Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ಬಲಿಪೀಠವನ್ನು ಕಟ್ಟಿಯಾಯಿತೆಂದೂ ಪವಿತ್ರಾಲಯವು ಮೊದಲಿನಂತೆ ಪ್ರತಿಷ್ಠಿತವಾಯಿತೆಂದೂ ನೆರೆಹೊರೆಯಲ್ಲಿದ್ದ ಅನ್ಯಜನರು ಕೇಳಿ, ರೋಷಾವೇಶಗೊಂಡರು.
2 : ಮಾತ್ರವಲ್ಲದೆ, ತಮ್ಮ ಮಧ್ಯೆಯಿದ್ದ ಇಸ್ರಯೇಲ ವಂಶವನ್ನೇ ನಿರ್ಮೂಲ ಮಾಡುವ ಸಂಕಲ್ಪ ಮಾಡಿದರು. ದೇವಜನರಲ್ಲಿ ಕೆಲವರನ್ನು ಕೊಲ್ಲಿಸುವುದಕ್ಕೂ ನಾಶಮಾಡುವುದಕ್ಕೂ ಆರಂಭಿಸಿದರು.
3 : ಇತ್ತ ಏಸಾವನ ಸಂತಾನದವರು ಇಸ್ರಯೇಲರನ್ನು ಮುತ್ತಿದರು. ಯೂದನು ಇದುಮೇಯದಲ್ಲಿದ್ದ ಅಕ್ರಬತ್ತಿನೆ ಎಂಬಲ್ಲಿ ಅವರೊಂದಿಗೆ ಯುದ್ಧಮಾಡಿ ಅವರಲ್ಲಿಯ ಬಹು ಜನರನ್ನು ಸಂಹರಿಸಿ, ಅವರ ಸೊಕ್ಕನ್ನು ಮುರಿದು, ಸೂರೆಮಾಡಿಕೊಂಡು ಹೋದನು.
4 : ಅವನು ಬೀನನ ಸಂತಾನದವರ ದುರುಳತನವನ್ನೂ ಸ್ಮರಿಸಿಕೊಂಡನು. ಅವರು ಹಾದಿಗಳಲ್ಲಿ ಹೊಂಚುಹಾಕಿ ಕೂರುತ್ತಿದ್ದರು; ಇಸ್ರಯೇಲ್ ಜನಕ್ಕೆ ದೊಡ್ಡ ಉರುಲೂ ಆತಂಕವೂ ಆಗಿದ್ದರು.
5 : ಆದುದರಿಂದ ಅವನು ಅವರನ್ನು ಅವರ ಕೊತ್ತಲಗಳಲ್ಲಿಯೇ ಬಂಧಿಸಿಟ್ಟನು; ಅವರ ಸುತ್ತಲೂ ಮುತ್ತಿಗೆ ಹಾಕಿ, ಅವರನ್ನು ನಾಶಕ್ಕೆ ಗುರಿಮಾಡಿದನು; ಅಲ್ಲಿದ್ದ ಕೊತ್ತಲಗಳಿಗೆ ಕೊಳ್ಳಿಯಿಟ್ಟು ಅವುಗಳನ್ನೂ ಅವುಗಳಲ್ಲಿ ಇದ್ದವರೆಲ್ಲರನ್ನೂ ಸುಟ್ಟುಬಿಟ್ಟನು.
6 : ಅಲ್ಲಿಂದ ಅವನು ಅಮ್ಮೋನ್ಯರ ಸೀಮೆಗೆ ಹಾದು ಹೋದನು. ಅಲ್ಲಿ ತಿಮೊಥೆಯನೆಂಬ ದಂಡನಾಯಕನ ಕೆಳಗೆ ಬಹುಜನರು ಕೂಡಿಕೊಂಡಿದ್ದು ದೊಡ್ಡದೊಂದು ದಂಡೇ ಇರುವುದನ್ನು ಕಂಡನು.
7 : ಅವನು ಅವರೊಂದಿಗೆ ಅನೇಕ ಸಾರಿ ಕಾದಾಡಿ, ಸೋಲಿಸಿ, ಕಡೆಗೆ ಅವರನ್ನು ಸಂಹರಿಸಿದನು.
8 : ಇದಲ್ಲದೆ, ಯಗೇಜರನ್ನೂ ಅದಕ್ಕೆ ಸಂಬಂಧಿಸಿದ ಊರು ಗ್ರಾಮಗಳನ್ನೂ ಕೈವಶಮಾಡಿಕೊಂಡು ಜುದೇಯಕ್ಕೆ ಹಿಂದಿರುಗಿದನು.
