1 : ಯೆಹೂದ್ಯರಿಗೂ ಸಿರಿಯಾದವರಿಗೂ ಸಂಧಾನದ ಒಪ್ಪಂದವಾದ ನಂತರ ಲೂಸ್ಯನು ಅರಸನ ಬಳಿಗೆ ಹಿಂದಿರುಗಿದನು. ಯೆಹೂದ್ಯರು ತಮ್ಮ ಹೊಲಗದ್ದೆಗಳಿಗೆ ಕೆಲಸಕ್ಕೆ ಹೋದರು.
2 : ಆದರೆ ಸ್ಥಳೀಯ ಅಧಿಕಾರಿಗಳಿಗೆ ಇದ್ದ ತಿಮೊಥೇಯನು, ಗೆನ್ನಯನ ಮಗ ಅಪೊಲ್ಲೋನಿಯುಸನು, ಹಿಯೆರೋನಿಮುಸ್ ಮತ್ತು ದೆಮೋಫೊನ್ ಹಾಗು ಸೈಪ್ರಸ್ ದ್ವೀಪದ ಸೇನಾಪತಿನಿಕಾನೋರ್ – ಇವರೆಲ್ಲರು ಯೆಹೂದ್ಯರಿಗೆ ಶಾಂತಿ ಸಮಾಧಾನದಿಂದ ಬಾಳಗೊಡಿಸಲಿಲ್ಲ.
3 : ಅದೇ ಸಂದರ್ಭದಲ್ಲಿ ಜೊಪ್ಪದ ಜನರು ಯೆಹೂದ್ಯರ ವಿರುದ್ಧ ಒಂದು ದೊಡ್ಡ ದುಷ್ಕøತ್ಯವನ್ನೆಸಗಿದರು. ತಮ್ಮ ಮಧ್ಯೆ ವಾಸಿಸುತ್ತಿದ್ದ ಯೆಹೂದ್ಯರೊಂದಿಗೆ ಸ್ನೇಹದಿಂದಿರುವಂತೆ ತೋರಿಸಿಕೊಂಡು ಅವರನ್ನೂ ಅವರ ಕುಟುಂಬಗಳನ್ನೂ ತಯಾರಾಗಿದ್ದ ಹಡಗುಗಳಲ್ಲಿ ತಮ್ಮೊಂದಿಗೆ ಬರಬೇಕೆಂದು ಆಮಂತ್ರಿಸಿದರು.
4 : ನಗರದ ಜನರು ಏಕಮನಸ್ಸಿನಿಂದ ಈ ಪ್ರಯಾಣಕ್ಕೆ ಒಪ್ಪಿದ್ದರಿಂದ ಯೆಹೂದ್ಯರಿಗೆ ಯಾವ ಹಾನಿಯ ಸುಳಿವು ದೊರಕಲಿಲ್ಲ. ಜನರು ಶಾಂತಿಪರರಾಗಿ ಕಂಡುಬಂದದ್ದರಿಂದ ಯೆಹೂದ್ಯರು ಆಮಂತ್ರಣವನ್ನು ಮನ್ನಿಸಿ ಹೋದರು. ಆದರೆ ಸಮುದ್ರದ ಮಧ್ಯೆ ಹಡಗು ಹೋದಾಗ ಯೆಹೂದ್ಯರೆಲ್ಲರನ್ನು ಸಮುದ್ರದ ತಳಕ್ಕೆ ದಬ್ಬಲಾಯಿತು; ಆ ಗುಂಪಿನಲ್ಲಿ ಸುಮಾರು ಇನ್ನೂರು ಮಂದಿ ಯೆಹೂದ್ಯರಿದ್ದರು.
5 : ತನ್ನ ಸ್ವಜನರ ಮೇಲೆ ಬರಮಾಡಿದ ಇಂಥ ದುರಂತದ ಬಗ್ಗೆ ಯೂದನು ತಿಳಿದಾಕ್ಷಣ, ತನ್ನ ಜನರಿಗೆ ಸುದ್ದಿ ಮುಟ್ಟಿಸಿದನು.
