Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಮಕ್ಕಬಿ


1 : ಸರ್ವೇಶ್ವರನ ನಾಯಕತ್ವದಲ್ಲಿ ಯೂದ ಮಕ್ಕಬಿಯನು ಮತ್ತು ಅವನ ಹಿಂಬಾಲಕರು ಜೆರುಸಲೇಮ್ ಮಹಾ ದೇವಾಲಯವನ್ನೂ ನಗರವನ್ನೂ ಪುನಃ ವಶಪಡಿಸಿಕೊಂಡರು.
2 : ಪರಕೀಯರು ಬೀದಿಚೌಕಗಳಲ್ಲಿ ನಿರ್ಮಿಸಿದ್ದ ವೇದಿಕೆಗಳನ್ನೂ ಅಲ್ಲಿನ ಗುಡಿಗಳನ್ನೂ ನೆಲಸಮಮಾಡಿದರು.
3 : ಮಹಾದೇವಾಲಯದ ಗರ್ಭಗುಡಿಯನ್ನು ಶುದ್ಧೀಕರಿಸಿ ಮತ್ತೊಂದು ಬಲಿಪೀಠವನ್ನು ನಿರ್ಮಿಸಿದರು. ಕಲ್ಲಿನಿಂದ ಅಗ್ಗಿಷ್ಟಿಕೆಯನ್ನು ಮಾಡಿ ಎರಡು ವರ್ಷಗಳವರೆಗೂ ನಿಂತುಹೋಗಿದ್ದ ಬಲಿದಾನವನ್ನು ಅರ್ಪಿಸಿದರು, ಧೂಪಾರತಿ ಎತ್ತಿ ದೀಪಗಳನ್ನು ಬೆಳಗಿದರು; ನೈವೇದ್ಯದ ರೊಟ್ಟಿಗಳನ್ನು ವೇದಿಕೆಯಲ್ಲಿ ಇರಿಸಿದರು.
4 : ಇದೆಲ್ಲವನ್ನು ಮುಗಿಸಿದ ನಂತರ, ಸರ್ವೇಶ್ವರನಿಗೆ ಸಾಷ್ಟಾಂಗವೆರಗಿ, ಇಂಥ ದುರಂತ ಪುನಃ ಸಂಭವಿಸದಿರುವಂತೆ ಪ್ರಾರ್ಥಿಸಿದರು; ಮುಂದಕ್ಕೆ ಪಾಪವನ್ನು ಕಟ್ಟಿಕೊಂಡದ್ದೇ ಆದರೆ ಸಹನೆಯಿಂದ ಶಿಕ್ಷೆ ನೀಡಬೇಕು. ಆದರೆ ದೇವದೂಷಣೆ ಆಡುವ ಬರ್ಬರ ರಾಷ್ಟ್ರಗಳವರ ಕೈಗೆ ತಮ್ಮನ್ನು ಒಪ್ಪಿಸಬಾರದು ಎಂದು ವಿನಂತಿಸಿದರು.
5 : ಕಿಸ್ಲೇವ್ ತಿಂಗಳಿನ ಇಪ್ಪತ್ತೈದನೇ ದಿನದಂದು, ಅಂದರೆ ದೇವಾಲಯವು ಅನ್ಯಧರ್ಮೀಯರಿಂದ ಭ್ರಷ್ಟವಾಗಿದ್ದ ದಿನದಂದೇ ಶುದ್ಧೀಕರಣ ಸಡಗರವು ನಡೆಯಿತು.
6 : ಸ್ವಲ್ಪ ಕಾಲದ ಹಿಂದೆ ಗುಡ್ಡಗಾಡುಗಳಲ್ಲಿ ಮತ್ತು ಗುಹೆಗಳ ಮಧ್ಯೆ ಅಲೆದಾಡುತ್ತಿರುವಾಗ ಪರ್ಣ ಕುಟೀರಗಳ ಹಬ್ಬವನ್ನು ಆಚರಿಸುತ್ತಿದ್ದುದನ್ನು ನೆನಪಿಗೆ ತಂದುಕೊಂಡು, ಈ ಶುದ್ಧೀಕರಣ ಹಬ್ಬವನ್ನೂ ಎಂಟು ದಿನಗಳವರೆಗೆ ಕೊಂಡಾಡಿದರು.