9 : ಇತ್ತ ಗಿಲ್ಯಾದ ಸೀಮೆಯಲ್ಲಿ ವಾಸವಾಗಿದ್ದ ಅನ್ಯಜನರು ತಮ್ಮ ಗಡಿನಾಡಿನಲ್ಲಿ ವಾಸವಾಗಿದ್ದ ಇಸ್ರಯೇಲರನ್ನು ಸಂಹರಿಸಬೇಕೆಂದು ಒಟ್ಟಾಗಿ ಕೂಡಿಕೊಂಡರು. ಅಲ್ಲಿನ ಇಸ್ರಯೇಲರು ದಾತಮಾ ದುರ್ಗಕ್ಕೆ ಓಡಿಹೋಗಿ,
10 : ಯೂದನಿಗೂ ಅವನ ಸಹೋದರರಿಗೂ ಕಾಗದಗಳನ್ನು ಕಳುಹಿಸಿ, “ನಮ್ಮ ನೆರೆಹೊರೆಯಲ್ಲಿರುವ ಅನ್ಯಜನರು ನಮ್ಮನ್ನು ಸಂಹರಿಸಬೇಕೆಂದು ಒಟ್ಟಾಗಿ ಕೂಡಿಕೊಂಡಿದ್ದಾರೆ.
11 : ಅಲ್ಲದೆ ಆಶ್ರಯಕ್ಕಾಗಿ ನಾವು ಓಡಿಬಂದಿರುವ ಈ ದುರ್ಗವನ್ನೂ ಕೈವಶಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಿಮೊಥೆಯನೆಂಬವನು ಅವರ ದಂಡಿಗೆ ನಾಯಕನಾಗಿದ್ದಾನೆ;
12 : ನಮ್ಮಲ್ಲಿಯ ಅನೇಕರು ಆಗಲೇ ಬಿದ್ದುಹೋಗಿದ್ದಾರೆ. ಈ ಕಾರಣ ಬಂದು ಅವರ ಕೈಯಿಂದ ನಮ್ಮನ್ನು ಬಿಡಿಸಿ ರಕ್ಷಣೆಮಾಡಿ.
13 : ಟೋಬ್ ಸೀಮೆಯಲ್ಲಿದ್ದ ನಮ್ಮ ಸಹೋದರರನ್ನೆಲ್ಲಾ ಕೊಂದು ಹಾಕಿ, ಅವರ ಮಡದಿಮಕ್ಕಳನ್ನು ಅವರ ಆಸ್ತಿ ಸಹಿತವಾಗಿ ಸೆರೆಹಿಡಿದುಕೊಂಡು ಹೋಗಿದ್ದಾರೆ;
14 : ಅಲ್ಲಿ ಸುಮಾರು ಸಾವಿರ ಜನ ಗಂಡಸರನ್ನು ಸಂಹರಿಸಿದ್ದಾರೆ,” ಎಂದು ತಿಳಿಸಿದರು. ಈ ಕಾಗದಗಳನ್ನು ಓದುತ್ತಿರುವಾಗಲೇ ಗಲಿಲೇಯದಿಂದ ಬೇರೆ ಸುದ್ದಿಗಾರರು, ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡವರಾಗಿ ಬಂದು, “ಪ್ತೊಲೆಮಾಯದ ಜನರೂ, ಟೈರ್, ಸಿದೋನಿನವರೂ
15 : ಅನ್ಯಜನಗಳಿರುವ ಗಲಿಲೇಯದವರೆಲ್ಲರೂ ನಮ್ಮನ್ನು ನಿರ್ಮೂಲಮಾಡಬೇಕೆಂದು ಒಟ್ಟುಗೂಡಿದ್ದಾರೆ,” ಎಂದು ತಿಳಿಸಿದರು.
16 : ಯೂದನೂ ಅವನ ಜನರೂ ಈ ಸುದ್ದಿಯನ್ನು ಕೇಳಿ, ಸಂಕಟಕ್ಕೊಳಗಾಗಿದ್ದ ಹಾಗೂ ಪರರ ದಾಳಿಗೆ ಈಡಾಗಿದ್ದ ತಮ್ಮ ಸಹೋದರರಿಗಾಗಿ ಏನು ಮಾಡಬೇಕೆಂದು ಆಲೋಚಿಸುವುದಕ್ಕಾಗಿ ದೊಡ್ಡದೊಂದು ಸಭೆಯನ್ನು ಕರೆಯಿಸಿದರು.
17 : ಆಗ ಯೂದನು ತನ್ನ ಅಣ್ಣನಾದ ಸಿಮೋನನಿಗೆ, “ನೀನು ಆಳುಗಳನ್ನು ಆಯ್ದುಕೊಂಡು ಗಲಿಲೇಯದಲ್ಲಿರುವ ನಿನ್ನ ನಾಡಿನವರನ್ನು ವಿಮೋಚನೆಮಾಡು; ನಾನೂ ತಮ್ಮನಾದ ಯೋನಾತನನೂ ಗಿಲ್ಯಾದ ಸೀಮೆಗೆ ಹೋಗುತ್ತೇವೆ,” ಎಂದು ಹೇಳಿದನು.