6 : ನೀತಿ ಸ್ವರೂಪ ನ್ಯಾಯಾಧಿಪತಿಯಾದ ದೇವರಿಗೆ ಪ್ರಾರ್ಥನೆ ಮಾಡಿದ ಮೇಲೆ, ಕೊಲೆಗಾರರ ಮೇಲೆ ಹಲ್ಲೆ ಮಾಡಿದರು. ಅಂಧಕಾರದ ಮುಸುಕಿನಲ್ಲಿ ಬಂದರಿಗೆ ಬೆಂಕಿಯಿಟ್ಟರು; ಹಡಗುಗಳನ್ನು ಸುಟ್ಟು ಹಾಕಿದರು; ಅಲ್ಲಿ ಆಶ್ರಯಕ್ಕಾಗಿ ಬಂದಿದ್ದ ಜನರನ್ನೆಲ್ಲ ಸಂಹರಿಸಿಬಿಟ್ಟರು.
7 : ನಗರದ ಹೆಬ್ಬಾಗಿಲು ಮುಚ್ಚಿ ಬೀಗ ಹಾಕಿದ ನಂತರ ಯೂದನು ಹಿಮ್ಮೆಟ್ಟಿದನು. ಆದರೆ ಜೊಪ್ಪದ ಜನಸಮೂಹವನ್ನೆಲ್ಲ ನಿರ್ನಾಮಮಾಡಲು ಮತ್ತೊಮ್ಮೆ ಹಿಂದಿರುಗುವುದಾಗಿ ನಿರ್ಧಾರ ಮಾಡಿದನು.
8 : ಜಾಮ್ನಿಯದ ಜನರು ಕೂಡ ತಮ್ಮ ನಗರದಲ್ಲಿದ್ದ ಯೆಹೂದ್ಯರನ್ನು ಸಂಹರಿಸಲು ಸಂಚು ಮಾಡಿದ್ದಾರೆಂದು ಯೂದನಿಗೆ ತಿಳಿದು ಬಂತು.
9 : ಆದ್ದರಿಂದ ಅವನು ಜಾಮ್ನಿಯ ನಗರವನ್ನು ರಾತ್ರಿಯಲ್ಲೆ ಮುತ್ತಿ, ಬಂದರಿಗೆ ಬೆಂಕಿಯಿಟ್ಟು, ಹಡಗುಗಳನ್ನು ನಾಶಮಾಡಿದನು. ಐವತ್ತು ಕಿಲೋಮೀಟರ್ ದೂರವಿದ್ದ ಜೆರುಸಲೇಮಿನಿಂದ ಆ ಬೆಂಕಿಯನ್ನು ನೋಡಬಹುದಾಗಿತ್ತು.
10 : ಜಾಮ್ನಿಯದಿಂದ ತಿಮೊಥೇಯನೊಂದಿಗೆ ಯುದ್ಧಮಾಡಲು ಎರಡು ಕಿಲೋಮೀಟರ್ ದೂರ ಹೋಗುವಷ್ಟರಲ್ಲಿ, 5000 ಜನಕ್ಕಿಂತಲೂ ಹೆಚ್ಚಾದ ಅರಬ್ಬಿಯರು ಸುಮಾರು 500 ರಾಹುತರೊಂದಿಗೆ ಯೂದನ ಜನರ ಮೇಲೆ ದಾಳಿ ಮಾಡಿದರು.
11 : ಕಾಳಗವು ಘೋರವಾಗಿತ್ತು. ಆದರೆ ದೇವರ ಸಹಾಯದಿಂದ ಯೂದನು ಮತ್ತು ಅವನ ಸಂಗಡಿಗರು ಜಯಗಳಿಸಿದರು. ಪರಾಭವಗೊಂಡ ಆ ಮರಳುಗಾಡಿನವರು ಸಂಧಾನದ ಹಸ್ತಕ್ಕಾಗಿ ಭಿಕ್ಷೆ ಬೇಡಿದರು; ಅಲ್ಲದೆ ತಮ್ಮ ಪಶುಪ್ರಾಣಿಗಳನ್ನು ಕೊಟ್ಟು ಇತರ ಕೆಲಸ ಕಾರ್ಯಗಳಲ್ಲಿ ಸಹಾಯ ನೀಡುವುದಾಗಿ ಮಾತು ಕೊಟ್ಟರು.