7 : ಆದುದರಿಂದ ‘ಐವೀ’ ಗುಚ್ಛಗಳನ್ನು, ಸುಂದರ ರೆಂಬೆಗಳನ್ನು, ಖರ್ಜೂರದ ಎಲೆಗಳನ್ನು ಮುಂತಾದವುಗಳನ್ನು ಹಿಡಿದುಕೊಂಡು, ಪವಿತ್ರಾಲಯದ ಶುದ್ಧೀಕರಣವಿಧಿ ನೆರವೇರಿಸುವಂಥ ಸದವಕಾಶ ನೀಡಿದ್ದಕ್ಕಾಗಿ, ಸ್ತುತಿಗೀತೆಗಳನ್ನು ಹಾಡಿದರು.
8 : ಇಡೀ ಯೆಹೂದ್ಯ ಜನಾಂಗ ಈ ದಿನಗಳನ್ನು ಪ್ರತಿವರ್ಷ ಆಚರಿಸಬೇಕೆಂದು ಒಮ್ಮತದಿಂದ ನಿರ್ಧರಿಸಿ ಈ ಠರಾವನ್ನು ಬಹಿರಂಗವಾಗಿ ಶಾಸನರೂಪಕ್ಕೆ ತಂದರು. ಪ್ತೊಲೆಮೇಯ ಮಕ್ರೋನನ ಆತ್ಮಹತ್ಯೆ
9 : ಎಪಿಫನೆಸ್ ಎಂದು ಕರೆಯಲಾದ ಅಂತಿಯೋಕನ ಕಾಲ ಹೀಗೆ ಮುಕ್ತಾಯಗೊಂಡಿತು.
10 : ಆ ಭಕ್ತಿಹೀನ ಮನುಷ್ಯನ ಮಗ ಅಂತಿಯೋಕ ಯುಪಾತೊರ್ ಎಂಬವನ ಕಾಲದಲ್ಲಿ ಏನೆಲ್ಲ ನಡೆಯಿತೆಂದು ಈಗ ವಿವರಿಸುತ್ತೇನೆ. ಅವನ ದಂಡಯಾತ್ರೆಗಳ ದುಷ್ಪರಿಣಾಮಗಳನ್ನು ಸಂಕ್ಷಿಪ್ತವಾಗಿ ಕೊಡುತ್ತೇನೆ.
11 : ರಾಜ್ಯದ ಗದ್ದುಗೆಯನ್ನು ಏರಿದಾಗ, ರಾಜ್ಯದ ಉಸ್ತುವಾರಿಯನ್ನು ನಡೆಸುವವನಾಗಿ ಸೆಲೆಸಿರಿಯ ಮತ್ತು ಫೆನಿಷಿಯಾ ಪ್ರಾಂತ್ಯಕ್ಕೆ ರಾಜ್ಯಪಾಲನನ್ನಾಗಿ ಲೂಸ್ಯ ಎಂಬವನನ್ನು ನೇಮಿಸಿದನು.
12 : ಮಕ್ರೋನ ಎಂದು ಕರೆಯಲಾಗುತ್ತಿದ್ದ ಪ್ತೊಲೆಮೇಯ ಎಂಬವನು, ಈತನಿಗೆ ಮುಂಚೆ ರಾಜ್ಯಪಾಲನಾಗಿದ್ದಾಗ, ಯೆಹೂದ್ಯರೊಂದಿಗೆ ನ್ಯಾಯನೀತಿಯಿಂದ ವರ್ತಿಸುತ್ತಿದ್ದನು. ಕಾರಣ – ಅವರಿಗೆ ತುಂಬಾ ಅನ್ಯಾಯವಾಗಿತ್ತು ಎಂದು ಅವನು ಅರಿತಿದ್ದನು. ಮಕ್ರೋನನು ಯೆಹೂದ್ಯರ ಬಗ್ಗೆ ಶಾಂತಿಯುತ ನಿಲುವನ್ನು ತಾಳಿದ್ದನು.
