅವನಿಗೆ ಸಾಧ್ಯವಾಗದೆ ಹೋಯಿತು.
ಕಾಳಗಕ್ಕೆ ಯೂದನ ಸಿದ್ಧತೆ
6 : ನಿಕಾನೋರನು ಅಹಂಕಾರದಿಂದಲೂ ಮದದಿಂದಲೂ ಯೂದನ ಹಾಗು ಅವನ ಸೈನ್ಯದ ಮೇಲೆ ಜಯಗಳಿಸಿ ಸಂಪಾದಿಸಿದ ಕೊಳ್ಳೆಯಿಂದ ಒಂದು ಬಹಿರಂಗ ಸ್ಮಾರಕವನ್ನು ನಿರ್ಮಿಸುವುದಾಗಿ ಕೊಚ್ಚಿಕೊಂಡನು.
7 : ಆದರೆ ಸರ್ವೇಶ್ವರ ತನಗೆ ಸಹಾಯ ನೀಡುವರೆಂಬ ಪೂರ್ಣನಂಬಿಕೆ ಯೂದ ಮಕ್ಕಬಿಯನಿಗಿತ್ತು.
8 : “ಅನ್ಯಧರ್ಮೀಯರ ದಾಳಿಗೆ ಹೆದರಬಾರದು. ಬದಲಿಗೆ, ಪರಲೋಕದಿಂದ ಸಹಾಯ ಹೇಗೆ ಹಿಂದೆ ನಮಗೆ ದೊರಕುತ್ತಿತ್ತು ಎಂಬುದನ್ನು ನೆನೆಸಿಕೊಳ್ಳಬೇಕು; ಎಂತಲೇ ಸರ್ವಶಕ್ತ ಸರ್ವೇಶ್ವರ ನಮಗೆ ದಯಪಾಲಿಸುವ ಜಯವನ್ನು ನಿರೀಕ್ಷಿಸುತ್ತಿರಬೇಕು,” ಎಂದು ತನ್ನ ಸೈನಿಕರಿಗೆ ಹೇಳುತ್ತಾ ಅವರಿಗೆ ಉತ್ತೇಜನವಿತ್ತನು.
9 : ಧರ್ಮಶಾಸ್ತ್ರ ಮತ್ತು ಪ್ರವಾದನಾ ಗ್ರಂಥಗಳ ಉಲ್ಲೇಖಗಳಿಂದ ಅವರ ಮನಸ್ಸಿನಲ್ಲಿ ಧೈರ್ಯ ತುಂಬಿದನು; ಅವರು ಹಿಂದೆ ಮಾಡಿದ ಕಾಳಗಗಳಿಂದ ಗಳಿಸಿದ ಜಯವನ್ನು ಅವರ ನೆನಪಿಗೆ ತಂದು ಅವರು ಹೆಚ್ಚು ಆಸಕ್ತಿ ಉಳ್ಳವರಾಗುವಂತೆ ಮಾಡಿದನು.
10 : ಹೀಗೆ ತನ್ನ ಜನರಲ್ಲಿ ಧೈರ್ಯತುಂಬಿ, ತನ್ನ ಆಜ್ಞೆಗಳನ್ನು ಬಹಿರಂಗಪಡಿಸುವಾಗ ಅನ್ಯಧರ್ಮೀಯರ ವಿಶ್ವಾಸದ್ರೋಹ ಹಾಗು ಅವರು ಮುರಿದ ಒಪ್ಪಂದಗಳನ್ನು ಕುರಿತು ಸೂಕ್ತ ನಿದರ್ಶನಗಳಿಂದ ವಿವರಿಸಿದನು.
11 : ಅವನು ತನ್ನ ಜನರನ್ನು ಭರ್ಜಿಗಳ ಶಕ್ತಿಯಿಂದಲ್ಲ, ಆದರೆ ಶೌರ್ಯ ತುಂಬುವಂಥ ಮಾತುಗಳ ಪ್ರೇರಣೆಯಿಂದ, ಅವರಿಗೆ ನಂಬಲರ್ಹ ಎನ್ನಬಹುದಾದ ಈ ದಿವ್ಯದರ್ಶನವನ್ನು ವಿವರಿಸಿ ಅವರ ನೈತಿಕ ಬಲವನ್ನು ಸ್ಥಿರಗೊಳಿಸಿದನು:
12 : ನತೆಗೆ ಉತ್ಕøಷ್ಟ ಆದರ್ಶವಾಗಿದ್ದವನೂ ಸರಳ ಸ್ವಭಾವದವನೂ ವಿನಯಶೀಲನೂ ಬಾಲ್ಯದಿಂದ ಸದಾಚಾರವನ್ನು ಕಲಿತು ಅಭ್ಯಾಸ ಮಾಡುತ್ತಾ ಬಂದವನೂ ಪ್ರಬೋಧಕನೂ ಹಾಗು ಒಮ್ಮೆ ಪ್ರಧಾನಯಾಜಕನೂ ಆಗಿದ್ದ ಓನೀಯನು ದರ್ಶನದಲ್ಲಿ ಯೂದನಿಗೆ ಕಾಣಿಸಿಕೊಂಡನು. ಅವನು ತನ್ನ ಕರಗಳನ್ನೆತ್ತಿ ಯೆಹೂದ್ಯ ಕುಲದವರಿಗಾಗಿ ಪ್ರಾರ್ಥನೆ ಮಾಡುತ್ತಿದ್ದನು.