18 : ತರುವಾಯ ಜುದೇಯವನ್ನು ಕಾಪಾಡಿಕೊಂಡಿರುವುದಕ್ಕೂ ಜನರ ಮುಂದಾಳಾಗಿರುವುದಕ್ಕೂ ಜಕರಿಯನ ಮಗನಾದ ಜೋಸೆಫನನ್ನೂ ಅಜರ್ಯನನ್ನೂ ಇನ್ನುಳಿದ ದಂಡಿನೊಂದಿಗೆ ಅಲ್ಲಿಯೇ ಬಿಟ್ಟನು.
19 : ಅನಂತರ ಅವರಿಗೆ, “ನೀವು ಈ ಜನರನ್ನು ನೋಡಿಕೊಂಡಿರಿ; ನಾವು ತಿರುಗಿ ಬರುವವರೆಗೆ ಅನ್ಯಜನಗಳೊಂದಿಗೆ ಯುದ್ಧಹೂಡಬೇಡಿ,” ಎಂದು ಆಜ್ಞಾಪಿಸಿದನು.
20 : ಬಳಿಕ ಸಿಮೋನನೊಂದಿಗೆ ಗಲಿಲೇಯಕ್ಕೆ ಹೋಗಲು ಮೂರು ಸಾವಿರ ಜನರನ್ನೂ ಯೂದನೊಂದಿಗೆ ಗಿಲ್ಯಾದ ಸೀಮೆಗೆ ಹೋಗಲು ಎಂಟು ಸಾವಿರ ಜನರನ್ನೂ ಬೇರೆ ಬೇರೆ ಮಾಡಿದರು.
21 : ಸಿಮೋನನು ಗಲಿಲೇಯಕ್ಕೆ ಹೋಗಿ ಅನ್ಯಜನಗಳೊಂದಿಗೆ ಅನೇಕ ಯುದ್ಧಗಳನ್ನು ಮಾಡಿದನು; ಅವರು ಅವನ ಮುಂದೆ ನಿಲ್ಲಲಾಗದೆ ಸೋತುಹೋದರು.
22 : ಅವನು ಅವರನ್ನು ಪ್ತೊಲೆಮಾಯದ ಹೆಬ್ಬಾಗಿಲಿನವರೆಗೂ ಬೆನ್ನಟ್ಟಿದನು. ಅಂದು ಅನ್ಯರಲ್ಲಿ ಮೂರು ಸಾವಿರ ಜನರು ಹತರಾದರು.
23 : ಅವನು ಅವರನ್ನು ಸೂರೆ ಮಾಡಿದನು. ಅನಂತರ ಅವರು ಗಲಿಲೇಯ ಪ್ರಾಂತ್ಯದಲ್ಲಿಯೂ ಅರ್ಬಟ್ಟ ಎಂಬಲ್ಲಿಯೂ ಇದ್ದ ಯೆಹೂದ್ಯರನ್ನು, ಅವರ ಮಡದಿಮಕ್ಕಳು, ಆಸ್ತಿಪಾಸ್ತಿ ಮೊದಲಾದವುಗಳೊಂದಿಗೆ ಕರೆದುಕೊಂಡು ಬಹು ಸಂಭ್ರಮದಿಂದ ಜುದೇಯಕ್ಕೆ ಹಿಂದಿರುಗಿ ಬಂದರು.
24 : ಯೂದಮಕ್ಕಬಿಯನು ಮತ್ತು ಅವನ ತಮ್ಮ ಯೋನಾತನನು ಜೋರ್ಡನ್ ನದಿಯನ್ನು ದಾಟಿ,
25 : ಮೂರು ದಿನ ಮರುಭೂಮಿಯಲ್ಲಿ ಪ್ರಯಾಣ ಮಾಡಿದನಂತರ ನಬತಾಯರನ್ನು ಸಂಧಿಸಿದರು; ಅವರು ಸಮಾಧಾನದಿಂದ ಇವರ ಬಳಿಗೆ ಬಂದು, ಗಿಲ್ಯಾದ ಪ್ರಾಂತ್ಯದಲ್ಲಿದ್ದ ಇವರ ಸಹೋದರರಿಗೆ ಸಂಭವಿಸಿದುದೆಲ್ಲವನ್ನೂ ತಿಳಿಯಪಡಿಸಿದರು.