13 : ಈ ಪರಿಣಾಮವಾಗಿ, ಅರಸನ ಸ್ನೇಹಿತರು ಯುಪಾತೊರನ ಬಳಿಗೆ ಹೋಗಿ, ಮಕ್ರೋನನು ಅರಸ ಫಿಲೋಮಿಟರ್ ವಹಿಸಿಕೊಟ್ಟಿದ್ದ ಸೈಪ್ರಸ್ ದ್ವೀಪವನ್ನು ತೊರೆದುಬಿಟ್ಟು ಅಂತಿಯೋಕ ಎಪಿಫನೆಸ್ ಬಳಿಗೆ ಹೋಗಿದ್ದಾನೆ, ಎಂದು ದೂರುಕೊಟ್ಟರು. ಅವನೊಬ್ಬ ದ್ರೋಹಿಯೆಂದು ವಾದಿಸಿದರು. ಹೀಗೆ ಅವನ ಪದವಿಗೆ ಸಲ್ಲತಕ್ಕ ಗೌರವಕ್ಕೆ ಚ್ಯುತಿ ಬರಲಾಗಿ ಮಕ್ರೋನನು ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡನು. ಇದುಮೇಯರ ಸೋಲು
14 : ಇದುಮೇಯ ಪ್ರಾಂತ್ಯಕ್ಕೆ ಗೊರ್ಗಿಯ ಎಂಬವನು ರಾಜ್ಯಪಾಲನಾಗಿ ನೇಮಕಗೊಂಡಾಗ ಅವನು ಕೂಲಿ ಸಿಪಾಯಿಗಳ ದಂಡನ್ನು ಇಟ್ಟುಕೊಂಡು, ಸಮಯ ಸಿಕ್ಕಿದಾಗಲೆಲ್ಲ ಯೆಹೂದ್ಯರ ಮೇಲೆ ದಾಳಿ ಮಾಡುತ್ತಿದ್ದನು.
15 : ಇದಲ್ಲದೆ, ಮುಖ್ಯವಾದ ದುರ್ಗಗಳನ್ನು ಆಕ್ರಮಿಸಿಕೊಂಡಿದ್ದ ಇದುಮೇಯರು ಎಡೆಬಿಡದೆ ಯೆಹೂದ್ಯರನ್ನು ಪೀಡಿಸುತ್ತಿದ್ದರು. ಜೆರುಸಲೇಮಿನಿಂದ ಗಡೀಪಾರಾದವರನ್ನು ಬರಮಾಡಿಕೊಂಡು, ಯುದ್ಧವನ್ನು ಸತತವಾಗಿ ಮುಂದುವರಿಸಿಕೊಂಡು ಹೋಗಲು ಪ್ರಯತ್ನಮಾಡಿದರು.
16 : ಆದರೆ ಮಕ್ಕಬಿಯನು ಮತ್ತು ಅವನ ಪಡೆಯವರು ಸಾರ್ವತ್ರಿಕ ಪ್ರಾರ್ಥನೆ ಮಾಡಿ, ತಮ್ಮ ಪರವಾಗಿ ಯುದ್ಧ ಮಾಡಲು ದೇವರನ್ನು ಬಿನ್ನವಿಸಿ, ಇದು ಮೇಯರ ಕೋಟೆಗಳತ್ತ ಧಾವಿಸಿದರು.
17 : ತೀವ್ರವಾದ ದಾಳಿಯಿಂದ ಹಲವಾರು ಸ್ಥಳಗಳನ್ನು ಆಕ್ರಮಿಸಿಕೊಂಡು, ಕೋಟೆಗೋಡೆಯ ಬಳಿ ಹೋರಾಡುತ್ತಿದ್ದವರನ್ನೆಲ್ಲ ಹೊಡೆದೋಡಿಸಿದರು; ಸಿಕ್ಕಿದವರನ್ನೆಲ್ಲ ಕೊಂದು ಹಾಕಿದರು. ಹೀಗೆ ಮಡಿದವರು ಸುಮಾರು ಇಪ್ಪತ್ತು ಸಾವಿರ ಮಂದಿ.
18 : ಸುಮಾರು ಒಂಬತ್ತು ಸಾವಿರ ಮಂದಿ ಶತ್ರು ಸೈನಿಕರು ಎರಡು ಭದ್ರವಾದ ಬುರುಜುಗಳಲ್ಲಿ ಆಶ್ರಯದಲ್ಲಿದ್ದರು. ಎಂಥ ಮುತ್ತಿಗೆಯನ್ನಾದರೂ ತಡೆಯುವಷ್ಟು ಶಕ್ತಿ ಸಾಮಗ್ರಿಗಳು ಅವರಿಗಿತ್ತು.
19 : ಯೂದಮಕ್ಕಬಿಯನು ತನ್ನ ಸಹೋದರರಾದ ಸಿಮೋನ್ ಮತ್ತು ಜೋಸೆಫರನ್ನು ಜಕ್ಕಾಯನೊಂದಿಗೆ ಅಲ್ಲಿಯೇ ಇರಿಸಿ, ತುರ್ತಾಗಿ ಅವಶ್ಯಕವಾಗಿದ್ದ ಸ್ಥಳಗಳಿಗೆ ಹೋದನು. ದಾಳಿಯನ್ನು ಮುಂದುವರೆಸಲು ಸಾಕಷ್ಟು ಜನ ಅವರೊಂದಿಗೆ ಇದ್ದರು.
