1 : ರಾಜ ಅಸ್ತ್ಯಗೀಯನು ಕಾಲವಾಗಿ ತನ್ನ ಪಿತೃಗಳನ್ನು ಸೇರಿಕೊಂಡ ಬಳಿಕ ಪರ್ಷಿಯದ ಅರಸ ಸೈರಸನು ರಾಜ್ಯಾಡಳಿತವನ್ನು ವಹಿಸಿಕೊಂಡ.
2 : ದಾನಿಯೇಲನು ಈ ಅರಸನ ಆಪ್ತ ಸಂಗಡಿಗನಾಗಿದ್ದ. ಅರಸನ ಮಿತ್ರರಲ್ಲೆಲ್ಲಾ ಹೆಚ್ಚು ಸನ್ಮಾನಿತನಾಗಿದ್ದ.
3 : ಬಾಬಿಲೋನಿನವರಲ್ಲಿ ಬೇಲ್ ಎಂಬ ಒಂದು ವಿಗ್ರಹವಿತ್ತು. ಅದಕ್ಕೆ ಅನುದಿನವೂ ಹನ್ನೆರಡು ಸೇರು ನಯವಾದ ಗೋದಿ ಹಸಿಟ್ಟು, ನಾಲ್ವತ್ತು ಕುರಿಗಳು ಹಾಗು ಆರು ಬುದ್ದಲಿ ದ್ರಾಕ್ಷಾರಸ ವೆಚ್ಚವಾಗುತ್ತಿತ್ತು.
4 : ಅರಸನು ಆ ವಿಗ್ರಹವನ್ನು ಪೂಜಿಸಿ ಆರಾಧಿಸಲು ಪ್ರತಿದಿನವು ಅಲ್ಲಿಗೆ ಹೋಗುತ್ತಿದ್ದ. ದಾನಿಯೇಲನು ಮಾತ್ರ ತನ್ನ ದೇವರನ್ನೇ ಆರಾಧಿಸುತ್ತಿದ್ದ. ಒಮ್ಮೆ ಅರಸನು ಅವನಿಗೆ, “ನೀನು ಬೇಲ್‍ದೇವತೆಯನ್ನು ಆರಾಧಿಸುವುದಿಲ್ಲವೇಕೆ?” ಎಂದು ಕೇಳಿದ.
5 : ಅದಕ್ಕೆ ಅವನು, “ಕೈಯಿಂದ ಮಾಡಿದ ಮೂರ್ತಿಗಳನ್ನು ನಾನು ಪೂಜಿಸುವವನಲ್ಲ. ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿ ಎಲ್ಲಾ ಜೀವಿಗಳ ಮೇಲೆ ದೊರೆತನವುಳ್ಳ ಜೀವಸ್ವರೂಪನಾದ ದೇವರನ್ನೇ ಪೂಜಿಸುತ್ತೇನೆ,” ಎಂದ.
6 : ಅದಕ್ಕೆ ಅರಸನು, “ಬೇಲ್‍ದೇವತೆ ಜೀವವುಳ್ಳ ದೇವರೆಂದು ನೀನು ಭಾವಿಸುವುದಿಲ್ಲವೆ?” ಎಂದು ಕೇಳಿದ.
7 : ಅದಕ್ಕೆ ದಾನಿಯೇಲನು ನಕ್ಕು, “ರಾಜರೇ, ಮೋಸಹೋಗದಿರಿ! ಅದು ಒಳಗೆ ಬರೀ ಮಣ್ಣು, ಹೊರಗೆ ಕಂಚು ಮಾತ್ರ. ಅದು ಎಂದೂ ಏನನ್ನೂ ತಿನ್ನಲಿಲ್ಲ, ಏನನ್ನೂ ಕುಡಿಯಲಿಲ್ಲ,” ಎಂದ.
8 : ಇದನ್ನು ಕೇಳಿ ಕೋಪಗೊಂಡ ಅರಸನು ಪೂಜಾರಿಗಳನ್ನು ಕರೆಸಿದ. ಅವರಿಗೆ, “ಈ ವೆಚ್ಚವನ್ನೆಲ್ಲ ಕಬಳಿಸುತ್ತಿರುವವರು ಯಾರೆಂದು ನೀವು ನನಗೆ ತಿಳಿಸಬೇಕು. ಇಲ್ಲದಿದ್ದರೆ ನೀವು ಸಾಯುವಿರಿ.
