Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ಅರಸ ದೆಮೆತ್ರಿಯನ ಮಗ ಅಂತಿಯೋಕನು, ಯಾಜಕನೂ ಯೆಹೂದ್ಯರ ಜನಪಾಲಕನೂ ಆಗಿದ್ದ ಸಿಮೋನನಿಗೂ ಇಡೀ ಜನಾಂಗಕ್ಕೂ, ಸಮುದ್ರದ ದ್ವೀಪಗಳಿಂದ ಪತ್ರಗಳನ್ನು ಕಳುಹಿಸಿದನು.
2 : ಅವುಗಳಲ್ಲಿದ್ದ ಸಂಗತಿ ಈ ವಿಧವಾಗಿದ್ದಿತು: “ಪ್ರಧಾನಯಾಜಕನೂ ಜನಪಾಲಕನೂ ಆದ ಸಿಮೋನನಿಗೂ ಯೆಹೂದ್ಯ ಜನಾಂಗಕ್ಕೂ ಅರಸ ಅಂತಿಯೋಕನು ಮಾಡುವ ಅಭಿವಂದನೆಗಳು!
3 : ಕೆಲವು ಜನ ಪುಂಡರು ನಮ್ಮ ಪೂರ್ವಜರ ರಾಜ್ಯವನ್ನು ತಮ್ಮ ವಶಮಾಡಿಕೊಂಡಿದ್ದಾರೆ; ಆ ರಾಜ್ಯವನ್ನು ಪುನಃ ತೆಗೆದುಕೊಂಡು ಅದನ್ನು ಪೂರ್ವಸ್ಥಿತಿಗೆ ತರಬೇಕೆಂಬುದು ನನ್ನ ಉದ್ದೇಶವಾಗಿದೆ. ಅದಕ್ಕಾಗಿ ವಿದೇಶಿಯ ಸೈನಿಕರ ಒಂದು ದಂಡನ್ನು ಕೂಡಿಸಿದ್ದೇನೆ ಮತ್ತು ಯುದ್ಧದ ಹಡಗುಗಳನ್ನೂ ತಯಾರಿಸಿಕೊಂಡಿದ್ದೇನೆ
4 : ಮೇಲಾಗಿ, ನಮ್ಮ ದೇಶವನ್ನು ನಾಶಮಾಡಿ, ರಾಜ್ಯದಲ್ಲಿ ಅನೇಕ ನಗರಗಳನ್ನು ಹಾಳುಗೈದಿರುವವರನ್ನು ದಂಡಿಸುವುದಕ್ಕಾಗಿ ಆ ದೇಶದಲ್ಲಿ ಕಾಲಿಡಬೇಕೆಂದು ನಾನು ಮನಸ್ಸು ಮಾಡಿದ್ದೇನೆ.
5 : ಆದುದರಿಂದ ನನ್ನ ಹಿಂದೆ ರಾಜ್ಯವಾಳಿದ ಅರಸರುಗಳು ಯಾವ ಕರ, ಕಂದಾಯ, ಕಾಣಿಕೆಗಳನ್ನು ನಿನಗೆ ಬಿಟ್ಟುಕೊಟ್ಟಿರುವರೋ ಅವೆಲ್ಲವುಗಳನ್ನು ನಾನೂ ಬಿಟ್ಟುಕೊಟ್ಟಿರುವೆನು.
6 : ನಿನ್ನ ನಾಡಿಗಾಗಿ ಬೇಕಾದ ನಾಣ್ಯಗಳನ್ನು ನಿನ್ನ ಮುದ್ರೆಯಿಂದಲೇ ತಯಾರಿಸಿಕೊಳ್ಳುವಂತೆ ನಿನಗೆ ಅನುಮತಿ ಕೊಡುತ್ತೇನೆ.
7 : ಜೆರುಸಲೇಮ್ ಹಾಗು ಮಹಾದೇವಾಲಯವು ಸ್ವತಂತ್ರವಾಗಿರಬೇಕು. ನೀನು ತಯಾರಿಸಿಕೊಂಡ ಆಯುಧಗಳೂ ನೀನು ಕಟ್ಟಿಸಿದ ಮತ್ತು ಈಗ ನಿನ್ನ ವಶದಲ್ಲಿರುವ ದುರ್ಗಗಳೂ ನಿನ್ನವು ಆಗಿಯೇ ಇರಲಿ.