20 : ಆದರೆ ಸಿಮೋನನೊಂದಿಗಿದ್ದ ಕೆಲವು ಹಣದಾಶೆಯುಳ್ಳ ಸೈನಿಕರು, ಬುರುಜುಗಳಲ್ಲಿದ್ದ ಶತ್ರುಸೈನಿಕರಿಂದ ಸುಮಾರು 64 ಕಿಲೋಗ್ರಾಂ ಬೆಳ್ಳಿನಾಣ್ಯಗಳನ್ನು ಲಂಚವಾಗಿ ತೆಗೆದುಕೊಂಡು, ತಪ್ಪಿಸಿಕೊಂಡು ಹೋಗಿಬಿಟ್ಟರು.
21 : ಯೂದನಿಗೆ ಈ ಸಮಾಚಾರ ತಿಳಿಯಲಾಗಿ, ಜನನಾಯಕರನ್ನು ಒಂದುಗೂಡಿಸಿದನು; ತಮ್ಮ ಬಾಂಧವರನ್ನು ಹಣಕ್ಕಾಗಿ ವಿಕ್ರಯಿಸಿ ಶತ್ರುಗಳಿಗೆ ಅವರ ಮೇಲೆ ದಾಳಿಮಾಡಲು ಅನುಕೂಲ ಮಾಡಿದ್ದಾರೆಂದು ಖಂಡಿಸಿದನು.
22 : ಅನಂತರ ದ್ರೋಹಿಗಳಾಗಿದ್ದವರನ್ನು ಸಂಹರಿಸಿ ಬೇಗನೆ ಆ ಎರಡು ಬುರುಜುಗಳನ್ನು ವಶಪಡಿಸಿಕೊಂಡನು.
23 : ಯುದ್ಧರಂಗದಲ್ಲಿ ಯೂದ ಮಕ್ಕಬಿಯನು ವಿಜಯದ ಮೇಲೆ ವಿಜಯವನ್ನು ಗಳಿಸಿದನು; ಆ ಎರಡು ದುರ್ಗಗಳಲ್ಲಿ ಸುಮಾರು ಇಪ್ಪತ್ತು ಸಾವಿರ ಶತ್ರುಗಳನ್ನು ನಾಶಗೊಳಿಸಿದನು. ತಿಮೊಥೇಯನ ಸೋಲು
24 : ಇದಕ್ಕೆ ಮುಂದೆ ಒಂದು ಬಾರಿ ಯೆಹೂದ್ಯರಿಂದ ಪರಾಭವಗೊಂಡಿದ್ದ ತಿಮೊಥೇಯನು ಕೂಲಿ ಸಿಪಾಯಿಗಳ ಪ್ರಚಂಡ ಪಡೆಯನ್ನು ಸೇರಿಸಿಕೊಂಡನು. ಏಷ್ಯಾದಿಂದ ಅತೀ ದೊಡ್ಡದಾದ ರಾಹುತರ ಪಡೆಯನ್ನು ಶೇಖರಿಸಿದನು. ಅನಂತರ ಜುದೇಯವನ್ನು ಬಿರುಗಾಳಿಯಂತೆ ಆಕ್ರಮಿಸಿಕೊಳ್ಳಲು ಬಂದನು.
25 : ಅವನು ಹತ್ತಿರ ಬಂದಾಗ, ಯೂದಮಕ್ಕಬಿಯನೂ ಅವನ ಸೈನಿಕರೂ ತಲೆಯ ಮೇಲೆ ಧೂಳನ್ನೂ ಸುರಿದುಕೊಂಡು, ಗೋಣಿತಟ್ಟಿನಿಂದ ನಡುವನ್ನು ಕಟ್ಟಿಕೊಂಡು ದೇವರಲ್ಲಿ ಮೊರೆಯಿಟ್ಟರು.
26 : ಬಲಿಪೀಠದ ಮುಂದೆ ಮೆಟ್ಟಲುಗಳ ಮೇಲೆ ಅಡ್ಡಬಿದ್ದು, ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ತಮಗೆ ಪ್ರಸನ್ನರಾಗಿರಬೇಕೆಂದೂ ಶತ್ರುಗಳಿಗೆ ಶತ್ರುವಾಗಿರಬೇಕೆಂದೂ ವಿರೋಧಿಗಳಿಗೆ ವಿರೋಧಿಯಾಗಿರಬೇಕೆಂದೂ ದೇವರಲ್ಲಿ ವಿನಂತಿಸಿಕೊಂಡರು.
