Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ಸಮಯವು ತನಗೆ ಅನುಕೂಲವಾಗಿದೆ ಎಂದು ತಿಳಿದು ಯೋನಾತನನು ರೋಮನ್ನರೊಂದಿಗಿದ್ದ ಬಾಂಧವ್ಯವನ್ನು ಹೊಸದಾಗಿಸಿ ಭದ್ರಪಡಿಸಿಕೊಳ್ಳಲು ಆಯ್ದ ಕೆಲವು ಜನರನ್ನು ರೋಮಿಗೆ ಕಳುಹಿಸಿದನು.
2 : ಇದಲ್ಲದೆ ಸ್ಪಾರ್ಟಪಟ್ಟಣದವರೆಗೂ ಪತ್ರಗಳನ್ನು ಕಳುಹಿಸಿದನು.
3 : ಅವರು ರೋಮಿಗೆ ಹೋಗಿ ಶಾಸನ ಸಭಾಗೃಹವನ್ನು ಪ್ರವೇಶಿಸಿ, “ಪ್ರಧಾನಯಾಜಕನಾದ ಯೋನಾತನನೂ ಯೆಹೂದ್ಯ ಜನಾಂಗದವರೂ ಹಿಂದೆ ತಮ್ಮೊಂದಿಗೆ ಮಾಡಿಕೊಂಡಿದ್ದ ಸ್ನೇಹಸಂಬಂಧವನ್ನು ದೃಢವಾಗಿಸಿಕೊಳ್ಳಲು ನಮ್ಮನ್ನು ಕಳುಹಿಸಿದ್ದಾರೆ,” ಎಂದು ಹೇಳಿದರು.
4 : ಅವರು ಸಮಾಧಾನದಿಂದ ಜುದೇಯಕ್ಕೆ ಹಿಂದಿರುಗುವಂತೆ, ಆ ರೋಮನರು ಆಯಾ ಸ್ಥಳಗಳಲ್ಲಿದ್ದ ತಮ್ಮ ಜನರಿಗೆ ಪತ್ರಗಳನ್ನು ಕೊಟ್ಟು ಕಳುಹಿಸಿದರು.
5 : ಯೋನಾತನನು ಸ್ಪಾರ್ಟರಿಗೆ ಬರೆದ ಕಾಗದದ ಪ್ರತಿ ಇದು:
6 : “ಪ್ರಧಾನಯಾಜಕ ಯೋನಾತನನು ಹಿರಿಯ ಸಭೆಯು, ಯಾಜಕರು ಹಾಗು ಇನ್ನುಳಿದ ಯೆಹೂದ್ಯ ಜನಸ್ತೋಮವೂ ತಮ್ಮ ಸಹೋದರರಾದ ಸ್ಪಾರ್ಟನರಿಗೆ ಮಾಡುವ ವಂದನೆಗಳು!
7 : ನಿಮ್ಮಲ್ಲಿ ರಾಜ್ಯವಾಳುತ್ತಿದ್ದ ಏರಿಯನು ನಮ್ಮ ಪ್ರಧಾನಯಾಜಕನಾಗಿದ್ದ ಒನೀಯನಿಗೆ, ‘ನೀವು ನಮ್ಮ ಸಹೋದರರು,’ ಎಂದು ಸೂಚಿಸುವ ಕಾಗದಗಳನ್ನು ಈ ಮೊದಲೇ ಬರೆದಿದ್ದನು.
8 : ಇದು ಈ ಕಾಗದದೊಂದಿಗೆ ಲಗತ್ತಿಸಿರುವ ಪ್ರತಿಯಿಂದ ವ್ಯಕ್ತವಾಗುವುದು. ಒನೀಯನು, ತನ್ನ ಬಳಿಗೆ ಕಳುಹಿಸಲಾಗಿದ್ದ ನಿಮ್ಮ ರಾಯಭಾರಿಯನ್ನು ಬಹು ಆದರದಿಂದ ಸತ್ಕರಿಸಿ, ಸ್ನೇಹಸಂಬಂಧವನ್ನು ಖಚಿತಪಡಿಸುವ ಪತ್ರಗಳನ್ನು ಸ್ವೀಕರಿಸಿದನು.