9 : ಬೇಲ್‍ದೇವತೆಯೇ ಇವುಗಳನ್ನೆಲ್ಲ ತಿನ್ನುತ್ತದೆಂದು ತೋರಿಸಿಕೊಟ್ಟಲ್ಲಿ ದಾನಿಯೇಲನು ಸಾಯುವನು. ಏಕೆಂದರೆ ಅವನು ಬೇಲ್‍ದೇವತೆಯನ್ನು ನಿಂದಿಸಿದ್ದಾನೆ,” ಎಂದ. ಅದಕ್ಕೆ ದಾನಿಯೇಲನು, “ನಿಮ್ಮ ಮಾತಿನಂತೆ ಆಗಲಿ,” ಎಂದು ಉತ್ತರಿಸಿದ.
10 : ಬೇಲ್‍ದೇವತೆಯ ಪೂಜಾರಿಗಳು, ಮಡದಿಮಕ್ಕಳಲ್ಲದೆ, ಮೊತ್ತ ಎಪ್ಪತ್ತು ಮಂದಿ ಇದ್ದರು.
11 : ಅರಸನು ದಾನಿಯೇಲನೊಂದಿಗೆ ಬೇಲ್ ಮಂದಿರಕ್ಕೆ ಬಂದ. ಅಲ್ಲಿದ್ದ ಪೂಜಾರಿಗಳು, “ರಾಜರೇ, ಇಗೋ, ನಾವು ಹೊರಗೆ ಹೋಗುತ್ತೇವೆ. ನೀವೇ ಅದರ ಮುಂದೆ ಊಟವನ್ನು ಬಡಿಸಿ, ದ್ರಾಕ್ಷಾರಸವನ್ನು ಬೆರೆಸಿಟ್ಟು, ಬಾಗಿಲನ್ನು ಮುಚ್ಚಿ, ನಿಮ್ಮ ಮುದ್ರೆ ಉಂಗುರದಿಂದ ಆ ಬಾಗಿಲಿಗೆ ಮುದ್ರೆ ಹಾಕಿ.
12 : ಬೆಳಿಗ್ಗೆ ನೀವು ಬಂದಾಗ ಬೇಲ್‍ದೇವತೆ ಅದೆಲ್ಲವನ್ನು ತಿನ್ನಲಿಲ್ಲ ಎಂದು ನಿಮಗೆ ಕಂಡುಬಂದಲ್ಲಿ ನಾವು ಸಾವನ್ನು ಅನುಭವಿಸುತ್ತೇವೆ. ಇಲ್ಲದಿದ್ದರೆ, ನಮ್ಮ ವಿರುದ್ಧ ಸುಳ್ಳುಹೇಳುವ ಆ ದಾನಿಯೇಲನು ಸಾವನ್ನು ಅನುಭವಿಸಲಿ!” ಎಂದರು.
13 : ಹೀಗೆಂದು ಹೇಳಿಯಾದ ಮೇಲೆ ಪೂಜಾರಿಗಳು ನಿಶ್ಚಿಂತರಾಗಿದ್ದರು. ಏಕೆಂದರೆ ಪೀಠದ ಅಡಿಯಲ್ಲಿ ಅವರು ಒಂದು ಗುಪ್ತದ್ವಾರವನ್ನು ಮಾಡಿದ್ದರು. ಅದರ ಮೂಲಕ ಸದಾ ಹೋಗಿ ಬಂದು ಆ ಕಾಣಿಕೆ ಪದಾರ್ಥಗಳನ್ನೆಲ್ಲ ತಿನ್ನುವುದು ಅವರ ವಾಡಿಕೆಯಾಗಿತ್ತು.