8 : ಈಗ ಅರಸನಿಗೆ ಸಲ್ಲತಕ್ಕದ್ದೂ, ಮುಂದೆ ಎಂದೆಂದಿಗೂ ಅವನಿಗೆ ಸಲ್ಲಬೇಕಾದದ್ದೂ ಎಲ್ಲವೂ ನಿನಗೇ ಸಂದಾಯವಾಗಲಿ.
9 : ಮೇಲಾಗಿ ನಾವು ನಮ್ಮ ರಾಜ್ಯವನ್ನು ಸ್ಥಿರಗೊಳಿಸಿದನಂತರ ನಿನ್ನ ಕೀರ್ತಿಯು ಜಗತ್ತಿನಲ್ಲೆಲ್ಲಾ ಬೆಳಗುವಂತೆ ನಿನ್ನನ್ನೂ ನಿನ್ನ ಜನಾಂಗವನ್ನೂ ಪವಿತ್ರಾಲಯವನ್ನೂ ಪುರಸ್ಕರಿಸುತ್ತೇವೆ.”
10 : 174ನೇ ವರ್ಷ ಅಂತಿಯೋಕನು ಹೊರಟು ತನ್ನ ಪೂರ್ವಜರ ನಾಡಿಗೆ ಬಂದನು. ಎಲ್ಲ ಸೈನಿಕರೂ ಅವನನ್ನು ಕೂಡಿಕೊಂಡರು; ತ್ರಿಫೋನನ ಹತ್ತಿರ ಕೆಲವೇ ಜನರು ಉಳಿದುಕೊಂಡರು.
11 : ಅರಸ ಅಂತಿಯೋಕನು ಅವನನ್ನು ಬೆನ್ನಟ್ಟಿದ್ದರಿಂದ ಅವನು ಪಲಾಯನ ಮಾಡುತ್ತಾ ಸಮುದ್ರದ ಬಳಿಯಲ್ಲಿರುವ ಡೋರಕ್ಕೆ ಬಂದನು.
12 : ಏಕೆಂದರೆ ಕಷ್ಟಗಳು ತನ್ನ ಮೇಲೆ ಬಂದೆರಗಿವೆ ಎಂಬುದನ್ನೂ ತನ್ನ ಸೈನಿಕರು ತನ್ನನ್ನು ಬಿಟ್ಟು ಹೋದರೆಂಬುದನ್ನೂ ಅವನು ಅರಿತಿದ್ದನು.
13 : ಅಂತಿಯೋಕನು ಡೋರದ ಎದುರಾಗಿ ಪಾಳೆಯ ಮಾಡಿದನು. ಅವನ ಬಳಿಯಲ್ಲೇ ಒಂದು ಲಕ್ಷ ಇಪ್ಪತ್ತು ಸಾವಿರ ಯೋಧರೂ ಎಂಟು ಸಾವಿರ ರಾಹುತರೂ ಇದ್ದರು.
14 : ಅವನು ಪಟ್ಟಣವನ್ನು ಸುತ್ತಲೂ ಮುತ್ತಿದನು. ಹಡಗು ಪಡೆಯು ಸಮುದ್ರದ ಮೇಲಿಂದ ಹಲ್ಲೆಯಲ್ಲಿ ಕೂಡಿಕೊಂಡಿತು. ಹೀಗೆ ಅವರು ಭೂಮಿಯ ಕಡೆಯಿಂದಲೂ ಸಮುದ್ರದ ಕಡೆಯಿಂದಲೂ ಪಟ್ಟಣವನ್ನು ಮುತ್ತಿ, ಹೊರಗೆ ಹೋಗುವುದಕ್ಕಾಗಲಿ ಒಳಗೆ ಬರಲಿಕ್ಕಾಗಲಿ ಯಾರಿಗೂ ಅವಕಾಶ ಕೊಡಲಿಲ್ಲ.
