1 : ದೇವರು ಆಜ್ಞಾಪೂರ್ವಕವಾಗಿ ತನಗೆ ತಿಳಿಸಿದ್ದನ್ನು ಬಾಬಿಲೋನಿಯದ ಅರಸನಿಂದ ಬಂಧಿತರಾಗಿ ಬಾಬಿಲೋನಿಗೆ ಹೋಗಲಿದ್ದವರಿಗೆ ಯೆರೆಮೀಯನು ಬರೆದು ಕಳುಹಿಸಿದ ಪತ್ರದ ಪ್ರತಿಯಿದು:
ಯೆಹೂದ್ಯರಿಗೆ ದೀರ್ಘಕಾಲದ ಸೆರೆ
2 : ದೇವರ ಮುಂದೆ ನೀವು ಪಾಪಕಟ್ಟಿಕೊಂಡಿರಿ. ಈ ಕಾರಣ, ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನಿಂದ ಬಂಧಿತರಾಗಿ ಬಾಬಿಲೋನಿಗೆ ಸೆರೆಹೋಗಲಿದ್ದೀರಿ.
3 : ಇಂತಿರಲು, ನೀವು ಬಾಬಿಲೋನಿಗೆ ಹೋಗಿ ಸೇರಿದ ಮೇಲೆ ಅನೇಕ ವರ್ಷಗಳವರೆಗೆ, ಅಂದರೆ ಏಳು ತಲೆ ಮಾರಿನವರೆಗೆ, ದೀರ್ಘಕಾಲ ಅಲ್ಲೇ ಇರುವಿರಿ. ಅನಂತರ ದೇವರು ಸಮಾಧಾನದಿಂದ ನಿಮ್ಮನ್ನು ಅಲ್ಲಿಂದ ಹೊರತರುವರು.
4 : ಬಾಬಿಲೋನಿನಲ್ಲಿ ಬೆಳ್ಳಿಬಂಗಾರದಿಂದಲೂ ಮರದಿಂದಲೂ ತಯಾರಿಸಿದ ದೇವರುಗಳನ್ನು ಜನರು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆಯಾಗಿ ಹೋಗುವುದನ್ನು ನೀವು ಕಾಣುವಿರಿ. ಅವು ಅನ್ಯಜನರಿಗೂ ಭಯಹುಟ್ಟಿಸುವಂಥದ್ದಾಗಿರುವುವು.
5 : ಆದುದರಿಂದ ನೀವು ಆ ಅನ್ಯಧರ್ಮೀಯರನ್ನು ಅನುಸರಿಸದಂತೆ ಎಚ್ಚರಿಕೆಯಿಂದಿರಿ! ಜನಜಂಗುಳಿ ಆ ವಿಗ್ರಹಗಳ ಹಿಂಭಾಗದಲ್ಲೂ ಮುಂಭಾಗದಲ್ಲೂ ಸಾಷ್ಟಾಂಗವೆರಗಿ ಪೂಜಿಸುವುದನ್ನು ಕಂಡಾಗ, ನೀವು ಆ ದೇವರುಗಳಿಗೆ ಭಯಪಡಬೇಕಾಗಿಲ್ಲ.
6 : ಬದಲಿಗೆ ನಿಮ್ಮ ಮನಸ್ಸಿನಲ್ಲೇ, “ಸರ್ವೇಶ್ವರಾ, ನಾವು ನಿಮ್ಮನ್ನು ಮಾತ್ರ ಆರಾಧಿಸಬೇಕಾದವರು,” ಎಂದು ಹೇಳಿಕೊಳ್ಳಿ.
7 : ದೇವದೂತನು ನಿಮ್ಮ ಸಂಗಡ ಇರುವನು. ಅವನು ನಿಮ್ಮ ಪ್ರಾಣವನ್ನು ಕಾಪಾಡುವನು.
ವಿಗ್ರಹಗಳ ನಿಸ್ಸಹಾಯಕತೆ
8 : ಆ ವಿಗ್ರಹಗಳ ನಾಲಗೆಯನ್ನು ಬಡಗಿಯು ಬೆಳ್ಳಿಬಂಗಾರದ ತಗಡುಗಳಿಂದ ಹೊದಿಸಿ ನುಣುಪು ಮಾಡಿದ್ದಾನೆ. ಅವುಗಳೆಲ್ಲ ಸುಳ್ಳು ದೇವರುಗಳು, ಅವುಗಳಿಂದ ಮಾತಾಡಲು ಸಾಧ್ಯವಿಲ್ಲ.