14 : ಪೂಜಾರಿಗಳು ಬೇಲ್ ಮಂದಿರದಿಂದ ಹೊರಟುಹೋದ ಮೇಲೆ ಅರಸನು ಆ ದೇವತೆಯ ಮುಂದೆ ಅನ್ನಪಾನಗಳನ್ನು ಇರಿಸಿದ. ಇತ್ತ ದಾನಿಯೇಲನು ತನ್ನ ಸೇವಕರಿಗೆ ಬೂದಿಯನ್ನು ತರಹೇಳಿದ. ಅವರು ಅದನ್ನು ಅರಸನೊಬ್ಬನಿಗೇ ತಿಳಿಯುವಂತೆ ಅವನ ಕಣ್ಮುಂದೆಯೆ ಮಂದಿರದಲ್ಲೆಲ್ಲಾ ಹರಡಿದರು. ಬಾಗಿಲನ್ನು ಬಂದು ಮಾಡಲಾಯಿತು. ಅರಸನ ಮುದ್ರೆ ಉಂಗುರದಿಂದ ಅದಕ್ಕೆ ಮುದ್ರೆಹಾಕಿ ಎಲ್ಲರು ಹೊರಟು ಹೋದರು.
15 : ಅದೇ ರಾತ್ರಿ ಪೂಜಾರಿಗಳು ತಮ್ಮ ವಾಡಿಕೆಯಂತೆ ಮಡದಿ ಮಕ್ಕಳ ಸಮೇತ ಬಂದು ಅಲ್ಲಿ ಇದ್ದುದನ್ನೆಲ್ಲ ತಿಂದು ಕುಡಿದರು.
16 : ಬೆಳಿಗ್ಗೆ ಅರಸನು ನಸುಕಿನಲ್ಲೇ ಎದ್ದು ಬಂದ. ಅವನ ಸಮೇತ ದಾನಿಯೇಲನೂ ಇದ್ದ.
17 : ಅರಸನು ದಾನಿಯೇಲನಿಗೆ, “ರಾಜ ಮುದ್ರೆಗಳೆಲ್ಲವು ಭದ್ರವಾಗಿವೆಯೋ?” ಎನ್ನಲು ದಾನಿಯೇಲನು, “ಹೌದು ರಾಜರೇ, ಭದ್ರವಾಗಿವೆ” ಎಂದ.
18 : ಬಾಗಿಲು ತೆರೆದ ಕೂಡಲೆ ಅರಸನು ಪೀಠದ ಕಡೆಗೆ ದೃಷ್ಟಿ ಹರಿಸಿದ. “ಬೇಲ್ ದೇವರೇ, ನೀವು ದೊಡ್ಡವರು! ಕಪಟವೆಂಬುದೇನೂ ನಿಮ್ಮಲ್ಲಿಲ್ಲ!” ಎಂದು ಗಟ್ಟಿಯಾಗಿ ಕೂಗಿ ಹೇಳಿದ.
19 : ಆದರೆ ದಾನಿಯೇಲನು ನಕ್ಕು, ಅರಸನು ಒಳಗೆ ಹೋಗದಂತೆ ತಡೆಹಿಡಿದು, “ನೆಲಗಟ್ಟನ್ನು ಸ್ವಲ್ಪ ನೋಡಿ ಸ್ವಾಮಿ! ಆ ಹೆಜ್ಜೆಯ ಗುರುತು ಯಾರವೆಂಬುದನ್ನು ಸ್ವಲ್ಪ ಗಮನಿಸಿ,” ಎಂದು ಸೂಚಿಸಿದ.
20 : ಅರಸನು, “ಗಂಡಸರ, ಹೆಂಗಸರ ಮತ್ತು ಮಕ್ಕಳ ಹೆಜ್ಜೆ ಗುರುತುಗಳನ್ನು ನಾನಿಲ್ಲಿ ಕಾಣುತ್ತಿದ್ದೇನಲ್ಲಾ!” ಎಂದು ಹೇಳಿ, ಸಿಟ್ಟುಗೊಂಡ.
21 : ಪೂಜಾರಿಗಳನ್ನು ಅವರ ಮಡದಿ ಮಕ್ಕಳ ಸಹಿತವಾಗಿ ಹಿಡಿದು ತರುವಂತೆ ಮಾಡಿದ. ಅವರು ತಾವು ಯಾವ ಹಾದಿಯಿಂದ ಒಳಗೆ ಬಂದು ಪೀಠದ ಮೇಲಿದ್ದುದನ್ನೆಲ್ಲ ತಿನ್ನುತ್ತಿದ್ದರೋ ಆ ಗುಪ್ತದ್ವಾರಗಳನ್ನು ಅವನಿಗೆ ತೋರಿಸಿದರು. ಬೇಲ್‍ದೇವತೆಯನ್ನು ದಾನಿಯೇಲನ ವಶಕ್ಕೆ ಒಪ್ಪಿಸಿದ. ದಾನಿಯೇಲನು ಬೇಲ್‍ದೇವತೆಯನ್ನು ಅದರ ಮಂದಿರವನ್ನೂ ಕೆಡವಿಹಾಕಿದ.
