1 : 172ನೇ ವರ್ಷದಲ್ಲಿ ಅರಸ ದೆಮೆತ್ರಿಯನು, ತ್ರಿಫೋನಿನ ಮೇಲೆ ದಂಡೆತ್ತಿ ಹೋಗುವುದಕ್ಕೆ ಸಹಾಯ ಪಡೆಯಲು ತನ್ನ ಸೈನ್ಯವನ್ನೆಲ್ಲ ಕೂಡಿಸಿಕೊಂಡು ಮೇದ್ಯವನ್ನು ಪ್ರವೇಶಿಸಿದನು.
2 : ದೆಮೆತ್ರಿಯನು ತನ್ನ ಗಡಿಯ ಒಳಗೆ ಬಂದಿರುವನೆಂಬ ವರ್ತಮಾನವನ್ನು ಮೇದ್ಯರ ಮತ್ತು ಪರ್ಷಿಯರ ಅರಸನಾದ ಅರಸಕಿಯನು ಕೇಳಿ, ಅವನನ್ನು ಜೀವಂತ ಹಿಡಿದು ತರುವುದಕ್ಕೆ ತನ್ನ ಸೇನಾಧಿಪತಿಗಳಲ್ಲೊಬ್ಬನನ್ನು ಕಳುಹಿಸಿದನು.
3 : ಅವನು ಹೋಗಿ, ದೆಮೆತ್ರಿಯನ ಸೈನ್ಯವನ್ನು ಸದೆಬಡಿದು ಅವನನ್ನು ಹಿಡಿದುಕೊಂಡು ಬಂದು ಅರಸಕಿಯನಿಗೆ ಒಪ್ಪಿಸಿದನು. ಅರಸಕಿಯನು ಅವನನ್ನು ಸೆರೆಯಲ್ಲಿಟ್ಟನು.
4 : ಸಿಮೋನನ ಕಾಲದಲ್ಲೆಲ್ಲಾ ಸಮಾಧಾನವಿತ್ತು
ಜುದೇಯಕೆ
ಹಿತವನ್ನೇ ಬಯಸುತ್ತಾ ಬಂದನವನು
ತನ್ನ ಜನಕೆ
ಅವನ ಘನತೆ ಗೌರವಗಳಿಗೆ ದೊರಕಿತ್ತು
ಜನರ ಮೆಚ್ಚುಗೆ.
5 : ಜೊಪ್ಪವನು ಬಂದರಾಗಿ ಮಾರ್ಪಡಿಸಿದವನು
ಅವನೇ
ಅದೇ ಹೆಬ್ಬಾಗಿಲಾಯಿತು ಭೂಮಧ್ಯ
ದ್ವೀಪಗಳಿಗೆ
ಮುಕುಟಪ್ರಾಯವಾಯಿತು ಅವನ
ವೀರಕೃತ್ಯಗಳಿಗೆ
6 : ರಾಷ್ಟ್ರದ ಮೇರೆಗಳನು ವಿಸ್ತರಿಸಿದನು
ಸ್ವಾಧೀನಪಡಿಸಿಕೊಂಡನು ಇಡೀ ನಾಡನು.
7 : ಸೆರೆಹಿಡಿದು ತಂದನು ಅನೇಕ ಯುದ್ಧ
ಕೈದಿಗಳನು
ಅವನ ಕೈವಶವಾಯಿತು ಗಜರಾ, ಬೆತ್ಸೂರ,
ಹಾಗೂ ಕೋಟೆಯ ಆಡಳಿತವು.
ತೊಲಗಿಸಿದನು ಅಲ್ಲಿದ್ದ ಹೊಲಸನ್ನೆಲ್ಲಾ
ಪ್ರತಿಭಟಿಸುವವರಾರೂ ಅವನಿಗಿರಲಿಲ್ಲ.