9 : ಆಭರಣಗಳನ್ನು ಬಯಸುವ ಹುಡುಗಿಯನ್ನು ಅಲಂಕರಿಸುವಂತೆ ಜನರು ಬಂಗಾರದ ಕಿರೀಟಗಳನ್ನು ಮಾಡಿ, ಆ ದೇವರುಗಳ ತಲೆಗೆ ಮುಡಿಸುತ್ತಾರೆ.
10 : ಕೆಲವು ಬಾರಿ ಪೂಜಾರಿಗಳೇ ತಮ್ಮ ಆ ದೇವರುಗಳ ಮೇಲಿಂದ ಬೆಳ್ಳಿ ಬಂಗಾರದ ಒಡವೆಗಳನ್ನು ಅಪಹರಿಸಿಕೊಂಡು ಬಳಸಿಕೊಳ್ಳುತ್ತಾರೆ.
12 : ಅವುಗಳಲ್ಲಿ ಕೆಲವನ್ನು ಮಾಳಿಗೆಯ ಮೇಲಿರುವ ದೇವದಾಸಿಯರಿಗೂ ಕೊಡುವುದುಂಟು. ಬೆಳ್ಳಿಬಂಗಾರ ಹಾಗೂ ಮರದಿಂದ ತಯಾರಿಸಿದ ಆ ದೇವತೆಗಳಿಗೆ ಮನುಷ್ಯರಂತೆ ಬಟ್ಟೆಗಳನ್ನು ಸಹ ತೊಡಿಸುವರು.
12 : ಆ ದೇವರುಗಳಿಗೆ ಕೆನ್ನೀಲಿ ಬಟ್ಟೆಯನ್ನು ಹೊದಿಸಿ ಇದ್ದರೂ ಕಿಲುಬುನುಸಿಗಳಿಂದ ಅವು ತಮ್ಮನ್ನೇ ರಕ್ಷಿಸಿಕೊಳ್ಳಲಾರವು.
13 : ಅವುಗಳ ಮೇಲೆ ಮಂದಿರದ ಧೂಳು ತುಂಬಿರಲು ಬೇರೆ ಯಾರಾದರು ಅವುಗಳ ಮುಖವನ್ನು ಒರೆಸಬೇಕಾಗುತ್ತದೆ.
14 : ನಾಡಿನ ರಾಜ್ಯಪಾಲನಂತೆ ಒಂದು ವಿಗ್ರಹದ ಕೈಯಲ್ಲಿ ರಾಜದಂಡವಿದ್ದರೂ ಅದು ತನಗೆ ದ್ರೋಹಬಗೆದವರನ್ನು ಸದೆಬಡಿಯಲಾರದು.
15 : ಇನ್ನೊಂದರ ಕೈಯಲ್ಲಿ ಕತ್ತಿಕೊಡಲಿಗಳಿದ್ದರೂ ಯುದ್ಧದಿಂದಾಗಲೀ ಕಳ್ಳಕಾಕರಿಂದಾಗಲೀ ಅದು ತನ್ನನ್ನೇ ತಪ್ಪಿಸಿಕೊಳ್ಳಲಾರದು.
16 : ಹೀಗಿರಲು ಅವು ನಿಜ ದೇವರುಗಳೇ ಅಲ್ಲ ಎಂದು ಸ್ಪಷ್ಟವಾಗುತ್ತದೆ. ಎಂತಲೇ ನೀವು ಅವುಗಳಿಗೆ ಅಂಜಬೇಡಿ.
17 : ಒಬ್ಬನ ಕೈಯಲ್ಲಿರುವ ಪಾತ್ರೆ ಒಡೆದು ಹೋದರೆ ಅದು ಕೆಲಸಕ್ಕೆ ಬಾರದು. ಹಾಗೆಯೇ ಆ ಗುಡಿಯಲ್ಲಿರುವ ದೇವರುಗಳು! ಮಂದಿರಗಳಲ್ಲಿ ಅವುಗಳನ್ನು ಪ್ರತಿಷ್ಠಾಪಿಸಿದ ಮೇಲೆ ಅಲ್ಲಿ ಪ್ರವೇಶಿಸುವ ಜನರ ಪಾದದ ಧೂಳು ಆ ದೇವರುಗಳ ಕಣ್ಣುಗಳ ಮೇಲೆ ತುಂಬಿಕೊಳ್ಳುತ್ತದೆ.