9 : ಮೇಲಾಗಿ, ನಮಗೆ ಉತ್ತೇಜನ ಕೊಡುವ ಪವಿತ್ರ ಗ್ರಂಥಗಳೇ ನಮ್ಮ ಕೈಯಲ್ಲಿರುವಾಗ ಇಂಥವುಗಳ ಅಗತ್ಯವೇನೂ ನಮಗಿಲ್ಲ.
10 : ಆದರೂ ನಾವು ನಿಮ್ಮಿಂದ ಸಂಪೂರ್ಣ ಅಗಲಿಹೋಗಬಾರದೆಂದೂ ನಿಮ್ಮೊಂದಿಗೆ ನಮಗಿರುವ ಬಾಂಧವ್ಯವನ್ನೂ ಸ್ನೇಹವನ್ನೂ ಪುನಶ್ಚೇತನಗೊಳಿಸಬೇಕೆಂದೂ ಇವುಗಳನ್ನೂ ಕಳುಹಿಸಲು ಯತ್ನಿಸಿದ್ದೇವೆ. ಏಕೆಂದರೆ ನೀವು ಪತ್ರ ಕಳುಹಿಸಿ ಬಹುಕಾಲ ಗತಿಸಿಹೋಗಿದೆ.
11 : ನಾವಂತೂ ಎಲ್ಲ ಕಾಲಗಳಲ್ಲು, ನಮ್ಮ ಹಬ್ಬಹರಿದಿನಗಳಲ್ಲು, ನಾವು ಅರ್ಪಿಸುವ ಬಲಿಗಳಲ್ಲು ಹಾಗೂ ನಮ್ಮ ಪ್ರಾರ್ಥನೆಗಳಲ್ಲು ನಿರಂತರವಾಗಿ ನಿಮ್ಮನ್ನು ನೆನಪುಮಾಡಿಕೊಳ್ಳುತ್ತೇವೆ. ಹೀಗೆ ಸಹೋದರರನ್ನು ಸ್ಮರಿಸಿಕೊಳ್ಳುವುದು ಸೂಕ್ತವೂ ಸಮಂಜಸವೂ ಆಗಿದೆ.
12 : ಮೇಲಾಗಿ, ನಿಮ್ಮ ಕೀರ್ತಿಯನ್ನು ಕೇಳಿ ಆನಂದಿಸುತ್ತೇವೆ.
13 : ನಮ್ಮನ್ನಾದರೋ ಅನೇಕ ಕಷ್ಟ ಕಾದಾಟಗಳು ಆವರಿಸಿಕೊಂಡಿದ್ದವು. ನಮ್ಮ ಸುತ್ತಲಿರುವ ಅರಸರು ನಮ್ಮ ಮೇಲೆ ಯುದ್ಧ ಮಾಡಿದರು.
14 : ಈ ಸಮರಗಳಲ್ಲಿ ನಿಮಗೂ ನಿಮ್ಮ ಪಕ್ಷದವರಿಗೂ ಮಿತ್ರರಿಗೂ ತೊಂದರೆಕೊಡುವ ಮನಸ್ಸು ನಮಗಿರಲಿಲ್ಲ.
15 : ಏಕೆಂದರೆ ಮೇಲಿಂದ ಬರುವ ಸಹಾಯ ನಮ್ಮ ನೆರವಿಗಿದೆ; ನಮ್ಮ ಶತ್ರುಗಳಿಂದ ನಾವು ಬಿಡುಗಡೆ ಹೊಂದಿದ್ದೇವೆ; ನಮ್ಮ ಶತ್ರುಗಳಾದರೋ ಕುಗ್ಗಿಹೋದರು.