12 : ಹಲವು ವಿಧದಲ್ಲಿ ಈ ಜನರು ಮುಂದಕ್ಕೆ ಪ್ರಯೋಜನಕಾರಿಗಳು ಆಗಬಹುದು ಎಂಬ ನಿರೀಕ್ಷೆಯಿಂದ ಯೂದನು ಅವರೊಂದಿಗೆ ಸಂಧಾನ ಮಾಡಿಕೊಂಡನು. ಪರಸ್ಪರ ವಾಗ್ದಾನಗಳು ಮುಗಿದನಂತರ ಅರಬ್ಬಿಯರು ತಮ್ಮ ಡೇರೆಗಳಿಗೆ ಹಿಂದಿರುಗಿದರು.
13 : ಬಲವಾದ ಕೋಟೆಗಳುಳ್ಳ ಹಾಗೂ ಸಂಮಿಶ್ರ ಅನ್ಯಧರ್ಮೀಯ ಜನರಿದ್ದ ಕ್ಯಾಸ್ಟಿನ್ ನಗರವನ್ನು ಸಹ ಯೂದನು ಮುತ್ತಿದನು.
14 : ಕೋಟೆಯೊಳಗಿದ್ದವರಾದರೋ, ಗೋಡೆಗಳ ಭದ್ರತೆ ಹಾಗು ಆಹಾರ ಪದಾರ್ಥಗಳ ರಾಶಿಯನ್ನು ನೆಚ್ಚಿಕೊಂಡಿದ್ದರು. ಯೂದನನ್ನು ಮತ್ತು ಅವನ ಸಂಗಡಿಗರನ್ನು ಸೊಕ್ಕಿನಿಂದ ತಾತ್ಸಾರ ಮಾಡಿದರು; ದೇವದೂಷಣೆಗಳನ್ನಾಡಿದರು.
15 : ಯೆಹೂದ್ಯರಾದರೋ ಯೆಹೋಶುವನ ಕಾಲದಲ್ಲಿದ್ದ ಕೋಟೆ ಕೆಡವಬಲ್ಲ ಟಗರು ದಿಮ್ಮಿಗಳಾಗಲೀ ಆಯುಧಗಳಾಗಲೀ ಇಲ್ಲದೆ, ಜೆರಿಕೋವಿನ ಗೋಡೆಯನ್ನು ಕೆಡವಿದಂತೆ ಕ್ಯಾಸ್ಟಿನ್ ನಗರದ ಗೋಡೆಯನ್ನು ಮುತ್ತಿ ಹಾಳುಮಾಡಿದರು.
16 : ದೇವರ ಚಿತ್ತಕ್ಕನುಸಾರ ಅವರು ಆ ನಗರವನ್ನು ವಶಪಡಿಸಿಕೊಂಡರು. ಸುಮಾರು ಅರ್ಧ ಕಿಲೋಮೀಟರ್ ಅಗಲವಿದ್ದ ಕೆರೆಯು ಜನರ ರಕ್ತದಿಂದ ತುಂಬಿಹೋಯಿತು. ಯೆಹೂದ್ಯರು ಅಷ್ಟೊಂದು ಜನರನ್ನು ಸದೆಬಡಿದರು.
17 : ಯೂದನು ಮತ್ತು ಸಂಗಡಿಗರು ಅಲ್ಲಿಂದ 150 ಕಿಲೋಮೀಟರ್ ದೂರ ಬರಲು ಚರಾಕ್ಸ್ ಎಂಬ ಊರನ್ನು ತಲುಪಿದರು. ಟೂಬಿಯರು ಎನ್ನಲಾದ ಯೆಹೂದ್ಯರು ಅಲ್ಲಿದ್ದರು.