18 : ಯಾರಾದರೊಬ್ಬನು ಅರಸನಿಗೆ ದ್ರೋಹ ಬಗೆದು ಮರಣದಂಡನೆಗೊಳಗಾದರೆ ಅವನನ್ನು ಸೆರೆಮನೆಯಲ್ಲಿಟ್ಟು, ಸುತ್ತಲೂ ಬಾಗಿಲುಗಳನ್ನು ಭದ್ರಪಡಿಸುತ್ತಾರೆ. ಹಾಗೆಯೇ ತಮ್ಮ ದೇವರುಗಳನ್ನು ಕಳ್ಳರು ಅಪಹರಿಸಿಕೊಂಡು ಹೋಗದಂತೆ ಅರ್ಚಕರು ಮಂದಿರದ ಬಾಗಿಲುಗಳಿಗೆ ಅಗುಳಿಗಳನ್ನೂ ಕಂಬಿಗಳನ್ನೂ ಹಾಕಿ ಭದ್ರಪಡಿಸುತ್ತಾರೆ.
19 : ತಮಗಾಗಿ ಉರಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ದೀಪಗಳನ್ನು ಆ ದೇವರುಗಳಿಗೆ ಉರಿಸುತ್ತಾರೆ. ಆದರೆ ದೀಪಗಳಲ್ಲಿ ಒಂದನ್ನಾದರೂ ಆ ದೇವರುಗಳು ನೋಡುವುದಿಲ್ಲ.
20 : ಆ ವಿಗ್ರಹ, ತನ್ನ ಮಂದಿರದ ತೊಲೆಯಂತೆಯೇ ಇದೆ. ಅದರ ಎದೆಗೆ ಹುಳು ಹಿಡಿಯುತ್ತದೆ, ಎಂದು ಜನರು ಆಡಿಕೊಳ್ಳುತ್ತಾರೆ. ನೆಲದ ಕ್ರಿಮಿಗಳು ಅವುಗಳನ್ನು ಆಕ್ರಮಿಸಿ, ಬಟ್ಟೆಗಳನ್ನು ತಿಂದುಹಾಕಿದರೂ ಅವುಗಳಿಗೆ ಪ್ರಜ್ಞೆಯಿರುವುದಿಲ್ಲ.
21 : ಮಂದಿರದ ಹೊಗೆಯಿಂದ ಅವುಗಳ ಮುಖ ಕಪ್ಪಾಗುತ್ತದೆ.
22 : ಅವುಗಳ ಮೈಮೇಲೆ ಹಾಗು ತಲೆಯ ಮೇಲೆ ಬಾವಲಿ, ಬಾನಕ್ಕಿ ಮುಂತಾದ ಹಕ್ಕಿಗಳಲ್ಲದೆ, ಬೆಕ್ಕುಗಳು ಸಹ ಬಂದು ಕುಳಿತುಕೊಳ್ಳುತ್ತವೆ.
23 : ಇದರಿಂದ ಅವು ದೇವರುಗಳಲ್ಲವೆಂದು ನೀವು ಅರ್ಥಮಾಡಿಕೊಳ್ಳಬಹುದು. ನೀವು ಅವುಗಳಿಗೆ ಅಂಜಬೇಕಾಗಿಲ್ಲ.
24 : ಅಂದಕ್ಕಾಗಿ ಆ ವಿಗ್ರಹಗಳಿಗೆ ಬಂಗಾರದ ತಗಡನ್ನು ಹೊದಿಸಿದ್ದಾರೆ. ಆದರೂ ಅವುಗಳ ಮೇಲಿನ ಧೂಳನ್ನು ಒರೆಸಿಹಾಕದಿದ್ದರೆ ಅವುಗಳಿಗೆ ಹೊಳಪು ಬರುವುದಿಲ್ಲ. ಎರಕಹೊಯ್ಯುವಾಗಲೂ ಅವುಗಳಿಗೆ ಅದರ ಪ್ರಜ್ಞೆಯೆ ಇರಲಿಲ್ಲ.