16 : ಸದ್ಯಕ್ಕೆ ನಾವು ಅಂತಿಯೋಕನ ಮಗ ನುಮೆನಿಯನನ್ನೂ ಯಾಸೋನನ ಮಗ ಅಂತಿಮತರನನ್ನೂ ಆರಿಸಿಕೊಂಡು ಅವರನ್ನು ರೋಮನರ ಬಳಿಗೆ ಕಳುಹಿಸಿ, ಮೊದಲಿದ್ದ ಸ್ನೇಹಸಂಬಂಧವನ್ನು ಪುನಶ್ಚೇತನಗೊಳಿಸಲಿದ್ದೇವೆ
17 : ಆದುದರಿಂದ ನಿಮ್ಮ ಕಡೆಗೂ ಹೋಗಿ ನಿಮ್ಮನ್ನು ವಂದಿಸಿ, ನಿಮ್ಮ ಬಾಂಧವ್ಯವನ್ನು ಹೊಸದಾಗಿಸುವುದರ ಬಗ್ಗೆ ಬರೆದ ಈ ಪತ್ರಗಳನ್ನು ನಿಮಗೆ ಕೊಡಬೇಕೆಂದು ಅಪ್ಪಣೆಮಾಡಿದ್ದೇವೆ.
18 : ಇವುಗಳಿಗೆ ನೀವು ಉತ್ತರಕೊಟ್ಟರೆ ಒಳಿತಾಗುವುದು.”
19 : ಒನೀಯನಿಗೆ ಅವರು ಬರೆದ ಕಾಗದದ ಪ್ರತಿಯಿದು:
20 : ಸ್ಪಾರ್ಟನರ ಅರಸ ಏರಿಯನು, ಪ್ರಧಾನ ಯಾಜಕನಾದ ಒನೀಯನಿಗೆ ಮಾಡುವ ವಂದನೆಗಳು!
21 : ಸ್ಪಾರ್ಟನರ ಮತ್ತು ಯೆಹೂದ್ಯರ ಸಂಬಂಧವಾಗಿ ಅವರು ಸಹೋದರರೆಂದೂ ಅಬ್ರಹಾಮನ ಸಂತಾನದವರೆಂದೂ ಬರವಣಿಗೆಯಲ್ಲೆ ಕಂಡುಬಂದಿದೆ.
22 : ಇದು ನಮಗೆ ಅರಿಕೆ ಆಗಿರುವುದರಿಂದ ನೀವು ನಿಮ್ಮ ಕ್ಷೇಮವನ್ನು ಕುರಿತು ಬರೆದರೆ ಒಳಿತು.
23 : ನಾವಾದರೋ ನಿಮಗೆ ಬರೆದು ತಿಳಿಸುವುದೇನೆಂದರೆ: ನಿಮ್ಮ ದನಕರುಗಳೂ ನಿಮ್ಮ ಸೊತ್ತೂ ನಮ್ಮದು. ನಮ್ಮದೂ ನಿಮ್ಮದಲ್ಲವೇ? ಈ ರೀತಿ ನಿಮಗೆ ವರದಿ ಮಾಡಬೇಕೆಂದು ನಾವು ನಮ್ಮ ಪ್ರತಿನಿಧಿಗಳಿಗೆ ಆಜ್ಞಾಪಿಸಿದ್ದೇವೆ.”
24 : ದೆಮೆತ್ರಿಯನ ಸರದಾರರು ಮೊದಲಿಗಿಂತಲೂ ದೊಡ್ಡದಾದ ಸೈನ್ಯವನ್ನು ಕಟ್ಟಿಕೊಂಡು ತನ್ನ ಮೇಲೆ ಯುದ್ಧಮಾಡುವುದಕ್ಕೆ ಬಂದಿದ್ದಾರೆಂದು ಯೋನಾತನನಿಗೆ ತಿಳಿಯಿತು.
25 : ಅವನು ಜೆರುಸಲೇಮಿನಿಂದ ಹೊರಟು ಹಾಮಾತಿನ ಸೀಮೆಯಲ್ಲಿ ಅವರನ್ನು ಸಂಧಿಸಿದನು. ತನ್ನ ಸೀಮೆಯಲ್ಲಿ ಕಾಲಿಡಲು ಅವರಿಗೆ ಅವಕಾಶವನ್ನೇ ಕೊಡಲಿಲ್ಲ.