18 : ಆ ಪ್ರಾಂತ್ಯದಲ್ಲಿ ತಿಮೊಥೇಯನನ್ನು ಅವರು ಕಾಣಲಿಲ್ಲ; ಅವನು ಆಗಾಗಲೇ ಆ ಸ್ಥಳವನ್ನು ಬಿಟ್ಟು ಹೋಗಿದ್ದನು. ಒಂದು ಸ್ಥಳದಲ್ಲಿ ಸುಸಜ್ಜಿತವಾದ ಕೋಟೆಯೊಂದನ್ನು ಮಾತ್ರ ಬಿಟ್ಟಿದ್ದನು. ಬೇರಾವ ಕಾರ್ಯವನ್ನೂ ಅವನು ಅಲ್ಲಿ ಮಾಡಲಾಗಲಿಲ್ಲ.
19 : ಯೂದಮಕ್ಕಬಿಯನ ಸೇನಾಪತಿಗಳಾದ ದೊಸಿತೇಯುಸ್ ಮತ್ತು ಸೊಸಿಪಾತೆರ್ ಎಂಬವರು ತಿಮೊಥೇಯನು ಹಿಂದೆ ಬಿಟ್ಟು ಹೋದ ಆ ಹತ್ತು ಸಾವಿರ ಮಂದಿ ಜನರನ್ನೂ ವಧಿಸಿದರು.
20 : ಅನಂತರ ಯೂದನು ತನ್ನ ಸೈನ್ಯವನ್ನು ಹಲವಾರು ದಳಗಳನ್ನಾಗಿ ವಿಂಗಡಿಸಿ, ಪ್ರತಿಯೊಂದು ದಳಕ್ಕೂ ನಾಯಕನನ್ನು ನೇಮಿಸಿದನು. ಸೊಸಿಪಾತೆರನನ್ನೂ ದೊಸಿತೇಯುಸನನ್ನೂ ದಂಡನಾಯಕರನ್ನಾಗಿ ನೇಂಇಸಿ ತಾನು, 1,20,000 ಪದಾತಿ ಸೇನಾಳುಗಳು, ಮತ್ತು 2,500 ರಾಹುತರೊಂದಿಗೆ ಹೋಗಿದ್ದ ತಿಮೊಥೇಯನನ್ನು ವೇಗವಾಗಿ ಹಿಂಬಾಲಿಸಿದನು.
21 : ತಿಮೊಥೇಯನು ಯೂದನ ಆಗಮನದ ಬಗ್ಗೆ ಸುದ್ದಿ ಬಂದೊಡನೆ ಹೆಂಗಸರು ಮತ್ತು ಮಕ್ಕಳನ್ನು ಸಾಮಾಗ್ರಿಗಳೊಂದಿಗೆ ಕರ್ನಯಿಮ್ ಎಂಬ ಸ್ಥಳಕ್ಕೆ ಕಳುಹಿಸಿಕೊಟ್ಟನು; ಕರ್ನಯಿಮ್‍ನ ಎಲ್ಲ ದಾರಿಗಳೂ ಇಕ್ಕಟ್ಟಾಗಿದ್ದರಿಂದ ಅದನ್ನು ಮುತ್ತಲು, ಅಥವಾ ಅಲ್ಲಿಗೆ ಹೋಗಲು ಬಹಳ ಕಷ್ಟವಾಗಿತ್ತು.
22 : ಆದರೆ ಯೂದನ ಮೊದಲನೇ ಸೇನಾದಳವನ್ನು ಕಂಡೊಡನೆ ಸಕಲವನ್ನೂ ವೀಕ್ಷಿಸುವ ದೇವರ ಒಂದು ದಿವ್ಯದರ್ಶನದ ನಿಮಿತ್ತ ಶತ್ರುವಿಗೆ ಭಯಭ್ರಾಂತಿ ಉಂಟಾಯಿತು. ಅವರು ಚೆಲ್ಲಾಪಿಲ್ಲಿಯಾಗಿ ಎಲ್ಲಾ ಕಡೆಗೂ ಓಡಿಹೋದರು. ಇದರ ಪರಿಣಾಮವಾಗಿ ಸ್ವಂತ ಕತ್ತಿಯ ಮೊನೆಯಿಂದಲೇ ಅವರಿಗೆ ತಿವಿತ ಉಂಟಾಯಿತು.