26 : ಬಲಿಪೀಠದ ಮುಂದೆ ಮೆಟ್ಟಲುಗಳ ಮೇಲೆ ಅಡ್ಡಬಿದ್ದು, ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ತಮಗೆ ಪ್ರಸನ್ನರಾಗಿರಬೇಕೆಂದೂ ಶತ್ರುಗಳಿಗೆ ಶತ್ರುವಾಗಿರಬೇಕೆಂದೂ ವಿರೋಧಿಗಳಿಗೆ ವಿರೋಧಿಯಾಗಿರಬೇಕೆಂದೂ ದೇವರಲ್ಲಿ ವಿನಂತಿಸಿಕೊಂಡರು.
27 : ಪ್ರಾರ್ಥನೆಯಾದ ಮೇಲೆ ಆಯುಧಗಳನ್ನು ತೆಗೆದುಕೊಂಡು ನಗರದಿಂದ ಬಹು ದೂರ ನಡೆದರು. ರಾತ್ರಿಯಾದಾಗ ಶತ್ರುಸೈನ್ಯಕ್ಕೆ ಸ್ವಲ್ಪದೂರದಲ್ಲೇ ನಿಂತರು.
28 : ಬೆಳಗಾದಾಗ ಎರಡು ಸೈನ್ಯಗಳೂ ಕಾಳಗವನ್ನು ಪ್ರಾರಂಭಿಸಿದವು. ಒಂದು ಕಡೆಯವರು ತಮ್ಮ ಶಕ್ತಿಯಿಂದ ಮಾತ್ರವಲ್ಲ, ಸರ್ವೇಶ್ವರನ ಸಹಾಯದಿಂದ ವಿಜಯವನ್ನು ನಿರೀಕ್ಷಿಸುತ್ತಿರಲು ಮತ್ತೊಂದು ಕಡೆಯವರು ತಮ್ಮ ಶಕ್ತಿ ಸಾಮಥ್ರ್ಯವನ್ನೇ ಯುದ್ಧದ ಆಧಾರವನ್ನಾಗಿ ಮಾಡಿಕೊಂಡಿದ್ದರು.
29 : ಕಾಳಗವು ತೀವ್ರರೂಪ ತಾಳಲು ಶತ್ರುಗಳಿಗೆ ಸ್ವರ್ಗದಿಂದ ಒಂದು ದರ್ಶನವಾಯಿತು: ಅದರಲ್ಲಿ ಐದುಮಂದಿ ರಾಹುತರು ತೇಜಸ್ಸುಳ್ಳವರಾಗಿದ್ದು ತಮ್ಮ ಕುದುರೆಗಳ ಮೇಲೆ ಬಂಗಾರದ ಲಗಾಮುಗಳನ್ನು ಹಿಡಿದುಕೊಂಡು ಯೆಹೂದ್ಯರ ಮುಂದೆ ನಡೆಯುತ್ತಿದ್ದರು.
30 : ಅವರಲ್ಲಿ ಇಬ್ಬರು ತಮ್ಮ ಮಧ್ಯೆ ಯೂದಮಕ್ಕಬಿಯನನ್ನು ಇರಿಸಿಕೊಂಡು, ತಮ್ಮ ಸ್ವಂತ ಯುದ್ಧ ಕವಚಗಳು ಹಾಗು ಆಯುಧಗಳು ಅವನಿಗೆ ರಕ್ಷೆಯಾಗುವಂತೆಮಾಡಿ, ಅವನು ಗಾಯಗೊಳ್ಳದಂತೆ ನೋಡಿಕೊಂಡರು; ಶತ್ರುಗಳ ಮೇಲೆ ಬಾಣಗಳನ್ನು ಬಿಟ್ಟರು; ಸಿಡಿಲು ಬಡಿಯುವಂತೆ ಮಾಡಿದರು. ಪರಿಣಾಮವಾಗಿ ಶತ್ರುಗಳು ಕಣ್ಣುಕಟ್ಟುವಂತಾಗಿ ದಿಕ್ಕು ತೋಚದೆ ಚೆಲ್ಲಾಪಿಲ್ಲಿಯಾಗಿ ಓಡಿದರು; ತುಂಡು ತುಂಡಾಗಿ ಕಡಿಯಲ್ಪಟ್ಟರು.