25 : ಅವುಗಳಿಗೆ ಎಷ್ಟು ಬೆಲೆಯಾದರೂ ತೆತ್ತು ಕೊಂಡುಕೊಳ್ಳುತ್ತಾರೆ. ಆದರೆ ಅವುಗಳಿಗೆ ಉಸಿರೇ ಇರುವುದಿಲ್ಲ.
26 : ಅವುಗಳಿಗೆ ಕಾಲಿಲ್ಲದ್ದರಿಂದ ಹೆಗಲಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಅವು ಎಷ್ಟು ನಿರರ್ಥಕವಾದುವು ಎಂದು ಇದರಿಂದ ವ್ಯಕ್ತವಾಗುತ್ತದೆ.
27 : ಅವುಗಳಿಗೆ ಆರಾಧನೆ ಮಾಡುವವರಿಗೂ ಅದು ಅವಮಾನಕರ. ಏಕೆಂದರೆ, ಅವು ನೆಲಕ್ಕೆ ಬಿದ್ದದ್ದೇ ಆದರೆ, ಅವನ್ನು ಜನರೇ ಎತ್ತಿ ನಿಲ್ಲಿಸಬೇಕಾಗುತ್ತದೆ. ಯಾರಾದರು ಅವುಗಳನ್ನು ನೆಟ್ಟಗೆ ಇಟ್ಟರೂ ಅವು ತಾವಾಗಿ ಚಲಿಸಲಾರವು. ಮುಂದಕ್ಕೆ ಬಗ್ಗಿಸಿದ್ದೇ ಆದರೆ ನೆಟ್ಟಗೆ ನಿಂತುಕೊಳ್ಳಲಾರವು. ಅವುಗಳ ಮುಂದೆ ಕಾಣಿಕೆಗಳನ್ನಿಡುವುದು ಸತ್ತವರಿಗೆ ಇಟ್ಟಂತೆಯೇ.
28 : ಅವುಗಳಿಗೆ ಬಲಿಕೊಟ್ಟ ವಸ್ತುಗಳನ್ನು ಪೂಜಾರಿಗಳು ಮಾರಿ, ಹಣವನ್ನು ತಾವೇ ಬಳಸಿಕೊಳ್ಳುತ್ತಾರೆ; ಅವರ ಹೆಂಗಸರು ಅದರಲ್ಲಿ ಸ್ವಲ್ಪ ಭಾಗವನ್ನೆತ್ತಿ ಉಪ್ಪುಹಾಕಿ ಇಡುತ್ತಾರೆಯೇ ಹೊರತು, ಬಡವರಿಗಾಗಲೀ ನಿರ್ಗತಿಕರಿಗಾಗಲೀ ಕೊಡುವುದಿಲ್ಲ.
29 : ಆ ನೈವೇದ್ಯಗಳನ್ನಾದರೋ, ಮುಟ್ಟಾದವರೂ ಬಾಣಂತಿಯರೂ ಸೂತಕದ ಶಂಕೆಯಿಲ್ಲದೆ ಮುಟ್ಟುತ್ತಾರೆ. ಹೀಗಿರಲು, ಅವು ದೇವರುಗಳಲ್ಲವೆಂದು ನೀವು ತಿಳಿದುಕೊಳ್ಳಬಹುದು. ಆದುದರಿಂದ ಅವುಗಳಿಗೆ ನೀವು ಹೆದರಬೇಡಿ.
30 : ಬೆಳ್ಳಿಬಂಗಾರದ ಮತ್ತು ಮರದ ವಿಗ್ರಹಗಳ ಮುಂದೆ ಹೆಂಗಸರೂ ಕಾಣಿಕೆಯನ್ನು ಅರ್ಪಿಸುವುದರಿಂದ ಇಂಥವುಗಳನ್ನು ದೇವರೆಂದು ಕರೆಯುವುದಾದರೂ ಹೇಗೆ?
31 : ಅವರ ದೇವಾಲಯಗಳಲ್ಲಿ ಪೂಜಾರಿಗಳು ಹರಿದ ಬಟ್ಟೆಯನ್ನು ಉಟ್ಟುಕೊಂಡು ತಲೆಯನ್ನೂ ಗಡ್ಡವನ್ನೂ ಬೋಳಿಸಿಕೊಂಡು, ಬರೀ ತಲೆಯಲ್ಲಿ ಕುಳಿತುಕೊಳ್ಳುತ್ತಾರೆ.