8 : ಸಾಗುವಳಿ ಮಾಡುತ್ತಿದ್ದರು ಜನರು
ಹೊಲಗಳನ್ನು ನೆಮ್ಮದಿಯಿಂದ
ಬೆಳೆಯನ್ನು ಪಡೆಯುತ್ತಿದ್ದರು
ಹುಲುಸಾಗಿ ಭೂಮಿಯಿಂದ
ಒಳ್ಳೊಳ್ಳೆ ಫಲಗಳು ದೊರಕುತ್ತಿದ್ದವು
ಬಯಲಿನ ಮರಗಳಿಂದ.
9 : ಹಿರಿಯರು ಕುಳಿತುಕೊಳ್ಳುತ್ತಿದ್ದರು ಬೀದಿಯ
ಚೌಕಗಳಲಿ
ಶುಭಸಮಾಚಾರಗಳನೆ ಕುರಿತು
ಹರಟೆ ವೈಭವದಿಂದ ಮೆರೆದರು
ಸಮರವಸ್ತ್ರಗಳಲಿ.
10 : ಆಹಾರ ಸಾಮಗ್ರಿಗಳನ್ನೊದಗಿಸಿದನು
ಎಲ್ಲ ಪಟ್ಟಣಗಳಿಗೆ
ಶಸ್ತ್ರಾಸ್ತ್ರಗಳನ್ನೇರ್ಪಡಿಸಿದನು ಅವುಗಳ
ರಕ್ಷಣೆಗೆ
ಅವ ಕೀರ್ತಿ ಹಬ್ಬಿತು ನಾಡಿನ ಕಟ್ಟಕಡೆಗೆ.
11 : ಶಾಂತಿಸಮಾಧಾನವಿತ್ತು ನಾಡಿನಲ್ಲೆಲ್ಲಾ
ಆನಂದದಿಂದ ನಲಿದಾಡಿದರು
ಇಸ್ರಯೇಲರೆಲ್ಲಾ.
12 : ಪ್ರತಿಯೊಬ್ಬನು ಕುಳಿತನು ತನ್ನ ದ್ರಾಕ್ಷಾಲತೆಯ,
ಅಂಜೂರ ಮರದ ನೆರಳಲೆ
ಬೆದರಿಕೆಯೊಡ್ಡುವವರಾರೂ ಇರಲಿಲ್ಲ
ಅವರಿಗೆ
13 : ದಂಡೆತ್ತಿ ಬರುವಂಥವರಾರೂ ಇರಲಿಲ್ಲ
ಸೋತುಹೋಗಿದ್ದರು ಅಂದಿನ
ರಾಜರುಗಳೆಲ್ಲಾ.
14 : ದೀನದಲಿತರಿಗೆ ಧೈರ್ಯತುಂಬುತ್ತಿದ್ದನು, ಅಧರ್ಮಿಗಳನು, ದುಷ್ಟರನು ದಮನಮಾಡುತ್ತಿದ್ದನು
15 : ಧರ್ಮಶಾಸ್ತ್ರವನು ಕೈಗೊಳ್ಳುತ್ತಿದ್ದನು
ಆಸಕ್ತಿಯಿಂದ
ಅಲಂಕರಿಸಿದನು ದೇವಾಲಯವನು ನೂತನ
ಪ್ರಭೆಯಿಂದ
ಪವಿತ್ರಾಲಯಕೆ ಪಾತ್ರೋಪಕರಣಗಳನು
ಒದಗಿಸಿದನು ಉದಾರದಿಂದ.
16 : ಯೋನಾತನನು ಕಾಲವಾದನೆಂದು ರೋಮಿಗೂ ಸ್ಪಾರ್ಟಗೂ ತಿಳಿದುಬಂದಾಗ ಅವರು ಬಹಳ ವ್ಯಸನಪಟ್ಟರು
17 : ಆದರೆ ಅವನಿಗೆ ಬದಲಾಗಿ ಅವನ ಅಣ್ಣ ಸಿಮೋನನು ಪ್ರಧಾನ ಯಾಜಕನಾಗಿದ್ದಾನೆಂದು ಹಾಗು ಅವನೇ ಆ ನಾಡನ್ನೂ ಅದರ ಪಟ್ಟಣಗಳನ್ನೂ ಆಳುತ್ತಿದ್ದಾನೆಂದೂ ಗೊತ್ತಾಯಿತು.