23 : ಯೂದನು ಮತ್ತು ಅವನ ಸೇನಾಳುಗಳು ವೇಗವಾಗಿ ಶತ್ರುವನ್ನು ಬೆನ್ನಟ್ಟಿ ಆ ಪಾಪಿಗಳನ್ನು ಕತ್ತಿಯಿಂದ ಕೊಂದರು; ಸುಮಾರು 30,000 ಜನರು ಹತರಾದರು.
24 : ತಿಮೊಥೇಯನು ಕೂಡ ದೊಸಿತೇಯಸನ ಹಾಗೂ ಸೊಸಿಪಾತೆರನ ಮತ್ತು ಅವರ ಜನರ ಕೈಗೆ ಸಿಕ್ಕಿಬಿದ್ದನು. ಆದರೆ ಅತ್ಯಂತ ಕುಯುಕ್ತಿಯಿಂದ ಸುರಕ್ಷಿತವಾಗಿ ಹೋಗಬಿಡಲು ಅವರನ್ನು ಅಂಗಲಾಚಿದನು. “ನಿಮ್ಮಲ್ಲಿ ಅನೇಕರನ್ನು, ಅಂದರೆ ತಂದೆತಾಯಿಗಳನ್ನು ಹಾಗು ಅಣ್ಣ ತಮ್ಮಂದಿರನ್ನು ಸೆರೆಯಲ್ಲಿ ಇಟ್ಟಿದ್ದೇನೆ. ನನಗೆ ಏನಾದರೂ ಹಾನಿ ಆದರೆ ಅವರಿಗೆ ಸ್ವಲ್ಪವಾದರೂ ಕರುಣೆ ಸಿಗುವಂತಿಲ್ಲ.
25 : ಅವರನ್ನೆಲ್ಲ ಬಿಟ್ಟು ಬಿಡುತ್ತೇನೆ,” ಎಂದು ಹಲವಾರು ವಿಧದಲ್ಲಿ ಪ್ರಮಾಣಮಾಡಿದ ಮೇಲೆ ದೊಸಿತೇಯಸನು ಮತ್ತು ಸೊಸಿಪಾತೆರನು, ತಮ್ಮ ಬಂಧುಗಳ ಸುರಕ್ಷತೆಯ ದೃಷ್ಟಿಯಿಂದ, ಅವನನ್ನು ಬಿಟ್ಟು ಬಿಟ್ಟರು.
26 : ಅನಂತರ ಕರ್ನಯಿಮ್ ನಗರದ ಮೇಲೆ ಮತ್ತು ಅತರ್ಗತೀಸ್ ದೇವತೆಯ ದೇವಸ್ಥಾನದ ಮೇಲೆ ಯೂದನು ದಾಳಿ ಮಾಡಿ, ಸುಮಾರು 25 ಸಾವಿರ ಜನರನ್ನು ಕೊಂದನು.
27 : ಆ ನಗರವನ್ನೂ ದೇವಸ್ಥಾನವನ್ನೂ ಪೂರ್ತಿಯಾಗಿ ನಾಶ ಮಾಡಿದ ನಂತರ, ಇತರ ಎಲ್ಲಾ ರಾಷ್ಟ್ರಗಳ ಜನಸಮೂಹದೊಂದಿಗೆ ಲೂಸ್ಯನು ನೆಲೆಸಿದ್ದ ಸುಭದ್ರ ಎಫ್ರೋನ್ ನಗರದ ಮೇಲೆ ದಾಳಿಮಾಡಿದನು. ಗಟ್ಟಿಮುಟ್ಟಾದ ಯುವಕರು ಕೋಟೆಗೋಡೆಗಳ ಮುಂದೆ ನಿಂತುಕೊಂಡು ಧೈರ್ಯದಿಂದ ಹೋರಾಡಿ ಅದನ್ನು ರಕ್ಷಿಸಲು ಪ್ರಯತ್ನಿಸಿದರು. ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರ ಹಾಗೂ ಕ್ಷಿಪಣಿಗಳ ದೊಡ್ಡ ಉಗ್ರಾಣಗಳು ಅದರೊಳಗೆ ಇದ್ದವು.