15 : ನುಮೆನಿಯನು ಹಾಗು ಅವನ ಸಂಗಡಿಗರು ರೋಮಿನಿಂದ ಅರಸರುಗಳಿಗೂ ದೇಶಗಳಿಗೂ ಪತ್ರಗಳನ್ನು ತೆಗೆದುಕೊಂಡು ಬಂದರು. ಅವುಗಳಲ್ಲಿ ಹೀಗೆ ಬರೆದಿತ್ತು:
16 : “ರಾಜನಾದ ಪ್ತೊಲೆಮೇಯನಿಗೆ ಮುಖ್ಯಾಧಿಕಾರಿಯಾದ ಲೂಸ್ಯನು ಮಾಡುವ ಅಭಿವಂದನೆಗಳು
17 : ತರುವಾಯ, ಹಿಂದಿನ ಮೈತ್ರಿಯನ್ನೂ ಸಂಬಂಧವನ್ನೂ ನೂತನಗೊಳಿಸುವುದಕ್ಕೆ ಸಿಮೋನನಿಂದಲೂ ಯೆಹೂದ್ಯ ಜನರಿಂದಲೂ ಯೆಹೂದ್ಯ ರಾಯಭಾರಿಗಳು ನಮ್ಮ ಸ್ನೇಹಿತರಂತೆ ಹಾಗು ಸಹ ಪಕ್ಷದವರಂತೆ ನಮ್ಮ ಬಳಿಗೆ ಬಂದರು.
18 : ಮೇಲಾಗಿ, ಅರ್ಧ ಟನ್ ತೂಕದ ಬಂಗಾರದ ಗುರಾಣಿಯನ್ನು ತಂದರು.
19 : ಆದುದರಿಂದ ನಾವು ಆಯಾ ಅರಸುಗಳಿಗೂ ದೇಶಗಳವರಿಗೂ ಪತ್ರ ಬರೆದು ನೀವಾರೂ ಅವರಿಗೆ ಕೇಡು ಬಗೆಯಬಾರದು, ಅವರೊಂದಿಗೂ ಅವರ ಪಟ್ಟಣಗಳ ಮತ್ತು ದೇಶದ ಮೇಲೆಯೂ ಯುದ್ಧ ಹೂಡಬಾರದು; ಅವರೊಂದಿಗೆ ಯುದ್ಧ ಮಾಡುವವರ ಪಕ್ಷವಹಿಸಬಾರದು ಎಂದು ತೀರ್ಮಾನಿಸಿದೆವು.
20 : ಇದಲ್ಲದೆ, ಅವರು ಕಳುಹಿಸಿದ ಗುರಾಣಿಯನ್ನು ಸ್ವೀಕರಿಸುವುದು ನಮಗೆ ಉಚಿತವೆನಿಸಿತು.
21 : ಆದುದರಿಂದ ಪುಂಡರು ಯಾರಾದರೂ ಅವರ ದೇಶದಿಂದ ನಿಮ್ಮ ಕಡೆಗೆ ಓಡಿಬಂದಿದ್ದರೆ ಅವರನ್ನು ಪ್ರಧಾನಯಾಜಕ ಸಿಮೋನನಿಗೆ ಒಪ್ಪಿಸಿಕೊಡಿ; ಅವನು ತಮ್ಮ ನಿಯಮದ ಪ್ರಕಾರ ಅವರನ್ನು ದಂಡಿಸಲಿ.”
22 : ಇದೇ ಸಂಗತಿಯನ್ನು ಅವನು, ಅರಸ ದೆಮೆತ್ರಿಯನಿಗೂ ಅತ್ತಲ, ಅರಥಿ, ಆರ್ಸಕಿ ಎಂಬ ರಾಜರಿಗೂ ನಾನಾ ದೇಶಗಳಿಗೂ ಬರೆದನು;
23 : ಅವು ಯಾವುವೆಂದರೆ, ಸಂಪ್ಸಕೆ, ಸ್ಪಾರ್ಟರದೇಶ, ದೀಲೊಸ್, ಮಿಂದೊಸ್, ಸಿಕ್ಯೋನ್, ಕಾರಿಯ, ಸಾಮೊಸ್, ಪಂಫೀಲಿಯ, ಲೀಸಿಯ, ಹಲಿಕಾರ್ಣಸಸ್ಸ್, ಕೋಸ್, ಸೀದೆ, ಅರಡ, ರೋದ, ಫಸೇಲಿ, ಗೊರ್ತುನ, ಕ್ವೀದ, ಸೈಪ್ರಸ್, ಸಿರೇನ್ ಇವುಗಳೇ.