26 : ಅವರಲ್ಲಿ ಅನೇಕರು, ಬೋಚ್ರ, ಬೊಸೋರ್, ಎಲೆಮ, ಕಾಸ್ಫೋರ್, ಮಾಕೇಡ್ ಮತ್ತು ಕರ್ನಯಿಮ್ ಎಂಬೀ ಪ್ರಬಲವಾದ ಮಹಾನಗರಗಳಲ್ಲಿ ಹೇಗೆ ಬಂಧಿತರಾದರೆಂಬುದನ್ನು, ಅವರು ಗಿಲ್ಯಾದ್ ಪ್ರಾಂತ್ಯದ ಉಳಿದ ಪಟ್ಟಣಗಳಲ್ಲಿ ಹೇಗೆ ತಡೆಹಾಕಲ್ಪಟ್ಟರೆಂಬುದನ್ನು
27 : ಹಾಗು ನಾಳಿನ ದಿನವೇ ಶತ್ರುಗಳು ಅವರ ದುರ್ಗಗಳ ಬಳಿ ಬೀಡುಬಿಟ್ಟುಕೊಂಡು ಅವರನ್ನು ಹಿಡಿದು ಒಂದೇ ದಿನದಲ್ಲಿ ಸಂಹರಿಸಿಬಿಡಬೇಕೆಂದಿದ್ದಾರೆ ಎಂಬುದನ್ನೂ ವಿವರಿಸಿದರು.
28 : ಇದನ್ನು ಕೇಳಿ ಯೂದನೂ ಅವನ ಯೋಧರೂ ಇದ್ದಕ್ಕಿದ್ದಂತೆಯೇ ಅರಣ್ಯಮಾರ್ಗವಾಗಿ ಬೋಚ್ರದ ಕಡೆಗೆ ತಿರುಗಿ ಆ ಪಟ್ಟಣವನ್ನು ಹಿಡಿದುಕೊಂಡರು. ಅಲ್ಲಿದ್ದ ಗಂಡಾಳುಗಳನ್ನೆಲ್ಲಾ ಕತ್ತಿಯಿಂದ ಸಂಹರಿಸಿದರು. ಆ ಪಟ್ಟಣವನ್ನು ಸುಟ್ಟುಬಿಟ್ಟರು.
29 : ತರುವಾಯ ಅವನು ರಾತ್ರಿಯಲ್ಲಿಯೇ ಅಲ್ಲಿಂದ ಹೊರಟು ದಾತೆಮಾ ದುರ್ಗವನ್ನು ಮುಟ್ಟುವವರೆಗೆ ಪ್ರಯಾಣ ಮಾಡಿದನು.
30 : ಹೊತ್ತುಹರಿದಾಗ ಅವರು ಕಣ್ಣೆತ್ತಿ ನೋಡಲು, ಏಣಿಗಳನ್ನೂ ಯುದ್ಧ ಯಂತ್ರಗಳನ್ನೂ ಸಜ್ಜುಮಾಡಿಕೊಂಡು ಆ ದುರ್ಗವನ್ನು ಹಿಡಿದುಕೊಳ್ಳಬೇಕೆಂದು ಅಲ್ಲಿದ್ದವರ ಮೇಲೆ ಯುದ್ಧಮಾಡುತ್ತಿದ್ದ ಅಸಂಖ್ಯ ಜನರ ಗುಂಪೊಂದು ಅವರ ಕಣ್ಣಿಗೆ ಬಿದ್ದಿತು.
31 : ಯೂದನು, ಯುದ್ಧವು ಆಗಲೇ ಆರಂಭವಾಗಿದ್ದುದನ್ನೂ ತುತೂರಿಯ ಧ್ವನಿಯೂ ಪಟ್ಟಣದವರ ಆರ್ತಸ್ವರವೂ ಆಕಾಶಕ್ಕೆ ಏರುತ್ತಿರುವುದನ್ನೂ ಕಂಡನು.
32 : ತನ್ನ ಸೈನಿಕರಿಗೆ, “ಇಂದು ನಿಮ್ಮ ಸಹೋದರರ ಪರವಾಗಿ ಹೋರಾಡಿ,” ಎಂದು ಹೇಳಿದನು.
33 : ತರುವಾಯ ಅವನು ಅವರನ್ನು ಮೂರು ಗುಂಪುಮಾಡಿ, ಶತ್ರುಗಳ ಮೇಲೆ ದಾಳಿಮಾಡಹೋದನು. ಆಗ ಅವರು ತುತೂರಿಗಳನ್ನು ಊದಿ ದೇವರ ಹೆಸರನ್ನೆತ್ತಿ ಆರ್ಭಟಿಸಿದರು.
34 : ತಿಮೊಥೆಯನ ಸೈನ್ಯವು, ತಮ್ಮ ಹಿಂದೆ ಬಂದುದು ಮಕ್ಕಬಿಯನ ಸೈನ್ಯವೆಂದು ಅರಿತೊಡನೆ, ಅಲ್ಲಿಂದ ಪಲಾಯನ ಮಾಡಿತು. ಯೂದನು ಬಹುಜನರನ್ನು ಸಂಹರಿಸಿದನು. ಅಂದು ಅವರಲ್ಲಿ ಎಂಟು ಸಾವಿರ ಜನರು ಹತರಾದರು.