22 : ಅರಸನುಯ ಅವರೆಲ್ಲರನ್ನು ಸಂಹರಿಸಿ, ಬೇಲ್‍ದೇವತೆಯನ್ನು ದಾನಿಯೇಲನ ವಶಕ್ಕೆ ಒಪ್ಪಿಸಿದ. ದಾನಿಯೇಲನು ಬೇಲ್‍ದೇವತೆಯನ್ನು ಅದರ ಮಂದಿರವನ್ನೂ ಕೆಡವಿಹಾಕಿದ.
23 : ಘಟಸರ್ಪವನ್ನು ಕೊಂದ ದಾನಿಯೇಲ
ಅದೇ ಸ್ಥಳದಲ್ಲಿ ಒಂದು ಘಟಸರ್ಪ ಇತ್ತು. ಅದನ್ನು ಬಾಬಿಲೋನಿಯರು ಪೂಜಿಸುತ್ತಿದ್ದರು.
24 : ಅರಸನು ದಾನಿಯೇಲನಿಗೆ, “ಇದು ಕೂಡ ಕಂಚಿನದೇ ಎಂದು ಹೇಳಬಲ್ಲೆಯಾ? ನೋಡು, ಅದು ಜೀವಂತವಾಗಿದೆ. ತಿನ್ನುತ್ತದೆ, ಕುಡಿಯುತ್ತದೆ, ಈಗ ಅದು ಜೀವವುಳ್ಳ ದೇವರಲ್ಲ ಎಂದು ಹೇಳಲಾಗದು. ಆದುದರಿಂದ ಅದನ್ನು ಆರಾಧಿಸು,” ಎಂದ.
25 : ಅದಕ್ಕೆ ದಾನಿಯೇಲನು, “ನನ್ನ ದೇವರಾದ ಸರ್ವೇಶ್ವರನನ್ನು ಮಾತ್ರ ನಾನು ಆರಾಧಿಸುತ್ತೇನೆ, ಅವರೇ ಜೀವ ಸ್ವರೂಪರಾದ ದೇವರು.
26 : ರಾಜರೇ, ತಮ್ಮಿಂದ ಅಪ್ಪಣೆಯಾದರೆ ಕತ್ತಿ ಕೋಲುಗಳಿಲ್ಲದೆಯೇ ಈ ಸರ್ಪವನ್ನು ಸಂಹರಿಸಬಲ್ಲೆ,” ಎಂದ. ಅರಸನು, “ಅಪ್ಪಣೆ ಕೊಟ್ಟಿದ್ದೇನೆ,” ಎಂದ.
27 : ದಾನಿಯೇಲನು ತಾರೆಣ್ಣೆಯನ್ನೂ ಕೊಬ್ಬನ್ನೂ ಹಾಗು ಕೂದಲನ್ನೂ ತೆಗೆದುಕೊಂಡು ಉಂಡೆಗಳನ್ನಾಗಿ ಮಾಡಿ ಸರ್ಪದ ಬಾಯೊಳಗೆ ಇಡುವಂತೆ ಮಾಡಿದ. ಸರ್ಪವು ಅದನ್ನು ತಿಂದದ್ದೆ ಹೊಟ್ಟೆಹೊಡೆದು ಸತ್ತುಹೋಯಿತು. ಆಗ ದಾನಿಯೇಲನು, “ನೀವು ಪೂಜಿಸುವ ದೇವರನ್ನು ನೋಡಿ!” ಎಂದ.