31 : ಸುಮಾರು 20,500 ಮಂದಿ ಸೈನಿಕರು, 600 ರಾಹುತರು ಹತರಾದರು.
32 : ಆಗ ತಿಮೊಥೇಯನು ಗಜರಾ ಎಂಬ ದುರ್ಗಕ್ಕೆ ಓಡಿಹೋದನು. ಆ ಕೋಟೆಯನ್ನು ಭದ್ರವಾಗಿ ಕಾದಿರಿಸಲಾಗಿತ್ತು. ಅದು ಅವನ ಸಹೋದರ ಕೈರೆಯಾಸ್ ಎಂಬವನ ಹತೋಟಿಯಲ್ಲಿತ್ತು.
33 : ಆಸಕ್ತಿಯಿಂದ ಯೂದಮಕ್ಕಬಿಯನು ಮತ್ತು ಅವನ ಸೈನಿಕರು ನಾಲ್ಕು ದಿನಗಳವರೆಗೆ ಕೋಟೆಯನ್ನು ಮುತ್ತಿದರು.
34 : ಒಳಗಿದ್ದವರು ಭಯಂಕರ ದೇವದೂಷಣೆಯಾಡುತ್ತಾ, ಕೆಟ್ಟ ಮಾತುಗಳನ್ನು ಹೇಳುತ್ತಾ ಇದ್ದರು; ಅವರಿಗೆ ತಮ್ಮ ಸ್ಥಳದ ಸುರಕ್ಷತೆಯಲ್ಲಿ ಮಾತ್ರ ಭರವಸೆ ಇತ್ತು.
35 : ಆದರೆ ಐದನೇ ದಿನ ಬೆಳಗಾದಾಗ ಶತ್ರುಗಳ ದೇವ ದೂಷಣೆಗಳನ್ನು ತಾಳಲಾರದೆ ಯೆಹೂದ್ಯರು ಕುಪಿತರಾದರು. ಧೈರ್ಯದಿಂದ ಯೂದನ ಇಪ್ಪತ್ತು ಮಂದಿ ಸೈನಿಕರು ಕೋಟೆಯ ಗೋಡೆಯನ್ನು ಹತ್ತಿ ಕ್ರೂರಾವೇಶದಿಂದ ಮುನ್ನುಗ್ಗಿ ಸಿಕ್ಕಿದವರನ್ನೆಲ್ಲ ಕಡಿದುಹಾಕಿದರು.
36 : ಅಂತೆಯೇ ದುರ್ಗದ ಇನ್ನೊಂದು ಕಡೆ ಗೋಡೆ ಹತ್ತಿದವರು ಗೋಪುರಗಳಿಗೆ ಬೆಂಕಿಯಿಟ್ಟರು. ಆ ಬೆಂಕಿ ದೂಷಕರನೇಕರನ್ನು ಸುಟ್ಟುಹಾಕಿತು. ಮತ್ತಿತರರು ಬಾಗಿಲುಗಳನ್ನು ಬಲವಂತದಿಂದ ತೆರೆದು ಮಕ್ಕಬಿಯನ ಕಡೆಯವರನ್ನು ಒಳಗೆ ಬಿಟ್ಟು ನಗರವನ್ನು ವಶಪಡಿಸಿಕೊಂಡರು.
37 : ತಿಮೊಥೇಯನು ಒಂದು ಬಾವಿಯಲ್ಲಿ ಅಡಗಿಕೊಂಡಿದ್ದನು. ಅವನನ್ನೂ ಅವನ ಸಹೋದರ ಕೈರೆಯಾಸನನ್ನೂ ಅಪೊಲ್ಲೋಫನೆಸನನ್ನೂ ಸಂಹರಿಸಿಬಿಟ್ಟರು.
38 : ಇದೆಲ್ಲವೂ ಆದನಂತರ, ಇಸ್ರಯೇಲಿನ ಮೇಲೆ ಬಹಳ ಕರುಣೆಯಿಟ್ಟು, ಜಯವನ್ನು ಗಳಿಸಿಕೊಟ್ಟ ಸರ್ವೇಶ್ವರನಿಗೆ ಕೃತಜ್ಞತಾಸ್ತುತಿಮಾಡಿ, ಗೀತೆಗಳನ್ನು ಹಾಡಿ ಸರ್ವೇಶ್ವರನಿಗೆ ಪ್ರಣಾಮಗಳನ್ನು ಸಲ್ಲಿಸಿದರು.

· © 2017 kannadacatholicbible.org Privacy Policy