35 : ಅಲ್ಲಿಂದ ಅವನು ಮಾಫದ ಕಡೆಗೆ ತಿರುಗಿಕೊಂಡು ಯುದ್ಧಮಾಡಿ ಅದನ್ನು ಕೈವಶಮಾಡಿಕೊಂಡು ಅಲ್ಲಿದ್ದ ಗಂಡಸರನ್ನೆಲ್ಲಾ ಸಂಹರಿಸಿ, ಅದನ್ನು ಸುಲಿಗೆಮಾಡಿ, ಸುಟ್ಟು ಬಿಟ್ಟನು.
36 : ಅಲ್ಲಿಂದ ಅವನು ಹೊರಟು ಗಿಲ್ಯಾದ ಸೀಮೆಯಲ್ಲಿದ್ದ ಕಾಸ್ಫೋರ್, ಮಾಕೇಡ್, ಬೊಸೋರ್ ಮುಂತಾದ ಪಟ್ಟಣಗಳನ್ನು ಹಿಡಿದುಕೊಂಡನು.
37 : ಇವುಗಳಾದ ಮೇಲೆ ತಿಮೊಥೆಯನು ಮತ್ತೊಂದು ದಂಡನ್ನು ಕೂಡಿಸಿಕೊಂಡು ಹಳ್ಳದ ಆಚೆಯಿದ್ದ ರಾಫೋನಿನ ಎದುರಾಗಿ ಇಳಿದುಕೊಂಡನು.
38 : ಯೂದನು ಆ ಸೈನ್ಯದ ರಹಸ್ಯವನ್ನು ತಿಳಿದುಕೊಂಡುಬರಲು ಜನರನ್ನು ಕಳುಹಿಸಿದನು. ಅವರು, “ನಮ್ಮ ಸುತ್ತಮುತ್ತಲಿರುವ ಅನ್ಯಜನಗಳೆಲ್ಲಾ ಅವರನ್ನು ಕೂಡಿಕೊಂಡಿದ್ದಾರೆ; ಅತಿ ದೊಡ್ಡದಾದ ಸೈನ್ಯವದು.
39 : ಇದಲ್ಲದೆ, ತಮ್ಮ ನೆರವಿಗಾಗಿ ಅರಬ್ಬಿಯರನ್ನು ಸಂಬಳ ಕೊಟ್ಟು ಇಟ್ಟುಕೊಂಡಿದ್ದಾರೆ; ಅವರೆಲ್ಲಾ ಹಳ್ಳದ ಆಚೆ ಬೀಡುಬಿಟ್ಟುಕೊಂಡಿದ್ದು ನಿಮ್ಮ ಮೇಲೆ ಯುದ್ಧಕ್ಕೆ ಬರಲು ಸಿದ್ಧರಾಗಿದ್ದಾರೆ,” ಎಂದು ಹೇಳಿದರು. ಆಗ ಯೂದನು ಅವರನ್ನು ಸಂಧಿಸಲು ಹೋದನು.
40 : ಯೂದನೂ ಅವನ ಸೈನ್ಯದವರೂ ಹಳ್ಳದ ಸಮೀಪಕ್ಕೆ ಬಂದಾಗ ತಿಮೊಥೆಯನು ತನ್ನ ದಳವಾಯಿಗಳಿಗೆ, “ಅವನು ಮುಂದಾಗಿ ಹಳ್ಳವನ್ನು ದಾಟಿ, ನಮ್ಮ ಕಡೆಗೆ ಬಂದಲ್ಲಿ ಅವನನ್ನು ಎದುರಿಸಲು ನಾವು ಶಕ್ತರಾಗುವುದಿಲ್ಲ; ಏಕೆಂದರೆ ಅವನು ನಮ್ಮನ್ನು ಪೂರ್ತಿಯಾಗಿ ಸೋಲಿಸುವನು.
41 : ಆದರೆ ಅವನು ಅಂಜಿಕೊಂಡು ಹಳ್ಳದ ಆಚೆಯೇ ದಂಡಿಳಿಸಿದಲ್ಲಿ, ನಾವು ಅವನ ಕಡೆಗೆ ದಾಟಿ ಹೋಗಿ ಅವನನ್ನು ಹತ್ತಿಕ್ಕೋಣ,” ಎಂದು ಹೇಳಿದನು.
42 : ಯೂದನು ಹಳ್ಳದ ಸಮೀಪಕ್ಕೆ ಬಂದಾಗ ಸಹಾಯಕ ಅಧಿಕಾರಿಗಳನ್ನು ಹಳ್ಳದ ಬದಿಯಲ್ಲಿಯೇ ಇರುವಂತೆ ಮಾಡಿ ಅವರಿಗೆ, “ಒಬ್ಬನೂ ಇಲ್ಲಿ ನೆಲಸದಂತೆ ನೋಡಿಕೊಳ್ಳಿ, ಎಲ್ಲರೂ ಯುದ್ಧಕ್ಕೆ ಬರಲಿ,” ಎಂದು ಅಪ್ಪಣೆಕೊಟ್ಟು, ತಾನು ಮುಂದಾಗಿ ಹಳ್ಳವನ್ನು ದಾಟಿದನು.