32 : ಸತ್ತವನ ತಿಥಿಯಂದು ಮಾಡುವಂತೆ, ಅವರು ದೇವರುಗಳ ಮುಂದೆ ಕಿರಿಚಿ ಕೂಗಾಡುತ್ತಾರೆ.
33 : ಪೂಜಾರಿಗಳು ಆ ವಿಗ್ರಹಗಳ ಬಟ್ಟೆಯನ್ನು ಬಿಚ್ಚಿ ತಮ್ಮ ಹೆಂಗಸರಿಗೂ ಮಕ್ಕಳಿಗೂ ತೊಡಿಸುತ್ತಾರೆ.
34 : ಅವುಗಳಿಗೆ ಒಳಿತನ್ನೇ ಮಾಡಲಿ, ಕೆಡುಕನ್ನೇ ಮಾಡಲಿ ಅವುಗಳಿಂದ ಯಾವ ಪ್ರತಿಕ್ರಿಯೆಯೂ ಬರುವಂತಿಲ್ಲ.
35 : ರಾಜರುಗಳನ್ನು ಸಿಂಹಾಸನಕ್ಕೆ ಏರಿಸುವುದಕ್ಕಾಗಲೀ, ಸಿಂಹಾಸನದಿಂದ ಇಳಿಸುವುದಕ್ಕಾಗಲೀ ಅವುಗಳಿಂದ ಸಾಧ್ಯವಿಲ್ಲ. ಅಂತೆಯೇ ಸಿರಿಸಂಪತ್ತನ್ನಾಗಲೀ ಹಣವನ್ನಾಗಲೀ ಅವು ಕೊಡಲಾರವು. ಹರಕೆಹೊತ್ತ ಅವನು ಅದನ್ನು ಸಲ್ಲಿಸದಿದ್ದರೆ ಅವು ವಿಚಾರಿಸಲಾರವು.
36 : ಯಾರನ್ನೂ ಸಾವಿನ ದವಡೆಯಿಂದ ತಪ್ಪಿಸಲಾರವು. ಬಲಹೀನರನ್ನು ಬಲಾಢ್ಯರ ಕೈಯಿಂದ ಬಿಡಿಸಲಾರವು.
37 : ಕುರುಡರಿಗೆ ಕಣ್ಣನ್ನು ಕೊಡಲಾರವು. ಸಂಕಟಪಡುವವರಿಗೆ ರಕ್ಷಣೆ ನೀಡಲಾರವು.
38 : ವಿಧವೆಗೆ ದಯೆತೋರಿಸಲಾರವು. ಅನಾಥನಿಗೆ ಒಳಿತನ್ನು ಮಾಡಲಾರವು.
39 : ಮರದಿಂದ ಮಾಡಲಾದ, ಬೆಳ್ಳಿಬಂಗಾರದ ತಗಡಿನಿಂದ ಹೊದಿಸಲಾದ ಆ ವಿಗ್ರಹಗಳು, ಬೆಟ್ಟದಿಂದ ಕೊರೆದುತಂದ ಕಲ್ಲುಗಳಿಗೆ ಸಮಾನವಾಗಿವೆ. ಅವುಗಳನ್ನು ಪೂಜಿಸುವವರು ನಾಚಿಕೆಗೀಡಾಗುತ್ತಾರೆ.
40 : ಹೀಗಿರುವಲ್ಲಿ ಅವುಗಳನ್ನು ದೇವರುಗಳೆಂದು ತಿಳಿಯುವುದು ಅಥವಾ ಕರೆಯುವುದು ಸಾಧ್ಯವೆ?
ವಿಗ್ರಹಪೂಜೆ ಮಾಡುವುದು ಅವಿವೇಕತನ
41 : ಬಾಬಿಲೋನಿನವರೇ ಅವರ ದೇವರುಗಳಿಗೆ ಅವಮಾನ ಮಾಡುತ್ತಾರಲ್ಲಾ! ಮಾತನಾಡದ ಮೂಕನೊಬ್ಬನನ್ನು ಕಂಡರೆ ಅವನನ್ನು ಬೇಲ್‍ದೇವತೆಯ ಬಳಿ ಕರೆತಂದು ಮಾತನಾಡುವಂತೆ ಮಾಡಬೇಕೆಂದು ಪ್ರಾರ್ಥನೆಮಾಡಿಸುತ್ತಾರೆ. ಆ ದೇವತೆಗೆ ತಮ್ಮ ಮಾತನ್ನು ಆಲಿಸುವ ಶಕ್ತಿಯಿದೆ ಎಂದು ಅವರ ಭಾವನೆ.