13 : ಆಗ ವೃದ್ಧನೂ ಘನತೆ ಗೌರವಗಳುಳ್ಳವನೂ ಹಾಗು ಗಂಭೀರ ಆಕಾರವುಳ್ಳವನೂ ಆದ ಮತ್ತೊಬ್ಬ ವ್ಯಕ್ತಿ ಕಾಣಿಸಿಕೊಂಡನು.
14 : ಆಗ ಓನಿಯನು ಮಾತಾಡಲು ಪ್ರಾರಂಭಿಸಿ, “ತನ್ನ ಯೆಹೂದ್ಯ ಕುಲದವರನ್ನು ಪ್ರೀತಿಸುವಂಥ, ನಮಗೋಸ್ಕರ ಹಾಗು ಪವಿತ್ರ ನಗರವಾದ ಜೆರುಸಲೇಮಿಗೋಸ್ಕರ ಪ್ರಾರ್ಥನೆ ಮಾಡುವಂಥ ದೇವರ ಪ್ರವಾದಿ ಯೆರೆವಿೂಯನು ಈತನೆ,” ಎಂದನು.
15 : ಆಗ ಯೆರೆವಿೂಯನು ತನ್ನ ಬಲಗೈಯನ್ನು ಚಾಚಿ ಯೂದನಿಗೆ ಒಂದು ಚಿನ್ನದ ಖಡ್ಗವನ್ನು ಕೊಡುತ್ತಾ,
16 : “ಈ ಪೂಜ್ಯ ಖಡ್ಗವನ್ನು ದೇವರ ಕೊಡುಗೆಯಂತೆ ಸ್ವೀಕರಿಸು; ಇದರಿಂದ, ಶತ್ರುವನ್ನು ನಾಶಗೊಳಿಸಲು ಶಕ್ತನಾಗುವೆ,” ಎಂದನು.
17 : ಯೂದನ ಆ ಮಾತುಗಳಲ್ಲಿ ಯುವಕರನ್ನು ಧೀರರನ್ನಾಗಿಸುವ, ಗಂಡಾಳುಗಳನ್ನಾಗಿಸುವ, ಶೌರ್ಯವುಳ್ಳವರನ್ನಾಗಿಸುವ ಶಕ್ತಿಯಿತ್ತು. ಅವನ ಈ ಉದಾತ್ತ ಮಾತುಗಳಿಂದ ಅವರು ಪ್ರಭಾವಿತರಾದರು. ಅವರ ನಗರ, ಅವರ ಧರ್ಮ, ಅವರ ದೇವಾಲಯಕ್ಕೆ ಅಪಾಯವಿರುವ ಸಂದರ್ಭದಲ್ಲಿ ಕೇವಲ ಸೇನಾದಳಗಳನ್ನೇ ನೆಮ್ಮಿಕೊಂಡಿರದೆ ಧೈರ್ಯದಿಂದ ಶತ್ರುವಿನ ಮೇಲೆ ದಾಳಿಮಾಡಿ ಮುಷ್ಠಿಕಾಳಗದಿಂದಲೂ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದರು.
18 : ಮಡದಿಮಕ್ಕಳ, ಸಹೋದರ ಸಹೋದರಿಯರ, ಬಂಧುಮಿತ್ರರ ಬಗ್ಗೆ ಅವರಿಗೆ ಅಷ್ಟು ಚಿಂತೆಯಿರಲಿಲ್ಲ. ಮಹಾಪವಿತ್ರ ದೇವಾಲಯದ ಸುರಕ್ಷತೆಯ ಬಗ್ಗೆ ಅವರಿಗೆ ಅತ್ಯಂತ ಅಭಿಮಾನವಿತ್ತು.