28 : ಬಾಬಿಲೋನಿನವರು ಇದನ್ನು ಕೇಳಿ ಕಡು ಕೋಪಗೊಂಡರು. ಅರಸನ ವಿರುದ್ಧ ಒಟ್ಟುಕೂಡಿಕೊಂಡು, “ರಾಜನು ಯೆಹೂದ್ಯರ ಮತಕ್ಕೆ ಸೇರಿ ಬಿಟ್ಟಿದ್ದಾನೆ. ಅವನು ಬೇಲ್‍ದೇವತೆಯನ್ನು ಕೆಡವಿ ಹಾಳುಮಾಡಿದ್ದಾನೆ. ಘಟಸರ್ಪವನ್ನು ಕೊಂದು ಹಾಕಿದ್ದಾನೆ. ಪೂಜಾರಿಗಳನ್ನು ಕೊಲ್ಲಿಸಿದ್ದಾನೆ,” ಎಂದು ಮಾತಾಡಿಕೊಂಡು ಅರಸನ ಬಳಿಗೆ ಬಂದರು.
29 : “ದಾನಿಯೇಲನನ್ನು ನಮಗೆ ಒಪ್ಪಿಸಿಬಿಡಿ. ಇಲ್ಲವಾದರೆ ನಿಮ್ಮನ್ನೂ ನಿಮ್ಮ ಮನೆಯವರನ್ನೂ ಕೊಲ್ಲುತ್ತೇವೆ,” ಎಂದು ಕೂಗಾಡಿದರು.
30 : ಅವರು ಬಹಳವಾಗಿ ಒತ್ತಾಯ ಪಡಿಸುತ್ತಿರುವುದನ್ನು ಕಂಡ ಅರಸನು ಬಲವಂತಕ್ಕೆ ಒಳಪಟ್ಟು, ದಾನಿಯೇಲನನ್ನು ಅವರ ಕೈಗೆ ಒಪ್ಪಿಸಿಬಿಟ್ಟ.
31 : ಸಿಂಹಗುಹೆಯಲ್ಲಿ ದಾನಿಯೇಲ
ಅವರು ದಾನಿಯೇಲನನ್ನು ತೆಗೆದುಕೊಂಡು ಹೋಗಿ ಸಿಂಹಗಳ ಗವಿಯಲ್ಲಿ ಹಾಕಿದರು. ಅಲ್ಲಿ ಅವನು ಆರು ದಿನ ಇದ್ದ. ಆ ಗವಿಯಲ್ಲಿ ಏಳು ಸಿಂಹಗಳಿದ್ದವು.
32 : ಅವುಗಳಿಗೆ ದಿನಂಪ್ರತಿ ಎರಡು ಹೆಣಗಳನ್ನೂ ಎರಡು ಕುರಿಗಳನ್ನೂ ಹಾಕುವ ಪದ್ಧತಿಯಿತ್ತು. ಅವು ದಾನಿಯೇಲನನ್ನು ತಿಂದು ಬಿಡಲಿ ಎಂಬ ಉದ್ದೇಶದಿಂದ ಇವನ್ನೆಲ್ಲ ಹಾಕುವುದನ್ನು ಅಷ್ಟು ದಿನ ನಿಲ್ಲಿಸಲಾಗಿತ್ತು.
33 : ಜುದೇಯ ನಾಡಿನಲ್ಲಿ ಹಬಕ್ಕೂಕನೆಂಬ ಒಬ್ಬ ಪ್ರವಾದಿ ಇದ್ದ. ಅವನು ಅಡಿಗೆ ಮಾಡಿಕೊಂಡು, ರೊಟ್ಟಿತುಂಡುಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಕೊಯ್ಲಾಳುಗಳಿಗೆ ಕೊಡಲು ಹೊಲದತ್ತ ಹೊರಟಿದ್ದ.
34 : ಆಗ ಸರ್ವೇಶ್ವರನ ದೂತನು ಹಬಕ್ಕೂಕನಿಗೆ, “ನಿನ್ನಲ್ಲಿರುವ ಬುತ್ತಿಯನ್ನು ಬಾಬಿಲೋನಿನ ಸಿಂಹದ ಗುಹೆಯಲ್ಲಿ ಇರುವ ದಾನಿಯೇಲನಿಗೆ ತೆಗೆದುಕೊಂಡು ಹೋಗಿ ಕೊಡು,” ಎಂದ.