28 : ಆಗ ಯೆಹೂದ್ಯರು, ತಮ್ಮ ಶತ್ರುಗಳ ಬಲವನ್ನು ಮುರಿಯಬಲ್ಲ ಸರ್ವಶಕ್ತ ದೇವರನ್ನು ಪ್ರಾರ್ಥಿಸಿದರು. ಎಫ್ರೋನ್‍ನಗರ ಯೆಹೂದ್ಯರ ವಶವಾಯಿತು. ಅದರಲ್ಲಿದ್ದ ಸುಮಾರು ಇಪ್ಪತ್ತೈದು ಸಾವಿರ ಜನರನ್ನು ಅವರು ಸಂಹರಿಸಿದರು.
29 : ಅಲ್ಲಿಂದ ಹೊರಟು, ಜೆರುಸಲೇಮಿಗೆ 120 ಕಿಲೋಮೀಟರ್ ದೂರದಲ್ಲಿರುವ ಶಿತೋಪೊಲಿ ಎಂಬ ಊರಿಗೆ ತ್ವರೆಯಾಗಿ ಬಂದರು.
30 : ಅಲ್ಲಿ ನೆಲೆಸಿದ್ದ ಯೆಹೂದ್ಯರಿಗೆ ಶಿತೋಪೊಲಿಯವರು ತೋರಿಸಿದ ಪ್ರೀತ್ಯಾದರದ ನಿಮಿತ್ತ ಹಾಗು ಕಷ್ಟಕಾಲದಲ್ಲಿ ಅವರಿಗೆ ನೀಡಿದ ದಯಾಪೂರಿತ ಸಹಾಯದ ನಿಮಿತ್ತ ಅವರಿಗೆ ವಂದನೆಗಳನ್ನು ಸಲ್ಲಿಸಿದರು.
31 : ಇನ್ನು ಮುಂದಕ್ಕೂ ಅವರ ಬಂಧು ಬಾಂಧವರಿಗೆ ಅದೇ ಪ್ರಕಾರ ಸಹಾಯ ಸಹಾನುಭೂತಿಗಳನ್ನು ತೋರಿಸಬೇಕೆಂದು ಕೇಳಿಕೊಂಡರು. ಆಗ ಪಂಚಾಶತ್ತಮದ ಹಬ್ಬ ಸನ್ನಿಹಿತವಾಗಿ ಇದ್ದರಿಂದ, ಅಲ್ಲಿಂದ ಜೆರುಸಲೇಮಿಗೆ ಮರಳಿದರು.
ಗೊರ್ಗಿಯನ ಸೋಲು
32 : ಪಂಚಾಶತ್ತಮದ ಹಬ್ಬದ ನಂತರ, ಅವರು ಇದುಮೇಯದ ರಾಜ್ಯಪಾಲನಾದ ಗೊರ್ಗಿಯನ ಮೇಲೆ ದಾಳಿಮಾಡಿದರು:
33 : ಗೊರ್ಗಿಯನು 3,000 ಕಾಲಾಳುಗಳೊಂದಿಗೂ 400 ರಾಹುತರೊಂದಿಗೂ ಯುದ್ಧಸನ್ನದ್ಧನಾಗಿದ್ದನು.
34 : ಕಾಳಗ ನಡೆದಾಗ ಕೆಲವು ಯೆಹೂದ್ಯರು ಹತರಾದರು.
35 : ಆದರೆ ದೊಸಿತೇಯಸ್ ಎಂಬಾತ (ಈತ ಬಾಸೆಮೋರನ ಯೆಹೂದ್ಯರಲ್ಲಿ ಒಬ್ಬನು) ಗಟ್ಟಿಮುಟ್ಟಾಗಿದ್ದು ಕುದುರೆಯ ಸವಾರಿ ಮಾಡುತ್ತಾ ಗೊರ್ಗಿಯನನ್ನು ಹಿಡಿದನು. ಅವನನ್ನು ಜೀವಂತವಾಗಿ ಹಿಡಿದುಕೊಂಡು ಹೋಗಬೇಕೆಂದು ಅವನ ಮೇಲಂಗಿಯನ್ನು ಹಿಡಿದು ಎಳೆಯುತ್ತಿದ್ದನು. ಅಷ್ಟರಲ್ಲಿ ತ್ರಾಸಿಯಾದ ರಾಹುತನೊಬ್ಬ ಅವನ ಮೇಲೆ ಬಿದ್ದು ಅವನ ತೋಳನ್ನು ಕಡಿದುಹಾಕಿದನು. ಹೀಗೆ ಗೊರ್ಗಿಯನು ತಪ್ಪಿಸಿಕೊಂಡು ಮಾರಿಸಾ ನಗರವನ್ನು ತಲುಪಿದನು.