24 : ಅದರ ಪ್ರತಿಯನ್ನು ಪ್ರಧಾನ ಯಾಜಕ ಸಿಮೋನನಿಗೆ ಕಳುಹಿಸಿದನು.
25 : ಸಿಮೋನನಿಂದ ಬೇರ್ಪಡೆಯಾದ ಅಂತಿಯೋಕ ಅರಸ ಅಂತಿಯೋಕನು ಎರಡನೆಯ ಸಲ ಡೋರದ ಎದುರು ಪಾಳೆಯ ಮಾಡಿಕೊಂಡು ಪ್ರತಿನಿತ್ಯವೂ ತನ್ನ ಸೈನ್ಯವನ್ನು ಅದರ ಮೇಲೆ ಬಿಡುತ್ತಾ ಯುದ್ಧಯಂತ್ರಗಳನ್ನು ಹೂಡುತ್ತಾ ತ್ರಿಫೋನನು ಒಳಗೂ ಹೊರಗೂ ಹೋಗದಂತೆ ಅದನ್ನು ಮುಚ್ಚಿಬಿಟ್ಟನು.
26 : ಸಿಮೋನನು ಅವನ ಪಕ್ಷದವರಾಗಿ ಕಾದಾಡಲು ಆಯ್ಕೆಯಾದ ಎರಡು ಸಾವಿರ ಕಾಲಾಳುಗಳನ್ನೂ ಬಹಳ ಬೆಳ್ಳಿ ಬಂಗಾರ ಮತ್ತು ಯುದ್ಧ ಸಾಧನಗಳನ್ನೂ ಕಳುಹಿಸಿದನು.
27 : ಆದರೆ ಅಂತಿಯೋಕನು ಅವುಗಳನ್ನು ಸ್ವೀಕರಿಸಲಿಲ್ಲ.
28 : ಮಾತ್ರವಲ್ಲ, ಹಿಂದೆ ಮಾಡಿದ ಒಡಂಬಡಿಕೆಯನ್ನು ಮುರಿದು ಅವನಿಗೆ ವಿಮುಖನಾದನು. ತರುವಾಯ ತನ್ನ ಸ್ನೇಹಿತರಲ್ಲಿ ಒಬ್ಬನಾದ ಅಥೆನೋಬಿಯನೆಂಬವನನ್ನು ಅವನ ಸಂಗಡ ಈ ರೀತಿ ಮಾತಾಡಲು ಕಳುಹಿಸಿದನು. “ನನ್ನ ರಾಜ್ಯದ ಪಟ್ಟಣಗಳಾಗಿರುವ ಜೊಪ್ಪ, ಗಜರ, ಜೆರುಸಲೇಮಿನ ಕೋಟೆ ಇವುಗಳನ್ನು ನಿಮ್ಮ ವಶದಲ್ಲಿಟ್ಟು ಕೊಂಡಿರುವಿರಿ.
29 : ಅದು ಮಾತ್ರವಲ್ಲದೆ, ಅವುಗಳ ಸುತ್ತಲಿನ ಪ್ರದೇಶಗಳನ್ನು ಹಾಳುಮಾಡಿ, ದೇಶದಲ್ಲಿ ಬಹಳ ಹಾನಿಮಾಡಿದ್ದೀರಿ ಮತ್ತು ನನ್ನ ರಾಜ್ಯದಲ್ಲಿರುವ ಅನೇಕ ಪಟ್ಟಣಗಳನ್ನು ನಿಮ್ಮ ಅಧೀನದಲ್ಲಿಟ್ಟುಕೊಂಡಿದ್ದೀರಿ.