35 : ಅದಕ್ಕೆ ಹಬಕ್ಕೂಕನು, “ಸ್ವಾಮೀ, ನಾನು ಬಾಬಿಲೋನನ್ನು ಎಂದೂ ನೋಡಿದವನಲ್ಲ, ಆ ಗವಿ ಎಲ್ಲಿದೆ ಎಂಬುದು ಕೂಡ ತಿಳಿಯದು,” ಎಂದು ಉತ್ತರಕೊಟ್ಟ.
36 : ಆಗ ಆ ದೂತನು ಅವನ ತಲೆಯ ಮೇಲೆ ಕೈ ಹಾಕಿ, ಅವನ ಜುಟ್ಟನ್ನು ಹಿಡಿದು, ಅವನನ್ನು ಎತ್ತಿಕೊಂಡು, ತನ್ನ ಉಸಿರಿನ ರಭಸದಿಂದಲೆ ಅವನನ್ನು ಒಯ್ದು, ಬಾಬಿಲೋನಿನಲ್ಲಿದ್ದ ಗವಿಯ ಮೇಲೆ ನಿಲ್ಲಿಸಿದ.
37 : ಹಬಕ್ಕೂಕನು, “ದಾನಿಯೇಲನೇ, ಎಲೈ ದಾನಿಯೇಲನೇ, ದೇವರು ನಿನಗೆಂದು ಕಳಿಸಿದ ಈ ಬುತ್ತಿಯನ್ನು ತೆಗೆದುಕೋ,” ಎಂದು ಕೂಗಿದ.
38 : ಅದಕ್ಕೆ ದಾನಿಯೇಲನು, “ದೇವರೇ, ನೀವು ನನ್ನನ್ನು ನೆನಪಿಗೆ ತಂದುಕೊಂಡಿರಿ. ನಿಮ್ಮನ್ನು ಪ್ರೀತಿಸುವವರನ್ನು ನೀವು ಎಂದಿಗೂ ಕೈಬಿಡುವುದಿಲ್ಲ,” ಎಂದು ಹೇಳಿ ಎದ್ದು ಊಟಮಾಡಿದ.
39 : ತಕ್ಷಣವೇ ಸರ್ವೇಶ್ವರನ ದೂತನು ಹಬಕ್ಕೂಕನನ್ನು ಒಯ್ದು ಅವನು ಮೊದಲಿದ್ದ ಸ್ಥಳದಲ್ಲೇ ತಂದು ನಿಲ್ಲಿಸಿದ.
40 : ಏಳನೆಯ ದಿನ ಅರಸನು ದಾನಿಯೇಲನ ಶೋಕ ಸಂಸ್ಕಾರಕ್ಕಾಗಿ ಅಲ್ಲಿಗೆ ಬಂದ. ಗವಿಗೆ ಬಂದ ಮೇಲೆ ಒಳಗೆ ಇಣಿಕಿ ನೋಡಿದ. ಏನಾಶ್ಚರ್ಯ! ದಾನಿಯೇಲನು ಕುಳಿತುಕೊಂಡಿದ್ದ.
41 : ಇದನ್ನು ಕಂಡ ಅರಸನು, ಸ್ವರವೆತ್ತಿ, “ಸರ್ವೇಶ್ವರಾ, ದಾನಿಯೇಲನ ದೇವರೇ, ನೀವು ನಿಜವಾಗಿಯೂ ದೊಡ್ಡವರು, ನಿಮ್ಮ ಹೊರತು ಬೇರೆ ಯಾರೂ ದೇವರಿಲ್ಲ!” ಎಂದು ಉದ್ಗರಿಸಿದ.
42 : ಬಳಿಕ ದಾನಿಯೇಲನನ್ನು ಮೇಲಕ್ಕೆಳೆದು ಅವನನ್ನು ನಾಶಮಾಡಬೇಕೆಂದಿದ್ದ ಎಲ್ಲರನ್ನು ಗವಿಗೆ ಹಾಕಿಸಿದ. ಕ್ಷಣಮಾತ್ರದಲ್ಲೇ, ಅರಸನ ಕಣ್ಣೆದುರಿನಲ್ಲೇ ಅವರನ್ನು ಸಿಂಹಗಳು ತಿಂದು ಹಾಕಿದವು.