26 : ಬೇಹುಗಾರರನ್ನು ಅವರ ಪಾಳೆಯಕ್ಕೆ ಕಳುಹಿಸಿದನು. ಅವರು ಹಿಂದಿರುಗಿ ಬಂದು, ರಾತ್ರಿ ವೇಳೆಯಲ್ಲಿ ಇಂಥಿಂಥ ರೀತಿಯಲ್ಲಿ ನಮ್ಮ ಮೇಲೆ ಬೀಳಬೇಕೆಂದು ಅವರು ಗೊತ್ತುಮಾಡಿ ಕೊಂಡಿದ್ದಾರೆಂದು ತಿಳಿಸಿದರು.
27 : ಸೂರ್ಯನು ಮುಳುಗಿದಾಗ ಯೋನಾತನನು ತನ್ನ ಜನರಿಗೆ, “ಎಚ್ಚರವಾಗಿರಿ! ನಿಮ್ಮ ಆಯುಧಗಳನ್ನು ಧರಿಸಿಕೊಂಡೇ ಇರಿ; ರಾತ್ರಿಯೆಲ್ಲಾ ನೀವು ಸಮರಕ್ಕೆ ಸನ್ನದ್ಧರಾಗಿರಬೇಕು,” ಎಂದು ಆಜ್ಞಾಪಿಸಿ, ಪಾಳೆಯದ ಸುತ್ತಲೂ ಪಹರೆಯವರನ್ನು ಇರಿಸಿದನು.
28 : ಯೋನಾತನನೂ ಅವನ ಜನರೂ ಸಮರ ಸನ್ನದ್ಧರಾಗಿದ್ದಾರೆಂದು ಶತ್ರುಗಳು ಕೇಳಿ, ಅಂಜಿ, ಅಂತರಂಗದಲ್ಲೇ ನಡುಗಿದರು; ಮತ್ತು ಪಾಳೆಯದಲ್ಲಿ ಬೆಂಕಿಮಾಡಿ ಓಡಿಹೋದರು.
29 : ಆದರೆ ಈ ಸಂಗತಿ ಯೋನಾತನನಿಗೂ ಅವನ ಜನರಿಗೂ ಬೆಳಗಾಗುವವರೆಗೆ ತಿಳಿಯಲಿಲ್ಲ. ಏಕೆಂದರೆ ಬೆಂಕಿ ಮಾತ್ರ ಅವರಿಗೆ ಕಾಣುತ್ತಿತ್ತು.
30 : ಬೆಳಿಗ್ಗೆ ಯೋನಾತನನು ಅವರನ್ನು ಬೆನ್ನಟ್ಟಿದನು. ಆದರೆ ಅವರನ್ನು ಹಿಡಿಯಲಿಕ್ಕಾಗಲಿಲ್ಲ. ಅವರು ಆಗಲೇ ಎಲ್ಯೂತರಸ್ ನದಿಯನ್ನು ದಾಟಿ ಹೋಗಿದ್ದರು.
31 : ಆಗ ಯೋನಾತನನು ಜೆಬೆದಾಯರೆಂದೆನಿಸಿದ ಅರಬ್ಬಿಯರ ಕಡೆಗೆ ಹೊರಳಿ, ಅವರನ್ನು ಸಂಹರಿಸಿ, ಅವರ ಕೊಳ್ಳೆಯನ್ನು ದಮಸ್ಕಸ್ಸಿಗೆ ತೆಗೆದುಕೊಂಡು ಹೋದನು.
32 : ತರುವಾಯ ಅಲ್ಲಿಂದ ಬಂದು ಆ ಸೀಮೆಯನ್ನೆಲ್ಲಾ ಹಾದುಹೋದನು.