19 : ನಾಡಿನ ಬಯಲಿನಲ್ಲಿ ನಡೆಯಲಿದ್ದ ಕಾಳಗದ ಪರಿಣಾಮ ಏನಾಗಬಹುದೋ ಎಂಬ ಯೋಚನೆ ಜೆರುಸಲೇಮಿನಲ್ಲೇ ತಂಗಿದ್ದ ಯೆಹೂದ್ಯರ ಮನಸ್ಸನ್ನು ಕಾಡುತ್ತಿತ್ತು.
ನಿಕಾನೋರನ ಸೋಲು ಮತ್ತು ಮರಣ
20 : ಪ್ರತಿಯೊಬ್ಬನೂ ಯುದ್ಧದ ಆಗುಹೋಗುಗಳನ್ನೇ ಆಸಕ್ತಿಯಿಂದ ಎದುರು ನೋಡುತ್ತಿದ್ದನು. ಯುದ್ಧಸನ್ನದ್ಧವಾಗಿದ್ದ ಶತ್ರುಸೈನ್ಯ ಹತ್ತಿರವಾಗಿತ್ತು. ಯುದ್ಧತಂತ್ರಕ್ಕೆ ಅನುಕೂಲವಾದ ಸ್ಥಳಗಳಲ್ಲಿ ಆನೆಗಳು, ಮಗ್ಗುಲಲ್ಲಿ ಸುಸಜ್ಜಿತ ಕುದುರೆ ಸವಾರರು ನಿಂತಿದ್ದರು.
21 : ಯೂದ ಮಕ್ಕಬಿಯನು ತನ್ನ ಎದುರಿಗಿದ್ದ ಪಡೆಯನ್ನು, ವಿವಿಧ ಆಯುಧಗಳ ಸರಬರಾಜನ್ನು, ಆನೆಗಳ ವಿಧ್ವಂಸಕ ಶಕ್ತಿಯನ್ನು ವೀಕ್ಷಿಸಿದನು. ಸರ್ವೇಶ್ವರಸ್ವಾಮಿ ಜಯವನ್ನು ದಯಪಾಲಿಸುವುದು ಆಯುಧಗಳ ಆಧಾರದ ಮೇಲಲ್ಲ; ಬದಲಿಗೆ ಅವರೇ ನಿರ್ಣಯಿಸುವ ಪ್ರಕಾರ; ಯಾರು ಅದಕ್ಕೆ ಪಾತ್ರರೋ ಅಂಥವರಿಗೆ ಮಾತ್ರ ಜಯ ಲಭ್ಯ ಎಂಬುದನ್ನು ಯೂದನು ಚೆನ್ನಾಗಿ ಅರಿತಿದ್ದನು. ಆದುದರಿಂದ ಅದ್ಭುತಕಾರ್ಯಗಳನ್ನು ನಡೆಸುವಂಥ ದೇವರಿಗೆ ಸ್ವರ್ಗದತ್ತ ಕರಗಳನ್ನೆತ್ತಿ ಹೀಗೆಂದು ಪ್ರಾರ್ಥಿಸಿದನು:
22 : “ಸರ್ವೇಶ್ವರಾ, ಹಿಜ್ಕೀಯನು ಜುದೇಯನಾಡಿನ ಅರಸನಾಗಿದ್ದಾಗ ನೀವು ನಿಮ್ಮ ದೂತನನ್ನು ಕಳುಹಿಸಿದಿರಿ. ಆ ದೂತನು ಸೆನ್ಹೆರೀಬನ 1,85,000 ಜನರನ್ನು ನಾಶಪಡಿಸಿದನಲ್ಲವೆ?
23 : ಈಗಲೂ ಪರಲೋಕದೊಡೆಯಾ, ನಮ್ಮ ಶತ್ರುಗಳಲ್ಲಿ ಭಯಭ್ರಾಂತಿ ಹುಟ್ಟಿಸಲು ನಿಮ್ಮ ಸನ್ನುತ ದೂತನನ್ನು ಕಳುಹಿಸಿರಿ.
24 : ನಿಮ್ಮ ಪವಿತ್ರ ಪ್ರಜೆಗಳಿಗೆ ಎದುರಾಗಿ ಬಂದಿರುವ ಈ ದೇವದೂಷಕರನ್ನು ನಿಮ್ಮ ಬಲಾಢ್ಯ ಹಸ್ತದಿಂದ ಹೊಡೆದುಹಾಕಿರಿ.” ಈ ಮಾತುಗಳಿಂದ ಯೂದನು ತನ್ನ ಪ್ರಾರ್ಥನೆಯನ್ನು ಮುಗಿಸಿದನು.