30 : ನೀವು ಹಿಡಿದಿಟ್ಟುಕೊಂಡಿರುವ ಪಟ್ಟಣಗಳನ್ನೆಲ್ಲ ಈಗ ನಮಗೆ ಒಪ್ಪಿಸಿರಿ; ಅದು ಮಾತ್ರವಲ್ಲದೆ ಜುದೇಯದ ಗಡಿಯ ಆಚೆಯಲ್ಲಿ ನೀವು ನಿಮ್ಮ ಅಧೀನದಲ್ಲಿ ಇಟ್ಟುಕೊಂಡಿರುವ ಎಲ್ಲ ಸ್ಥಳಗಳ ಕಪ್ಪವನ್ನೂ ನಮಗೆ ಒಪ್ಪಿಸಿರಿ.
31 : ಇಲ್ಲದಿದ್ದರೆ, ಅವುಗಳ ಬದಲಾಗಿ 17,000 ಕಿಲೋಗ್ರಾಂ ಬೆಳ್ಳಿಯನ್ನು ಹಾಗು ನೀವು ಮಾಡಿದ ನಷ್ಟದ ನಿಮಿತ್ತ ಪಟ್ಟಣಗಳ ಕಪ್ಪದ ರೂಪದಲ್ಲಿ ಬೇರೆ 17,000 ಕಿಲೋಗ್ರಾಂ ಬೆಳ್ಳಿಯನ್ನೂ ಕೊಡಿ; ಇಲ್ಲವಾದರೆ ನಾವು ಬಂದು ನಿಮ್ಮ ಮೇಲೆ ಯುದ್ಧಮಾಡುತ್ತೇವೆ.”
32 : ಅರಸನ ಸ್ನೇಹಿತನಾದ ಅಥೆನೋಬಿಯನು ಜೆರುಸಲೇಮಿಗೆ ಬಂದು, ಅಲ್ಲಿ ಸಿಮೋನನ ವೈಭವವನ್ನೂ ಬೆಳ್ಳಿ ಬಂಗಾರದ ಪಾತ್ರೆಗಳಿಂದ ತುಂಬಿದ ಭೋಜನಶಾಲೆಯನ್ನೂ ಅವನ ಪರಿಚಾರಕರ ಸಮೂಹವನ್ನೂ ಕಂಡು ಆಶ್ಚರ್ಯಚಕಿತನಾದನು.
33 : ತರುವಾಯ ಅರಸನ ಮಾತುಗಳನ್ನು ತಿಳಿಸಿದನು. ಸಿಮೋನನು ಉತ್ತರಕೊಟ್ಟು, “ಬೇರೆಯವರ ಭೂಮಿಯನ್ನಾಗಲಿ, ಪರರಿಗೆ ಸೇರಿದ ಯಾವುದನ್ನಾಗಲಿ ನಾವು ತೆಗೆದುಕೊಂಡಿಲ್ಲ; ನಮ್ಮ ಪೂರ್ವಜರ ಸೊತ್ತನ್ನೇ ತೆಗೆದುಕೊಂಡಿದ್ದೇವೆ.
34 : ಅದು ಅನ್ಯಾಯವಾಗಿ ಕೆಲವು ವೇಳೆ ಶತ್ರುಗಳ ಕೈಸೇರಿತ್ತು; ಆದರೆ ಈಗ ಅನುಕೂಲವಿದ್ದುದರಿಂದ ನಮ್ಮ ಮತ್ತು ನಮ್ಮ ಪೂರ್ವಜರ ಸೊತ್ತನ್ನು ಸುಭದ್ರವಾಗಿ ಇಟ್ಟುಕೊಂಡಿದ್ದೇವೆ.
35 : ಜೊಪ್ಪ, ಗಜರ, ಇವುಗಳನ್ನು ಕುರಿತು ಕೇಳುತ್ತೀಯೋ? ಅಲ್ಲಿಯವರು ನಮ್ಮ ನಾಡನ್ನೆಲ್ಲಾ ಹಾಳುಮಾಡಿ, ನಮ್ಮ ಜನರಿಗೆ ಬಹಳ ನಷ್ಟವನ್ನುಂಟುಮಾಡಿದ್ದಾರೆ. ಆದರೂ ಅವುಗಳ ಪರವಾಗಿ 3400 ಕಿಲೋಗ್ರಾಂ ಬೆಳ್ಳಿಯನ್ನು ಕೊಡುತ್ತೇನೆ,” ಎಂದು ಹೇಳಿದನು.