18 : ಆಗ ಅವನ ಸಹೋದರ ಯೂದ ಹಾಗು ಯೋನಾತನರೊಂದಿಗೆ ಸ್ಥಿರಗೊಳಿಸಿದ್ದ ಮಿತ್ರತ್ವವನ್ನು ಹೊಸದಾಗಿಸಲು ಅವನಿಗೆ ತಾಮ್ರಪತ್ರಗಳನ್ನು ಬರೆದು ಕಳುಹಿಸಿದರು.
19 : ಆ ಪತ್ರಗಳನ್ನು ಜೆರುಸಲೇಮಿನಲ್ಲಿ ಸಭೆಯ ಮುಂದೆ ಓದಲಾಯಿತು.
20 : ಸ್ಪಾರ್ಟನರು ಕಳುಹಿಸಿದ ಪತ್ರದ ಪ್ರತಿಯಿದು:
21 : ನಮ್ಮ ಜನಗಳ ಬಳಿಗೆ ನೀವು ಕಳುಹಿಸಿದ ರಾಯಭಾರಿಗಳು ನಿಮ್ಮ ಗೌರವ ಪ್ರತಿಭೆಗಳನ್ನು ಕುರಿತು ವರದಿಮಾಡಿದರು. ಅವರು ಬಂದದ್ದರಿಂದ ನಮಗೂ ಆನಂದವಾಯಿತು.
23 : ಅವರು ಹೇಳಿದ ಸಂಗತಿಗಳನ್ನು ನಮ್ಮ ಜನಾಂಗದ ದಿನ ಚರ್ಯೆಯ ಗ್ರಂಥದಲ್ಲಿ ಹೀಗೆ ಬರೆದಿಟ್ಟಿದ್ದೇವೆ: ‘ಯೆಹೂದ್ಯರ ರಾಯಭಾರಿಗಳಾದ ಅಂತಿಯೋಕನ ಮಗ ನುಮೆನಿಯನೂ ಯಾಸೋನನ ಮಗ ಅಂತಿಪತರನೂ ಅವರೊಂದಿಗಿದ್ದ ನಮ್ಮ ಸ್ನೇಹವನ್ನು ಪುನಶ್ಚೇತನಗೊಳಿಸುವುದಕ್ಕೆ ನಮ್ಮಲ್ಲಿಗೆ ಬಂದಿದ್ದರು.
23 : ಜನರು ಅವರನ್ನು ಆದರದಿಂದ ಸತ್ಕರಿಸಿದ್ದನ್ನೂ ಹಾಗು ಅವರು ವರದಿಮಾಡಿದ್ದನ್ನೂ ಸ್ಪಾರ್ಟದ ಸ್ಮರಣೆಯಲ್ಲಿ ಉಳಿಯಲೆಂದು ಅವುಗಳ ಪ್ರತಿಯನ್ನು ಸಾರ್ವಜನಿಕ ದಿನಚರ್ಯೆಯ ಗ್ರಂಥದಲ್ಲಿ ಬರೆದಿಡಲು ಅನುಮೋದಿಸಿದರು. ಈ ವಿಷಯಗಳ ಪ್ರತಿಯನ್ನು ಮಾಡಿ, ಅದನ್ನು ಪ್ರಧಾನ ಯಾಜಕ ಸಿಮೋನನಿಗೆ ಕಳುಹಿಸಲು ಅನುವಾದರು.”
24 : ಇದಾದ ತರುವಾಯ ಸಿಮೋನನು ರೋಮನರ ಸಂಗಡ ತಮ್ಮ ಸಂಬಂಧವನ್ನು ಸ್ಥಿರಗೊಳಿಸುವುದಕ್ಕೆಂದು ಅರ್ಧ ಟನ್ ತೂಕದ ಬಂಗಾರದ ಗುರಾಣಿಯೊಂದನ್ನು ನುಮೆನಿಯನ ಮುಖಾಂತರ ರೋಮಿಗೆ ಕಳುಹಿಸಿದನು.