36 : ಇಷ್ಟರವರೆಗೆ ಯೆಹೂದ್ಯರು ಎಸ್ತ್ರಯಾಸನ ಮುಂದಾಳತ್ವದಲ್ಲಿ ದೀರ್ಘಕಾಲ ಹೋರಾಡಿ ಬಹಳವಾಗಿ ದಣಿದು ಹೋಗಿದ್ದರು. ಆದುದರಿಂದ ಯೂದನು ಸರ್ವೇಶ್ವರನಿಗೆ ಪ್ರಾರ್ಥನೆ ಮಾಡಿ, ಯುದ್ಧದಲ್ಲಿ ತನ್ನ ಪಕ್ಷವಹಿಸಿ ತನ್ನವರಿಗೆ ನಾಯಕ ಆಗಿರಬೇಕೆಂದು ಬೇಡಿಕೊಂಡನು.
37 : ತನ್ನ ಪೂರ್ವಜರ ಶೈಲಿಯಲ್ಲಿ, ಸ್ವಂತಭಾಷೆಯಲ್ಲೇ ಗೀತೆಗಳಿಂದ ಯುದ್ಧಕ್ಕೆ ಕರೆಕೊಟ್ಟು ಅನಿರೀಕ್ಷಿತವಾದ ದಾಳಿಮಾಡಿ, ಗೊರ್ಗಿಯನ ಸೈನ್ಯವು ಪಲಾಯನಗೈಯುವಂತೆ ಮಾಡಿದನು.
ಯುದ್ಧದಲ್ಲಿ ಮಡಿದವರಿಗಾಗಿ ಪ್ರಾರ್ಥನೆ
ಹಾಗು ಪಾಪಪರಿಹಾರ ಬಲಿಯರ್ಪಣೆ
38 : ಅನಂತರ ಯೂದನು ತನ್ನ ಸೈನ್ಯವನ್ನು ಒಟ್ಟುಗೂಡಿಸಿ, ಅದುಲ್ಲಾಮ್ ನಗರಕ್ಕೆ ಹೋದನು. ಅದು ಸಬ್ಬತ್ತಿನ ಹಿಂದಿನ ದಿನವಾದ್ದರಿಂದ ಪದ್ಧತಿಯ ಪ್ರಕಾರ ಶುದ್ಧೀಕರಣ ಮಾಡಿಕೊಂಡು ಸಬ್ಬತ್ ದಿನವನ್ನು ಆಚರಿಸಿದನು.
39 : ಮಾರನೆಯ ದಿನ ತುರ್ತಾಗಿ ಮಾಡಬೇಕಾದ ಕಾರ್ಯವೊಂದಿತ್ತು: ಯೂದನು ಮತ್ತು ಅವನ ಸಂಗಡಿಗರು ಯುದ್ಧದಲ್ಲಿ ಮಡಿದ ತಮ್ಮವರ ಶವಗಳನ್ನು ಅವರ ಪದ್ಧತಿಯ ಪ್ರಕಾರ ತಮ್ಮ ಕೌಟುಂಬಿಕ ಸಮಾಧಿಗಳಲ್ಲಿ ಭೂಸ್ಥಾಪನೆ ಮಾಡಬೇಕಾಗಿತ್ತು.