43 : ಅವನ ಹಿಂದೆ ಎಲ್ಲ ಜನರೂ ದಾಟಿದರು. ಅನ್ಯಜನಗಳು ಎಲ್ಲರೂ ಅವನ ಮುಂದೆ ನಿಲ್ಲದೆ ಸೋತು ತಮ್ಮ ಆಯುಧಗಳನ್ನೆಲ್ಲಾ ಬಿಸಾಡಿ, ಕರ್ನಯಿಮ್ ಎಂಬಲ್ಲಿದ್ದ ಗುಡಿಯ ಕಡೆಗೆ ಓಡಿಹೋದರು.
44 : ಯೂದನ ಜನರು ಪಟ್ಟಣವನ್ನು ಹಿಡಿದುಕೊಂಡು ಆ ಗುಡಿಯನ್ನು ಅದರಲ್ಲಿದ್ದವರೊಂದಿಗೆ ಸುಟ್ಟುಬಿಟ್ಟರು. ಅಲ್ಲಿದ್ದವರಿಗೆ ಯೂದನ ಮುಂದೆ ಹೆಚ್ಚುಕಾಲ ತಡೆಯುವುದಕ್ಕಾಗಲಿಲ್ಲ. ಕರ್ನಯಿಮ್ ಕೈವಶವಾಯಿತು.
45 : ತರುವಾಯ ಯೂದನು ಗಿಲ್ಯಾದ ಸೀಮೆಯಲ್ಲಿದ್ದ ಇಸ್ರಯೇಲರೆಲ್ಲರು ತಮ್ಮ ಮಡದಿ ಮಕ್ಕಳು ಮತ್ತು ಸೊತ್ತು ಸಹಿತವಾಗಿ ಜುದೇಯ ನಾಡಿಗೆ ಬರಬೇಕೆಂದು ಹೇಳಿ ಅವರಲ್ಲಿ ಉಚ್ಚರು, ನೀಚರು ಎನ್ನದೆ ಎಲ್ಲರನ್ನೂ ಒಟ್ಟಿಗೆ ಸೇರಿಸಿದನು; ಅವರದೊಂದು ದೊಡ್ಡ ಗುಂಪೇ ಆಯಿತು. ಅವರೆಲ್ಲರು ಎಫ್ರೋನದ ಕಡೆಗೆ ಬಂದರು.
46 : ಈ ಪಟ್ಟಣವು ದೊಡ್ಡದೂ ದುರ್ಗಮಯವೂ ಆಗಿದ್ದು, ಅವರು ಹೋಗಲಿದ್ದ ಹಾದಿಯಲ್ಲಿಯೇ ಇದ್ದಿತು. ಅವರು ಅದನ್ನು ಬಿಟ್ಟು ಬಲಕ್ಕಾದರೂ ಎಡಕ್ಕಾದರೂ ಹೋಗಲಿಕ್ಕೆ ಆಗುತ್ತಿರಲಿಲ್ಲ. ಅದರ ನಡುವೆಯೇ ಹಾದುಹೋಗಬೇಕಾಗಿತ್ತು.
47 : ಆದರೆ ಆ ಪಟ್ಟಣಿಗರು ಅವರಿಗೆದುರಾಗಿ ತಮ್ಮ ಹೆಬ್ಬಾಗಿಲುಗಳನ್ನು ಮುಚ್ಚಿ, ಅವುಗಳನ್ನು ಬಂಡೆಗಳಿಂದ ಭದ್ರಪಡಿಸಿದರು.
48 : ಯೂದನು ಅವರಿಗೆ, “ನಮ್ಮ ನಾಡಿಗೆ ಹೋಗುವ ಈ ವೇಳೆಯಲ್ಲಿ ನಿಮ್ಮ ಸೀಮೆಯನ್ನು ಹಾಯ್ದು ಹೋಗುತ್ತೇವೆ, ಅಷ್ಟೇ; ನಿಮಗೆ ಯಾವ ಕೇಡನ್ನೂ ಮಾಡುವುದಿಲ್ಲ; ನಾವು ಕಾಲುನಡಿಗೆಯಿಂದಲೇ ಹೋಗುತ್ತೇವೆ,” ಎಂದು ಸಮಾಧಾನದ ಮಾತುಗಳನ್ನು ಹೇಳಿ ಕಳುಹಿಸಿದನು. ಆದರೂ ಅವರು ಬಾಗಿಲನ್ನು ತೆರೆಯಲೇ ಇಲ್ಲ.