25 : ಜನರು ಇದನ್ನು ಕೇಳಿ, “ನಾವು ಸಿಮೋನನ ಮತ್ತು ಅವನ ಮಕ್ಕಳ ಉಪಕಾರವನ್ನು ನೆನಪಿನಲ್ಲಿಡುವ ಬಗೆಯೆಂತು?
26 : ಬಲಶಾಲಿಗಳಾದ ಅವನು, ಅವನ ಸಹೋದರರು ಹಾಗು ಅವನ ತಂದೆಯ ಮನೆಯವರು ಇಸ್ರಯೇಲರ ಶತ್ರುಗಳನ್ನು ಯುದ್ಧದಲ್ಲಿ ಓಡಿಸಿ, ಇಸ್ರಯೇಲರಿಗೆ ಸ್ವಾತಂತ್ರ್ಯವನ್ನು ಸಂಪಾದಿಸಿಕೊಟ್ಟಿದ್ದಾರೆ,” ಎಂದು ಮೆಚ್ಚಿಕೊಂಡರು.
27 : ಈ ಕೆಳಗೆ ಬರೆದಿರುವ ಮಾತುಗಳನ್ನು ತಾಮ್ರಪತ್ರಗಳ ಮೇಲೆ ಬರೆದು ಸಿಯೋನ್ ಗುಡ್ಡದ ಮೇಲೆ ಕಂಬಕ್ಕೆ ಹಚ್ಚಿದರು. ಆ ಬರಹದ ಪ್ರತಿಯಿದು:
28 : “172ನೇ ವರ್ಷದ ಭಾದ್ರಪದ ಮಾಸದ ಹದಿನೆಂಟನೆಯ ದಿನ, ಅಂದು ಸಿಮೋನನ ಯಾಜಕತ್ವದ ಮೂರನೆಯ ವರ್ಷ, ‘ಅಸರ ಮೇಳದಲ್ಲಿ, ಯಾಜಕರು, ಜನರು, ಜನಾಂಗದವರು, ಸರದಾರರು ಮತ್ತು ನಾಡಿನ ಹಿರಿಯರು ನೆರೆದಿದ್ದ ಮಹಾಸಭೆಯಲ್ಲಿ,
29 : ನಮಗೆ ತಿಳಿಯಪಡಿಸಿದ ಸಂಗತಿ ಏನೆಂದರೆ: ನಮ್ಮ ನಾಡಿನಲ್ಲಿ ಯುದ್ಧ ಪ್ರಸಂಗಗಳು ಒದಗಿದ ಕಾಲದಲ್ಲೆಲ್ಲಾ ನಮ್ಮ ದೇವಾಲಯವೂ ಧರ್ಮವೂ ನೆಲೆಗೊಳ್ಳಲೆಂದು ರೋವಾರೀಬನ ಸಂತಾನದ ಮತ್ತಾತಿಯನ ಮಗ ಸಿಮೋನನೂ ಅವನ ಸಹೋದರರೂ ತಮ್ಮನ್ನೇ ಗಂಡಾಂತರಗಳಿಗೆ ಗುರಿಮಾಡಿಕೊಂಡು, ತಮ್ಮ ಜನಾಂಗದ ಶತ್ರುಗಳನ್ನು ಎದುರಿಸಿದರು.
30 : ಯೋನಾತನನು ಜನಾಂಗವನ್ನು ಒಂದುಗೂಡಿಸಿ, ಅವರ ಪ್ರಧಾನಯಾಜಕನಾಗಿ ದುಡಿದು, ಮಡಿದು, ತನ್ನ ಪಿತೃಗಳ ಬಳಿಗೆ ಸೇರಿದನು.
31 : ನಾಡಿನ ಶತ್ರುಗಳು ನಾಡಿನ ಮೇಲೆ ದಂಡೆತ್ತಿ ಬಂದು, ಅದನ್ನು ಪೂರ್ತಿ ನಾಶಗೊಳಿಸಬೇಕೆಂದು ಅವರ ಮಹಾದೇವಾಲಯದ ಮೇಲೆ ಕೈಯೆತ್ತಿದಾಗ, ಸಿಮೋನನು ತಲೆಯೆತ್ತಿದನು.