33 : ಇತ್ತ ಸಿಮೋನನು ಹೊರಟು ಅಷ್ಕೆಲೋನಿನ ಹಾಗು ಅದರ ನೆರೆಯಲ್ಲಿದ್ದ ಕೋಟೆಗಳವರೆಗೆ ಪ್ರಯಾಣ ಮಾಡುತ್ತಾ ಜೊಪ್ಪದ ಕಡೆಗೆ ತಿರುಗಿ, ಅದನ್ನು ಕೈವಶಮಾಡಿಕೊಂಡನು.
34 : ಏಕೆಂದರೆ ಅಲ್ಲಿದ್ದವರು ಆ ಕೋಟೆಯನ್ನು ದೆಮೆತ್ರಿಯನ ಬೆಂಬಲಿಗರಿಗೆ ಒಪ್ಪಿಸುವ ಹವಣಿಕೆಯಲ್ಲಿದ್ದಾರೆಂದು ಅವನು ಕೇಳಿದ್ದನು. ಆದ್ದರಿಂದ ಅದನ್ನು ಕಾಯುವುದಕ್ಕಾಗಿ ಅಲ್ಲಿ ಒಂದು ರಕ್ಷಣಾ ದಳವನ್ನಿಟ್ಟನು.
35 : ಯೋನಾತನನು ಹಿಂದಿರುಗಿ ಬಂದು, ಜನರ ಹಿರಿಯರನ್ನು ಒಟ್ಟಿಗೆ ಕರೆದು, ಜುದೇಯದಲ್ಲಿರುವ ಕೋಟೆಗಳನ್ನು ಕಟ್ಟುವ ಬಗ್ಗೆ ಆಲೋಚಿಸಿದನು.
36 : ಜೆರುಸಲೇಮಿನ ಗೋಡೆಗಳನ್ನು ಎತ್ತರಿಸುವುದು, ಮಾರುವುದು ಹಾಗು ಕೊಳ್ಳುವುದು ನಡೆಯದಂತೆ ಕೋಟೆಯನ್ನು ಪೇಟೆಯಿಂದ ಬೇರ್ಪಡಿಸುವುದು ಮತ್ತು ಅವುಗಳ ನಡುವೆ ದೊಡ್ಡ ದಿಬ್ಬವೊಂದನ್ನು ನಿರ್ಮಿಸುವುದು ಇವುಗಳನ್ನು ಕುರಿತು ಅವರೊಂದಿಗೆ ಸಮಾಲೋಚಿಸಿದನು.
37 : ತರುವಾಯ, ಆ ದಿಬ್ಬ ಕಟ್ಟುವುದಕ್ಕೆ ಅವರು ಕೂಡಿಬಂದರು. ಆಗ ಪೂರ್ವ ದಿಕ್ಕಿನಲ್ಲಿದ್ದ ಹಳ್ಳದ ಕಡೆಯ ಗೋಡೆ ಬಿದ್ದು ಹೋಗಿದ್ದರಿಂದ ಖಫೆನಾಥ ಎಂಬ ಭಾಗವನ್ನು ಸರಿಪಡಿಸಿದನು.
38 : ಸಿಮೋನನು ಇಳುಕಲು ಸೀಮೆಯಲ್ಲಿ, ಅದೀದ ಪಟ್ಟಣವನ್ನು ಕಟ್ಟಿಸಿ, ಭದ್ರಗೊಳಿಸಿ, ಅದಕ್ಕೆ ಬಾಗಿಲು ಅಗುಳಿಗಳನ್ನು ಹಾಕಿಸಿದನು.
39 : ತ್ರಿಫೋನನು ಅರಸ ಅಂತಿಯೋಕನನ್ನು ಸೋಲಿಸಿ ತಾನೇ ಕಿರೀಟವನ್ನು ಧರಿಸಿ, ಏಷ್ಯ ಸೀಮೆಯನ್ನು ಆಳಬೇಕೆಂದು ಹವಣಿಸಿದನು.