40 : ಆಗ ಪ್ರತಿಯೊಂದು ಶವದ ಬಟ್ಟೆಯಡಿಯಲ್ಲಿ ಜಾಮ್ನಿಯ ದೇವತೆಗಳ ತಾಯಿತಿಗಳು ಸಿಕ್ಕಿದವು. ಅವು ಯೆಹೂದ್ಯರಿಗೆ ಧರ್ಮಶಾಸ್ತ್ರದ ಪ್ರಕಾರ ನಿಷಿದ್ಧವಾಗಿದ್ದವು. ಆಗ ಜನರು ಏತಕ್ಕಾಗಿ ಹತರಾದರು ಎಂಬುದು ಎಲ್ಲರಿಗೂ ಸ್ಪಷ್ಟವಾಯಿತು.
41 : ಆದುದರಿಂದ ಅವರು ಅಗೋಚರ ವಾದುದ್ದನ್ನು ಬೆಳಕಿಗೆ ತರುವಂಥ ನೀತಿಸ್ವರೂಪ ಹಾಗು ನ್ಯಾಯಾಧೀಶರಾದ ಸರ್ವೇಶ್ವರನ ಯೋಜನೆಯನ್ನು ಕೊಂಡಾಡಿದರು.
42 : ಅವರು ಕಟ್ಟಿಕೊಂಡ ಈ ಪಾಪವನ್ನು ಪೂರ್ತಿಯಾಗಿ ಅಳಿಸಿಬಿಡಬೇಕೆಂದು ದೇವರಲ್ಲಿ ಪ್ರಾರ್ಥಿಸಿದರು. ಪಾಪವನ್ನು ಮಾಡಿದವರಿಗೆ ಸಂಭವಿಸುವುದೇನೆಂಬುದನ್ನು ಜನರು ಕಣ್ಣಾರೆ ಕಂಡದ್ದರಿಂದ ಅವರು ಪಾಪದಿಂದ ದೂರವಿರಬೇಕೆಂದು ಯೂದನು ಒತ್ತಿ ಹೇಳಿದನು.
43 : ಅಂತೆಯೇ ಯೂದನು ತನ್ನ ಜನರಿಂದ ಸುಮಾರು ಎರಡು ಕಿಲೋಗ್ರಾಮಿನಷ್ಟು ಬೆಳ್ಳಿಯನ್ನು ಸಂಗ್ರಹಿಸಿ, ಪಾಪಪರಿಹಾರಕ್ಕಾಗಿ ಬಲಿಯರ್ಪಿಸಬೇಕೆಂದು ಜೆರುಸಲೇಮಿಗೆ ಕಳುಹಿಸಿದನು. ಮೃತರ ಪುನರುತ್ಥಾನದಲ್ಲಿ ನಂಬಿಕೆಯಿದ್ದುದರಿಂದಲೇ ಯೂದನು ಈ ಪುಣ್ಯಕಾರ್ಯವನ್ನು ಮಾಡಿದ್ದು.
44 : ಮೃತರಾದವರು ಮರಳಿ ಉತ್ಥಾನ ಹೊಂದುತ್ತಾರೆ ಎಂಬುದನ್ನು ವಿಶ್ವಾಸಿಸದೆ ಹೋಗಿದ್ದರೆ ಅಂಥವರಿಗೋಸ್ಕರ ಪ್ರಾರ್ಥನೆ ಮಾಡುವುದು ನಿರರ್ಥಕವಾಗುತ್ತಿತ್ತು; ಮೂರ್ಖತನವಾಗುತ್ತಿತ್ತು.
45 : ಆದರೆ ದೈವಭಕ್ತರಾಗಿ ಮಡಿದವರಿಗೆ ಮಹತ್ತರವಾದ ಸಂಭಾವನೆ ದೊರಕುವುದೆಂಬ ನಿರೀಕ್ಷೆ ಇದ್ದುದರಿಂದಲೇ ಯೂದನ ಆಲೋಚನೆ ನಿಜಕ್ಕೂ ಪವಿತ್ರವಾಗಿತ್ತು, ಪುನೀತವಾಗಿತ್ತು. ಆದುದರಿಂದಲೇ ಮೃತರಾದವರು ತಮ್ಮ ಪಾಪದಿಂದ ವಿಮೋಚನೆ ಹೊಂದಲೆಂದು ಅವರಿಗೋಸ್ಕರ ಅವನು ಪಾಪಪರಿಹಾರ ಬಲಿಯನ್ನು ಸಮರ್ಪಿಸಿದನು.