32 : ತನ್ನ ಜನಾಂಗಕ್ಕಾಗಿ ಕಾದಾಡಿದನು. ತನ್ನ ಸ್ವಂತ ಆಸ್ತಿಯಿಂದ ಅಪಾರ ವೆಚ್ಚಮಾಡಿ, ತನ್ನ ಜನಾಂಗದ ಶೂರಪುರುಷರಿಗೆ ಆಯುಧಗಳನ್ನು ಒದಗಿಸಿಕೊಟ್ಟನು.
33 : ಅವರಿಗೆ ಸಂಬಳವನ್ನು ಕೊಟ್ಟನು. ಜುದೇಯದ ಪಟ್ಟಣಗಳನ್ನು ಹಾಗು ಜುದೇಯದ ಗಡಿನಾಡಿನಲ್ಲಿ ಮೊದಲು ಶತ್ರುಗಳ ಸನ್ನಾಹವಿದ್ದ ಬೇತ್ಸೂರೆಯನ್ನೂ ಬಲಗೊಳಿಸಿದನು.
34 : ಅಲ್ಲಿ ಯೆಹೂದ್ಯರ ರಕ್ಷಣಾಸೈನ್ಯವನ್ನಿಟ್ಟನು. ಇದಲ್ಲದೆ, ಸಮುದ್ರದ ದಡದಲ್ಲಿರುವ ಜೊಪ್ಪವನ್ನು ಮತ್ತು ಈ ಮುಂಚೆ ಶತ್ರುಗಳು ವಾಸಿಸುತ್ತಿದ್ದ ಅಜೋತದ ಗಡಿಯಲ್ಲಿರುವ ಗಜರವನ್ನು ಭದ್ರಗೊಳಿಸಿದನು. ಅಲ್ಲಿ ಯೆಹೂದ್ಯರನ್ನು ಇರಿಸಿ, ಈ ಊರುಗಳ ಸುಧಾರಣೆಗೆ ಬೇಕಾದ ಸಾಮಗ್ರಿಗಳನ್ನು ಅವುಗಳಲ್ಲಿಟ್ಟನು.
35 : ಜನರು ಸಿಮೋನನ ವಿಶ್ವಾಸವನ್ನೂ ಅವನು ತನ್ನ ಜನಾಂಗಕ್ಕೆ ತರಬೇಕೆಂದಿದ್ದ ಗೌರವವನ್ನೂ ಮನಗಂಡರು. ಅವನು ಎಲ್ಲಾ ವಿಧದಲ್ಲಿ ತನ್ನ ಜನಾಂಗದ ಏಳಿಗೆಗಾಗಿ ಉದ್ಯುಕ್ತನಾಗಿದ್ದುದನ್ನು ಹಾಗು ತನ್ನ ಜನಾಂಗಕ್ಕೆ ನ್ಯಾಯಾಸಕ್ತನಾಗಿಯೂ ಸತ್ಯಸಂಧನಾಗಿಯೂ ನಡೆದುಕೊಳ್ಳುತ್ತಾ ಬಂದುದನ್ನು ಸ್ಮರಿಸಿ, ಅವನನ್ನು ತಮ್ಮ ನಾಯಕನನ್ನಾಗಿಯೂ ಪ್ರಧಾನಯಾಜಕನನ್ನಾಗಿಯೂ ಮಾಡಿಕೊಂಡರು.