40 : ದರೆ ಯೋನಾತನನು ಹಾಗೆ, ಮಾಡಗೊಡಲಿಕ್ಕಿಲ್ಲೆಂದು ಅಂಜಿದನು. ಆದುದರಿಂದ ಯೋನಾತನನನ್ನು ಸಂಹರಿಸುವ ಬಗೆಯನ್ನು ಹುಡುಕಿ ಬೇತ್ಯಾನಿಗೆ ಹೊರಟು ಬಂದನು.
41 : ಯೋನಾತನನು ಅವನನ್ನು ಎದುರಿಸುವುದಕ್ಕೆ ನಲವತ್ತು ಸಾವಿರ ಒಳ್ಳೆಯ ಯೋಧರನ್ನು ಕರೆದುಕೊಂಡು ಬೇತ್ಯಾನಿಗೆ ಬಂದನು.
42 : ಅವನು ಮಹಾಸೈನ್ಯದೊಂದಿಗೆ ಬಂದುದನ್ನು ತ್ರಿಫೋನನು ಕಂಡು ಅವನ ಮೇಲೆ ಕೈಮಾಡಲು ಅಂಜಿದನು.
43 : ಅವನನ್ನು ಬರಮಾಡಿಕೊಂಡು ತನ್ನ ಸ್ನೇಹಿತರೆಲ್ಲರ ಮುಂದೆ ಅವನನ್ನು ಪ್ರಶಂಸಿಸಿ, ಕಾಣಿಕೆಗಳನ್ನು ಕೊಟ್ಟು, ತನಗೇ ಎಂಬಂತೆ ಅವನಿಗೆ ವಿಧೇಯರಾಗಿರಬೇಕೆಂದು ತನ್ನ ಸೈನ್ಯದವರಿಗೆಲ್ಲಾ ಆಜ್ಞಾಪಿಸಿದನು.
44 : ಅನಂತರ ಯೋನಾತನನಿಗೆ, “ನಮ್ಮಲ್ಲಿ ಯುದ್ಧ ಪ್ರಶ್ನೆಯೇ ಇಲ್ಲವಲ್ಲಾ? ನೀನು ಈ ಜನಕ್ಕೆಲ್ಲಾ ತೊಂದರೆ ಕೊಟ್ಟಿದ್ದೇಕೆ?
45 : ಅವರನ್ನು ಅವರವರ ಮನೆಗೆ ಕಳುಹಿಸಿಬಿಡು; ಆದರೆ ನಿನ್ನ ಜೊತೆಯಲ್ಲಿರುವುದಕ್ಕೆ ಕೆಲವರನ್ನು ಮಾತ್ರ ಆಯ್ದುಕೊಂಡು ನನ್ನ ಸಂಗಡ ಪ್ತೊಲೆಮಾಯಕ್ಕೆ, ಬಾ; ಅದನ್ನೂ ಉಳಿದ ದುರ್ಗಗಳನ್ನೂ ಪಡೆಗಳನ್ನೂ ಅರಸನ ಎಲ್ಲ ಅಧಿಕಾರಿಗಳನ್ನೂ ನಿನ್ನ ವಶಕ್ಕೆ ಕೊಟ್ಟು ನಾನು ಹೊರಟು ಹೋಗುತ್ತೇನೆ. ಇದಕ್ಕಾಗಿಯೇ ನಾನು ಬಂದದ್ದು,” ಎಂದು ಹೇಳಿದನು.
46 : ಯೋನಾತನನು ಅವನನ್ನು ನಂಬಿ, ಅವನು ಹೇಳಿದಂತೆ ಸೈನ್ಯವನ್ನು ಕಳುಹಿಸಿಬಿಟ್ಟನು. ಅವರು ಜುದೇಯ ನಾಡಿಗೆ ಹೊರಟು ಹೋದರು.
47 : ಆದರೆ ತನಗೋಸ್ಕರ ಅವನು ಮೂರು ಸಾವಿರ ಜನರನ್ನು ಉಳಿಸಿಕೊಂಡನು; ಮತ್ತು ಅವರಲ್ಲಿ ಎರಡು ಸಾವಿರ ಜನರನ್ನು ಗಲಿಲೇಯದಲ್ಲಿ ಬಿಟ್ಟು, ಒಂದು ಸಾವಿರ ಜನರು ತನ್ನ ಸಂಗಡ ಹೋಗುವಂತೆ ಮಾಡಿದನು.