49 : ಬಳಿಕ ಯೂದನು, “ಜನಸ್ತೋಮವೆಲ್ಲಾ ತಾವಿರುವಲ್ಲಿಯೇ ಬಿಡಾರ ಮಾಡಿಕೊಳ್ಳಲಿ,” ಎಂದು ತನ್ನ ದಂಡಿನಲ್ಲಿ ಸಾರಿಹೇಳಲು ಆಜ್ಞಾಪಿಸಿದನು.
50 : ಆ ಸೈನಿಕರು ಬೀಡುಬಿಟ್ಟುಕೊಂಡು ಆ ದಿನ ಹಗಲೂ ಇರುಳೂ ಆ ಪಟ್ಟಣದ ಮೇಲೆ ದಾಳಿಮಾಡಿದರು. ಅದು ಅವರ ಕೈವಶವಾಯಿತು.
51 : ಅವನು ಅಲ್ಲಿದ್ದ ಗಂಡಸರನ್ನೆಲ್ಲಾ ಕತ್ತಿಯಿಂದ ಸಂಹರಿಸಿದನು ಮತ್ತು ಪಟ್ಟಣವನ್ನು ನಿರ್ಮೂಲಮಾಡಿ, ಅಲ್ಲಿ ಇದ್ದುದನ್ನೆಲ್ಲಾ ದೋಚಿಕೊಂಡು, ಅಲ್ಲಿ ಮಡಿದವರ ಶವಗಳನ್ನು ದಾಟಿ ಪಟ್ಟಣದೊಳಗೆ ಹಾದು ಹೋದನು.
52 : ಆಮೇಲೆ ಅವರು ಜೋರ್ಡನ್ ಹೊಳೆಯನ್ನು ದಾಟಿ, ಬೇತ್‍ಶಾನದ ಎದುರಿಗಿರುವ ದೊಡ್ಡ ಬಯಲಿಗೆ ಬಂದು ತಲುಪಿದರು.
53 : ಅಲ್ಲಿಂದ ಜುದೇಯ ಪ್ರಾಂತ್ಯವನ್ನು ಮುಟ್ಟುವವರೆಗೆ, ಹಿಂದೆ ಬಿದ್ದವರನ್ನು ಕೂಡಿಸಿಕೊಳ್ಳುತ್ತಾ ಜನರನ್ನು ಹುರಿದುಂಬಿಸುತ್ತಾ ಬಂದನು.
54 : ಅವರು ಆನಂದೊಲ್ಲಾಸದಿಂದ ಸಿಯೋನ್ ಗಿರಿಯ ಮೇಲೆ ಏರಿ, ತಾವೆಲ್ಲಾ ಸಮಾಧಾನದಿಂದ ಹಿಂದಿರುಗಿ ಬರುವವರೆಗೆ ತಮ್ಮಲ್ಲಿ ಒಬ್ಬರೂ ಅಳಿಯದೆ ಇದ್ದುದನ್ನು ಸ್ಮರಿಸಿಕೊಂಡು ದಹನಬಲಿದಾನಗಳನ್ನು ಸಮರ್ಪಿಸಿದರು.
55 : ಯೂದನೂ ಯೋನಾತನನೂ ಗಿಲ್ಯಾದ ಸೀಮೆಯಲ್ಲಿ ಹಾಗು ಅವನ ಅಣ್ಣ ಸಿಮೋನನು ಪ್ತೊಲೆಮಾಯನ ವಿರುದ್ಧ ಗಲಿಲೇಯದಲ್ಲಿ ಹೋರಾಡುತ್ತಿದ್ದರು.
56 : ಆಗ ದುರ್ಗರಕ್ಷಕರ ನಾಯಕರಾಗಿದ್ದ ಜಕರಿಯನ ಮಗ ಜೋಸೆಫನು ಮತ್ತು ಅಜರ್ಯನು ಅವರು ಮಾಡಿದ ಸಾಹಸ, ಯುದ್ಧ ಮೊದಲಾದ ಎಲ್ಲ ಕಾರ್ಯಗಳ ಸಮಾಚಾರ ಕೇಳಿದ್ದರು.
57 : “ನಾವೂ ಹೆಸರು ಗಳಿಸೋಣ, ನಮ್ಮ ನೆರೆಹೊರೆಯಲ್ಲಿರುವ ಅನ್ಯ ಜನಗಳ ಸಂಗಡ ಯುದ್ಧಮಾಡೋಣ,” ಎಂದುಕೊಂಡರು.
58 : ತಮ್ಮ ಬಳಿಯಲ್ಲಿದ್ದ ಸೈನಿಕರಿಗೆ ಅಪ್ಪಣೆಕೊಟ್ಟು ಯಮ್ಮಿಲಿಯದ ಕಡೆಗೆ ನಡೆದರು.