36 : “ಆ ದಿನಗಳಲ್ಲಿ ಅವನು ಕೈಗೊಳ್ಳುತ್ತಿದ್ದ ಎಲ್ಲ ಕಾರ್ಯಗಳೂ ಸಫಲವಾಗುತ್ತಿದ್ದವು; ನಾಡಿನಲ್ಲೂ ದಾವೀದನಗರದಲ್ಲೂ ಜೆರುಸಲೇಮಿನಲ್ಲೂ ಇದ್ದ ಅನ್ಯಜನರನ್ನು ಹೊರದೂಡಿದನು. ಏಕೆಂದರೆ ಅವರು ಕೋಟೆಯಲ್ಲಿದ್ದುಕೊಂಡು, ಆಗಾಗ್ಗೆ ಅದರೊಳಗಿಂದ ಹೊರಬಿದ್ದು, ದೇವಾಲಯದ ಸುತ್ತಮುತ್ತಲು ಹೊಲೆಮಾಡುತ್ತಾ ಅದರ ಶುದ್ಧತೆಗೆ ಭಂಗತರುತ್ತಿದ್ದರು.
37 : ಅಲ್ಲಿ ಯೆಹೂದ್ಯರನ್ನು ಇರಿಸಿದ್ದಲ್ಲದೆ, ನಾಡಿನ ಮತ್ತು ನಗರದ ಸಂರಕ್ಷಣೆಗಾಗಿ ಅದನ್ನು ಭದ್ರಪಡಿಸಿ, ಜೆರುಸಲೇಮಿನ ಗೋಡೆಗಳನ್ನು ಎತ್ತರಿಸಿದನು.
38 : ಆದುದರಿಂದ ಅರಸ ದೆಮೆತ್ರಿಯನು ಅವನ ಪ್ರಧಾನಯಾಜಕತ್ವವನ್ನು ಸ್ಥಿರಗೊಳಿಸಿದನು; ತನ್ನ ಆಪ್ತ ಮಿತ್ರರಲ್ಲೇ ಅವನನ್ನು ಒಬ್ಬನನ್ನಾಗಿ ಪರಿಗಣಿಸಿದನು.
39 : ಅವನನ್ನು ಬಹಳವಾಗಿ ಪುರಸ್ಕರಿಸಿದನು.
39 : ಅವನನ್ನು ಬಹಳವಾಗಿ ಪುರಸ್ಕರಿಸಿದನು.
40 : ಏಕೆಂದರೆ ರೋಮನರು, ಯೆಹೂದ್ಯರನ್ನು ತಮ್ಮ ಮಿತ್ರರೆಂದೂ ಬಂಧುಗಳೆಂದೂ ಸಹೋದರರೆಂದೂ ಕರೆದುದಲ್ಲದೆ, ಸಿಮೋನನು ಕಳುಹಿಸಿದ ರಾಯಭಾರಿಗಳನ್ನು ಗೌರವದಿಂದ ಬರಮಾಡಿಕೊಂಡರೆಂದು ಅವನು ಕೇಳಿದ್ದನು.
41 : “ಆದುದರಿಂದ ಯೆಹೂದ್ಯರು ಹಾಗು ಯಾಜಕರು ಒಮ್ಮತದಿಂದ ತೀರ್ಮಾನಿಸಿದುದು ಏನೆಂದರೆ: ನಂಬಿಕೆಗೆ ಯೋಗ್ಯನಾದ ಪ್ರವಾದಿ ಒಬ್ಬನು ಎದ್ದು ಕಾಣುವವರೆಗೆ, ಸಿಮೋನನೇ ತಮ್ಮಲ್ಲಿ ನಾಯಕನೂ ಪ್ರಧಾನಯಾಜಕನೂ ಆಗಿರಲಿ.
43 : ಅವನೇ ದಳವಾಯಿಯಾಗಿದ್ದು, ಪವಿತ್ರಾಲಯದ ಮೇಲ್ವಿಚಾರಣೆ ನೋಡಿಕೊಳ್ಳಲಿ. ಅದಲ್ಲದೆ, ಜನರು ಮಾಡಬೇಕಾದ ಕೆಲಸಗಳನ್ನು ಅವರವರಿಗೆ ನೇಮಿಸಿ, ಪ್ರಾಂತ್ಯಾಧಿಕಾರಿಗಳನ್ನೂ ಸೈನ್ಯಾಧಿಕಾರಿಗಳನ್ನೂ ಕೋಟೆಗಾರರನ್ನೂ ಗೊತ್ತುಮಾಡಲಿ.