25 : ಯುದ್ಧಕಹಳೆಗಳ ಹಾಗು ಗೀತೆಗಳ ಧ್ವನಿಯೊಡನೆ ನಿಕಾನೋರನೂ ಅವನ ಸೈನಿಕರೂ ಮುಂದೆ ಬಂದರು.
26 : ಆದರೆ ಯೂದನು ಮತ್ತು ಅವನ ಜನರು ದೇವತಾಪ್ರಾರ್ಥನೆ ಹಾಗು ಶ್ಲೋಕಗಳಿಂದ ಶತ್ರುವನ್ನು ಎದುರಿಸಿದರು.
27 : ಕರಗಳಲ್ಲಿ ಯುದ್ಧಾಯುಧಗಳಿಂದ ಹೋರಾಡುತ್ತಾ ಮನದಲ್ಲಿ ದೇವರಿಗೆ ಪ್ರಾರ್ಥನೆ ಮಾಡುತ್ತಾ 35,000ಕ್ಕೂ ಹೆಚ್ಚು ಶತ್ರುಸೈನಿಕರನ್ನು ಸದೆಬಡಿದರು; ದೇವರ ಪ್ರಸನ್ನತೆಯ ಪ್ರಭಾವದಿಂದ ಬಹು ಸಂತೋಷಪಟ್ಟರು.
28 : ಯುದ್ಧ ಮುಗಿದು, ಅವರೆಲ್ಲರೂ ವಿಜಯೋತ್ಸವ ಮಾಡಲು ಹಿಂದಿರುಗುತ್ತಿದ್ದರು. ಆಗ ಸಂಪೂರ್ಣ ಆಯುಧಪಾಣಿಯಾಗಿದ್ದ ನಿಕಾನೋರನು ಕೆಳಗೆ ಸತ್ತುಬಿದ್ದಿರುವುದನ್ನು ಗುರುತು ಹಚ್ಚಿದರು.
29 : ತಕ್ಷಣ ಜಯಕಾರ, ಆರ್ಭಟದಿಂದ ತಮ್ಮ ಪೂರ್ವಜರ ಭಾಷೆಯಲ್ಲಿ ಮಹೋನ್ನತ ಸರ್ವೇಶ್ವರನನ್ನು ಸ್ತುತಿಸಿದರು.
30 : ಪೂರ್ಣದೇಹದಿಂದಲೂ ಪೂರ್ಣಪ್ರಾಣದಿಂದಲೂ ತನ್ನ ಯೆಹೂದ್ಯಜನರಿಗಾಗಿ ಹೋರಾಡಿದ, ಯೌವನದಿಂದಲೂ ದೇಶಾಭಿಮಾನವನ್ನು ಕಳೆದುಕೊಳ್ಳದ, ಯೂದಮಕ್ಕಬಿಯನು ನಿಕಾನೋರನ ತಲೆಯನ್ನೂ ಬಲಗೈಯನ್ನೂ ಕಡಿದು ಜೆರುಸಲೇಮಿಗೆ ಕೊಂಡೊಯ್ಯಬೇಕೆಂದು ಆಜ್ಞಾಪಿಸಿದನು.
31 : ನಗರಕ್ಕೆ ಬಂದು ಸೇರಿದ ನಂತರ ಎಲ್ಲಾ ಜನರನ್ನು ಒಂದುಗೂಡಿಸಿದನು. ಯಾಜಕನೂ ಬಲಿಪೀಠದ ಮುಂದೆ ನಿಲ್ಲುವಂತೆ ಮಾಡಿದನು. ಕೋಟೆಯಲ್ಲಿದ್ದವರನ್ನು ಕರೆಸಿದನು.
32 : ಆಗ ನೀಚ ನಿಕಾನೋರನ ತಲೆಯನ್ನು ಅವರಿಗೆ ತೋರಿಸಿದನು. ಸರ್ವಶಕ್ತದೇವರ ಪವಿತ್ರಾಲಯದ ಕಡೆ ಜಂಬದಿಂದ ಕೈಚಾಚಿದ ಆ ವಿಶ್ವಾಸಹೀನ ಮನುಷ್ಯನ ಕೈಯನ್ನೂ ತೋರಿಸಿದನು.
33 : ಬಳಿಕ ಆ ವಿಶ್ವಾಸಹೀನ ನಿಕಾನೋರನ ನಾಲಗೆಯನ್ನು ಕತ್ತರಿಸಿದನು; ಅದನ್ನು ಚೂರುಚೂರಾಗಿಸಿ ಹಕ್ಕಿಗಳಿಗೆ ತಿನ್ನುವುದಕ್ಕೆ ಹಾಕಲಾಗುವುದು ಎಂದನು; ನಿಕಾನೋರನ ಹುಚ್ಚುತನದ ಪ್ರತಿಫಲವೆಂಬಂತೆ ತಲೆಯನ್ನು ದೇವಾಲಯದ ಎದುರಿಗೆ ನೇತು ಹಾಕುವುದಕ್ಕೂ ಆಜ್ಞೆ ಮಾಡಿದನು.