48 : ಯೋನಾತನನು ಪ್ತೊಲೆಮಾಯದವರು ಅದರ ಬಾಗಿಲುಗಳನ್ನು ಮುಚ್ಚಿ, ಅವನನ್ನು ಹಿಡಿದುಕೊಂಡು, ಅವನ ಸಂಗಡ ಇದ್ದವರನ್ನೆಲ್ಲ ಕತ್ತಿಯಿಂದ ಸಂಹರಿಸಿದರು.
49 : ತ್ರಿಫೋನನು ಯೋನಾತನನ ಜನರನ್ನೆಲ್ಲ ಸಂಹರಿಸಲು ತನ್ನ ಕಾಲ್ದಳವನ್ನೂ ರಾಹುತರನ್ನೂ ಗಲಿಲೇಯದ ದೊಡ್ಡ ಬಯಲು ಸೀಮೆಗೆ ಕಳುಹಿಸಿದನು.
50 : ಯೋನಾತನನೂ ಅವನ ಜೊತೆ ಇದ್ದವರೆಲ್ಲರೂ ಸೆರೆಹಿಡಿಯಲ್ಪಟ್ಟು ನಾಶವಾದರೆಂಬ ವಾರ್ತೆಯನ್ನು ಯೆಹೂದ್ಯ ಸೈನಿಕರೆಲ್ಲರು ಕೇಳಿ, ಒಬ್ಬರನ್ನೊಬ್ಬರು ಹುರಿದುಂಬಿಸಿ, ಯುದ್ಧಸನ್ನದ್ಧರಾಗಿ ಒಬ್ಬರನ್ನೊಬ್ಬರು ಅಂಟಿಕೊಂಡು ಹೋರಾಡಲು ಸಜ್ಜಾದರು.
51 : ಅವರನ್ನು ಬೆನ್ನಟ್ಟಿ ಬಂದವರು, ಅವರು ತಮ್ಮ ಪ್ರಾಣಕ್ಕಾಗಿ ಕಾದಾಡಲು ಸಿದ್ಧರಾಗಿದ್ದಾರೆಂದು ಕಂಡು, ಹಿಂದಕ್ಕೆ ತಿರುಗಿದರು.
52 : ಸೈನಿಕರೆಲ್ಲರೂ ಸಮಾಧಾನದಿಂದ ಜುದೇಯ ನಾಡಿಗೆ ಹಿಂದಿರುಗಿ ಬಂದು, ಯೋನಾತನನಿಗಾಗಿ ಹಾಗು ಅವನ ಸಂಗಡಿಗರಿಗಾಗಿ ಗೋಳಾಡಿದರು. ಅವರೆಲ್ಲರು ಭಯಪೀಡಿತರಾದರು. ಇಸ್ರಯೇಲರೆಲ್ಲರು ಬಹಳವಾಗಿ ಅತ್ತು ಗೋಳಾಡಿದರು.
53 : ನೆರೆಹೊರೆಯಲ್ಲಿದ್ದ ಅನ್ಯಜನರು, “ಇವರನ್ನು ಈಗ ಪೂರ್ತಿ ನಾಶಗೊಳಿಸಬಹುದು; ಏಕೆಂದರೆ ಇವರಿಗೆ ಈಗ ದೊರೆಯೂ ಇಲ್ಲ, ಯಾವ ಸಹಾಯಕನೂ ಇಲ್ಲ. ಆದುದರಿಂದ ನಾವೀಗ ಅವರ ಮೇಲೆ ಯುದ್ಧಮಾಡಿ, ಜನಾಂಗಗಳಿಂದ ಅವರ ಹೆಸರನ್ನೇ ಅಳಿಸಿಬಿಡೋಣ,” ಎಂದುಕೊಂಡರು.

· © 2017 kannadacatholicbible.org Privacy Policy