36 : ಅಥೆನೋಬಿಯನು ಮರುಮಾತೊಂದನ್ನೂ ಆಡದೆ, ಕುಪಿತನಾಗಿ ಅರಸನ ಬಳಿಗೆ ಬಂದು ಸಿಮೋನನು ಆಡಿದ ಮಾತುಗಳನ್ನೂ ಅವನ ವೈಭವವನ್ನೂ ತಾನು ಅಲ್ಲಿ ಕಂಡದ್ದೆಲ್ಲವನ್ನೂ ತಿಳಿಸಿದನು.
37 : ಅಥೆನೋಬಿಯನು ಮರುಮಾತೊಂದನ್ನೂ ಆಡದೆ, ಕುಪಿತನಾಗಿ ಅರಸನ ಬಳಿಗೆ ಬಂದು ಸಿಮೋನನು ಆಡಿದ ಮಾತುಗಳನ್ನೂ ಅವನ ವೈಭವವನ್ನೂ ತಾನು ಅಲ್ಲಿ ಕಂಡದ್ದೆಲ್ಲವನ್ನೂ ತಿಳಿಸಿದನು.
37 : ಅರಸನು ರೌದ್ರಾವೇಶಗೊಂಡನು. ಇತ್ತ ತ್ರಿಫೋನನು ಹಡಗು ಹತ್ತಿ ಒರ್ತೋಸಿಯಕ್ಕೆ ಓಡಿಹೋದನು.
38 : ಅರಸನು ಕೆಂಡೆಬಿಯನನ್ನು ಸಮುದ್ರ ಕರಾವಳಿಯ ನಾಯಕನನ್ನಾಗಿ ನೇಮಿಸಿ ಅವನಿಗೆ ಕಾಲ್ದಳವನ್ನೂ ಕುದುರೆದಳವನ್ನೂ ಕೊಟ್ಟು,
39 : ಜುದೇಯದ ಎದುರು ಪಾಳೆಯಮಾಡುವಂತೆಯೂ ಕಿದ್ರೋನನ್ನು ಕಟ್ಟಿ, ಹೆಬ್ಬಾಗಿಲುಗಳನ್ನು ಭದ್ರಪಡಿಸಿ, ಅಲ್ಲಿಯ ಜನರೊಂದಿಗೆ ಯುದ್ಧ ಹೂಡುವಂತೆಯೂ ಆಜ್ಞಾಪಿಸಿದನು.
40 : ತಾನು ತ್ರಿಫೋನನನ್ನು ಬೆನ್ನಟ್ಟಿದನು. ಕೆಂಡೆಬಿಯನು ಯಮ್ನಿಯಕ್ಕೆ ಬಂದು ಅಲ್ಲಿಯ ಜನರನ್ನು ಕಾಡುವುದಕ್ಕೂ ಜುದೇಯದಲ್ಲಿ ನುಗ್ಗಿ ಅಲ್ಲಿಯ ಜನರನ್ನು ಹಿಡಿಯುವುದಕ್ಕೂ ಕೊಲ್ಲುವುದಕ್ಕೂ ಆರಂಭಿಸಿದನು.
41 : ಕೆಂಡೆಬಿಯನು ಅರಸನ ಅಪ್ಪಣೆಯ ಮೇರೆಗೆ ಕಿದ್ರೋನನ್ನು ಕಟ್ಟಿ, ಅಲ್ಲಿ ರಾಹುತರನ್ನೂ ಕಾಲಾಳುಗಳನ್ನೂ ಇಟ್ಟು, ಅವರು ಅಲ್ಲಿಂದ ಹೊರಬಿದ್ದು, ಜುದೇಯದ ಹಾದಿಗಳ ಮೇಲೆ ದಾಳಿಮಾಡುವಂತೆ ವ್ಯವಸ್ಥೆ ಮಾಡಿದನು.

· © 2017 kannadacatholicbible.org Privacy Policy