34 : ಅಲ್ಲಿದ್ದವರೆಲ್ಲ, “ತಮ್ಮ ಪವಿತ್ರಾಲಯವನ್ನು ಅಪವಿತ್ರವಾಗದಂತೆ ಕಾಪಾಡಿದ ದೇವರಿಗೆ ಸ್ತುತಿಯಾಗಲಿ,” ಎಂದು ಸ್ವರ್ಗದತ್ತ ಸ್ವರವೆತ್ತಿ ಸರ್ವೇಶ್ವರನಿಗೆ ಸ್ತುತಿಯನ್ನು ಸಲ್ಲಿಸಿದರು.
35 : ಸರ್ವೇಶ್ವರಸ್ವಾಮಿ ನೀಡುವ ಸಹಾಯಕ್ಕೆ ಅದೊಂದು ಸ್ಪಷ್ಟ ಹಾಗೂ ಬಹಿರಂಗವಾದ ದೃಷ್ಟಾಂತವಾಗಿರಲೆಂದು ಯೂದನು ನಿಕಾನೋರನ ತಲೆಯನ್ನು ಕೋಟೆಯ ಗೋಡೆಯ ಮೇಲೆ ನೇತು ಹಾಕಿದನು.
36 : ಪ್ರತಿವರ್ಷ ಹನ್ನೆರಡನೇ ತಿಂಗಳಿನ ಹದಿಮೂರನೇ ಆ ದಿನವನ್ನು ಅಂದರೆ, ಮೊರ್ದೆಕೈಯ ದಿನದ ಹಿಂದಿನ ದಿನವನ್ನು (ಅರಮಾಯಿಕ್ ಭಾಷೆಯಲ್ಲಿ ಆ ತಿಂಗಳನ್ನು ‘ಆದಾರ್’ ಎಂದು ಕರೆಯಲಾಗುತ್ತಿತ್ತು) ತಪ್ಪದೆ ಆಚರಿಸಬೇಕೆಂದು ಸರ್ವಾನುಮತದಿಂದ ನಿರ್ಧರಿಸಲಾಯಿತು.
37 : ನಿಕಾನೋರನ ವೃತ್ತಾಂತ ಹೀಗೆ ಮುಕ್ತಾಯಗೊಳ್ಳುತ್ತದೆ. ಅಂದಿನಿಂದ ಜೆರುಸಲೇಮ್ ನಗರವು ಹಿಬ್ರಿಯರ ಸ್ವಾಧೀನದಲ್ಲೇ ಇದೆಯಾದ್ದರಿಂದ ನನ್ನ ಕೃತಿಯನ್ನು ಸಹ ಇಲ್ಲಿಗೆ ಇತಿಗೊಳಿಸುತ್ತೇನೆ. ಪ್ರಸಕ್ತ ವಿಷಯವನ್ನು ಸ್ಪಷ್ಟವಾಗಿಯೂ ಖಚಿತವಾಗಿಯೂ ವಿವರಿಸಿದ್ದರೆ, ನನಗೆ ಅಷ್ಟೇ ಸಾಕು. ತೀರಾ ಕನಿಷ್ಠವಾಗಿಯೋ ಮಧ್ಯಮವಾಗಿಯೋ ಇದ್ದರೆ, ನನ್ನಿಂದ ಸಾಧ್ಯವಾದದ್ದು ಅಷ್ಟೇ ಎಂದು ತಿಳಿಯಿರಿ. 38ಬರೇ ದ್ರಾಕ್ಷಾರಸವನ್ನಾಗಲೀ ಬರೇ ನೀರನ್ನಾಗಲೀ ಕುಡಿಯುವುದು ಸುಖಕರವಲ್ಲ; ಆದರೆ ನೀರನ್ನು ಬೆರೆಯಿಸಿದ ದ್ರಾಕ್ಷಾರಸ ರುಚಿಕರವಾಗಿಯೂ ಹಿತಕರವಾಗಿಯೂ ಇರುತ್ತದೆ. ಅದರಂತೆಯೇ, ಕಥನ ಹಾಗು ಶೈಲಿ ಓದುಗರಿಗೆ ಸಂತೋಷವನ್ನು ನೀಡುತ್ತದೆ. ಇತಿ ಸಮಾಪ್ತಿ.