43 : ಮಹಾಪವಿತ್ರಾಲಯದ ಮೇಲ್ವಿಚಾರಣೆ ಅವನ ಕೈಯಲ್ಲಿರಲಿ; ಎಲ್ಲರೂ ಅವನು ಹೇಳಿದಂತೆ ಕೇಳಲಿ. ನಾಡಿನ ಎಲ್ಲ ಅಧಿಕೃತ ಪತ್ರ ವ್ಯವಹಾರಗಳು ಅವನ ಹೆಸರಿನಲ್ಲಿಯೇ ಲಿಖಿತವಾಗಲಿ. ಅವನು ರಾಜವಸ್ತ್ರವನ್ನು ಧರಿಸಿಕೊಂಡು ಬಂಗಾರದ ಆಭರಣಗಳನ್ನು ಹಾಕಿಕೊಳ್ಳಲಿ.
44 : “ಜನತೆಯಲ್ಲಾಗಲಿ ಯಾಜಕರಲ್ಲಾಗಲಿ ಯಾರೂ ಯಾವ ವಿಷಯದಲ್ಲಿಯೂ ಈ ತೀರ್ಮಾನವನ್ನು ಅಲ್ಲಗಳೆಯಬಾರದು. ಅವನು ಕೊಡಲಿರುವ ಅಪ್ಪಣೆಯನ್ನು ಎದುರಿಸಬಾರದು. ಅವನನ್ನು ಬಿಟ್ಟು ಯಾರೂ ಸಭೆಯನ್ನು ಕೂಡಿಸಬಾರದು. ಅವನಲ್ಲದೆ ಯಾರೂ ರಾಜವಸ್ತ್ರಧಾರಣೆ ಮಾಡಬಾರದು. ಬಂಗಾರದ ಒಡ್ಯಾಣವನ್ನು ಹಾಕಿಕೊಳ್ಳಬಾರದು.
45 : ಯಾರಾದರೂ ಈ ತೀರ್ಮಾನವನ್ನು ಮೀರಿ ನಡೆದರೆ ಅಂಥವನು ಶಿಕ್ಷೆಗೆ ಗುರಿಯಾಗಬೇಕು.
46 : ಸಿಮೋನನು ಈ ಮಾತುಗಳಿಗನುಸಾರ ನಡೆದಂತೆ ಅವನಿಗಾಗಿ ವ್ಯವಸ್ಥೆಮಾಡಲು ಎಲ್ಲ ಜನರೂ ಸಮ್ಮತಿಸಿದರು.
47 : ಸಿಮೋನನು ಇದೆಲ್ಲವನ್ನೂ ಅಂಗೀಕರಿಸಿ, ಪ್ರಧಾನ ಯಾಜಕರ ಪಾಲಕನೂ ದಳವಾಯಿಯೂ ಆಗಿರಲೂ ಎಲ್ಲರ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲೂ ಒಪ್ಪಿದನು.”
48 : ಈ ಬರಹವನ್ನು ತಾಮ್ರಪತ್ರಗಳ ಮೇಲೆ ಬರೆದು ಪವಿತ್ರಾಲಯದ ಆವರಣದಲ್ಲಿ ಎಲ್ಲರಿಗೂ ಕಾಣುವ ಸ್ಥಳದಲ್ಲಿ ಇರಿಸಬೇಕೆಂದು ಅವರು ಆಜ್ಞಾಪಿಸಿದರು. 49ಮಾತ್ರವಲ್ಲದೆ, ಅವು ಸಿಮೋನನ ಮತ್ತು ಅವನ ಮಕ್ಕಳ ಹತ್ತಿರವೂ ಇರುವಂತೆ ಅವುಗಳ ಪ್ರತಿಗಳನ್ನು ಖಜಾನೆಯ ಕೋಣೆಯಲ್ಲಿ ಇರಿಸಬೇಕೆಂದು ಆಜ್ಞಾಪಿಸಿದರು.