59 : ಗೊರ್ಗಿಯನೂ ಅವನ ಜನರೂ ಅವರೊಂದಿಗೆ ಯುದ್ಧಮಾಡಲು ಪಟ್ಟಣದ ಹೊರಗೆ ಬಂದರು.
60 : ಜೋಸೆಫ ಮತ್ತು ಅಜರ್ಯ ಪಲಾಯನ ಮಾಡಿದುದಲ್ಲದೆ ಜುದೇಯದ ಗಡಿಯವರೆಗೂ ಬೆನ್ನಟ್ಟಲ್ಪಟ್ಟರು. ಅಂದು ಇಸ್ರಯೇಲರಲ್ಲಿ ಸುಮಾರು ಎರಡು ಸಾವಿರ ಜನರು ಹತರಾದರು.
61 : ಅವರು ಯೂದನ ಮತ್ತು ಅವನ ಸಹೋದರರ ಮಾತನ್ನು ಕೇಳದೆ, ತಾವೇ ಸಾಹಸಮಾಡಲು ಆಶೆಪಟ್ಟಿದ್ದರಿಂದ, ಜನರು ಈ ಅನಾಹುತಕ್ಕೆ ಒಳಗಾಗಬೇಕಾಯಿತು
62 : ಏಕೆಂದರೆ, ಯಾರ ಕೈಯಿಂದ ಇಸ್ರಯೇಲರಿಗೆ ಬಿಡುಗಡೆ ಉಂಟಾಯಿತೋ ಅವರ ಬುಡಕಟ್ಟಿಗೆ ಇವರು ಸೇರಿದವರಾಗಿರಲಿಲ್ಲ.
63 : ಯೂದನೂ ಅವನ ಸಹೋದರರೂ ಎಲ್ಲ ಇಸ್ರಯೇಲರ ದೃಷ್ಟಿಯಲ್ಲಿ ಹಾಗು ಅವರ ಹೆಸರನ್ನು ಕೇಳಿದ ಎಲ್ಲ ಅನ್ಯಜನಗಳ ದೃಷ್ಟಿಯಲ್ಲಿ ದೊಡ್ಡ ಗೌರವಕ್ಕೆ ಪಾತ್ರರಾದರು.
64 : ಜನರು ಜಯಘೋಷದಿಂದ ಅವರನ್ನು ಸಂಧಿಸಲು ಬರುತ್ತಿದ್ದರು.
65 : ಯೂದನೂ ಅವನ ಸಹೋದರರೂ ಏಸಾವನ ಸಂತತಿಯವರ ವಿರುದ್ಧ ದಂಡೆತ್ತಿ ಹೋಗಿ ಅವರೊಂದಿಗೆ ದಕ್ಷಿಣ ಸೀಮೆಯಲ್ಲಿ ಯುದ್ಧಮಾಡಿದರು. ಯೂದನು ಹೆಬ್ರೋನಿನ ಹಾಗು ಅದರ ನೆರೆಯಲ್ಲಿದ್ದ ಹಳ್ಳಿಗಳ ಮೇಲೆ ದಾಳಿಮಾಡಿ, ಅದರ ದುರ್ಗಗಳನ್ನು ಕೆಡವಿ, ಸುತ್ತಮುತ್ತಲಿದ್ದ ಬುರುಜುಗಳನ್ನು ಸುಟ್ಟುಬಿಟ್ಟನು.
66 : ಅಲ್ಲಿಂದ ಫಿಲಿಷ್ಟಿಯರ ಸೀಮೆಗೆ ಹೋಗಬೇಕೆಂದು ಹೊರಟು ಸಮಾರಿಯವನ್ನು ಹಾದುಹೋದನು.
67 : ಆ ದಿನದಲ್ಲಿ ಕೆಲವು ಜನ ಯಾಜಕರು, ಸಾಹಸಕಾರ್ಯಗಳನ್ನು ಮಾಡುವ ಆಶೆಯಿಂದ, ಮುಂದಾಲೋಚನೆಯಿಲ್ಲದೆ ಯುದ್ಧಕ್ಕೆ ಹೋಗಿ ಹತರಾದರು.
68 : ಯೂದನು ಫಿಲಿಷ್ಟಿಯರ ಸೀಮೆಯಲ್ಲಿರುವ ಅಜೋತಿನ ಕಡೆಗೆ ತಿರುಗಿಕೊಂಡು, ಅವರ ಬಲಿಪೀಠಗಳನ್ನು ಕೆಡವಿ, ಅವರ ದೇವರುಗಳ ವಿಗ್ರಹಗಳನ್ನು ಸುಟ್ಟು, ಪಟ್ಟಣಗಳನ್ನು ಸುಲಿದುಕೊಂಡು, ಜುದೇಯ ನಾಡಿಗೆ ಹಿಂದಿರುಗಿ ಬಂದನು.

· © 2017 kannadacatholicbible.org Privacy Policy