42 : ಆದರೆ ಅದು ಸಾಧ್ಯವಿಲ್ಲವೆಂದು ಅವರು ಅರ್ಥಮಾಡಿಕೊಳ್ಳಲಾರರು. ಆ ದೇವತೆಯನ್ನು ಬಿಟ್ಟುಬಿಡಲಾರರು. ಕಾರಣ, ಆ ಜನರಿಗೆ ತಿಳುವಳಿಕೆಯಿಲ್ಲ.
43 : ಅಷ್ಟೇ ಅಲ್ಲ, ಹೆಂಗಸರು ನಡುವಿಗೆ ಹುರಿಯನ್ನು ಕಟ್ಟಿಕೊಂಡು, ಬೀದಿಗಳಲ್ಲಿ ಕುಳಿತು, ತವುಡನ್ನು ಧೂಪದಂತೆ ಉರಿಸುತ್ತಾರೆ. ದಾರಿಹೋಕರಲ್ಲಿ ಯಾರಾದರು ಅವರಲ್ಲಿ ಒಬ್ಬಳನ್ನು ಕರೆದುಕೊಂಡು ಹೋಗಿ ವ್ಯಭಿಚಾರ ಮಾಡಿದರೆ, ಅಂಥವಳು ಹಿಂದಕ್ಕೆ ಬಂದು ಪಕ್ಕದಲ್ಲಿದ್ದವಳಿಗೆ, ನನ್ನಷ್ಟು ನೀನು ಸುಂದರವಾಗಿಲ್ಲ, ನಿನ್ನ ಹುರಿಯನ್ನು ಯಾರೂ ಕೀಳಲಿಲ್ಲ ಎಂದು ಹೀಯಾಳಿಸುತ್ತಾಳೆ.
44 : ಆ ವಿಗ್ರಹಗಳಿಗೆ ಏನು ಮಾಡಿದರೂ ಅದೆಲ್ಲವೂ ಅಬದ್ಧವೇ ಸರಿ. ಹೀಗಿರುವಲ್ಲಿ ಅವು ದೇವರುಗಳೆಂದು ತಿಳಿಯುವುದಾದರೂ ಅಥವಾ ಕರೆಯುವುದಾದರೂ ಹೇಗೆ?
45 : ಅವುಗಳನ್ನು ತಯಾರಿಸಿದವರು ಬಡಗಿಗಳು, ಅಕ್ಕಸಾಲಿಗರು. ಕಸಬುದಾರರು ತಮ್ಮ ಇಚ್ಛೆಗನುಸಾರ ಅವುಗಳನ್ನು ಮಾಡುತ್ತಾರಷ್ಟೆ; ಅದಕ್ಕಿಂತ ಹೆಚ್ಚೇನೂ ಅಲ್ಲ.
46 : ಈ ಕಸಬುದಾರರು ಸಹ ಬಹುಕಾಲ ಬಾಳುವುದಿಲ್ಲ. ಹೀಗಿರುವಾಗ ಅಂಥವರಿಂದ ದೇವರುಗಳನ್ನು ಮಾಡಲು ಸಾಧ್ಯವೇ?
47 : ಮುಂದಿನ ಪೀಳಿಗೆಗೆ ಈ ಕಸಬುದಾರರು ಬಿಟ್ಟುಹೋಗುವುದು ಮೋಸವಂಚನೆಯೇ ಹೊರತು ಮತ್ತೇನೂ ಅಲ್ಲ.
48 : ಯುದ್ಧವೋ ಯಾವುದಾದರೊಂದು ಗಂಡಾಂತರವೋ ಬಂದಾಗ, ಪೂಜಾರಿಗಳು ಮೊತ್ತಮೊದಲು ತಮ್ಮನ್ನು ಹಾಗು ತಮ್ಮ ದೇವರುಗಳನ್ನು ಹೇಗೆ ಅವಿತಿಟ್ಟುಕೊಳ್ಳುವುದೆಂದು ಆಲೋಚಿಸುತ್ತಾರೆ.
49 : ಆ ಯುದ್ಧದಿಂದ ಅಥವಾ ಗಂಡಾಂತರದಿಂದ ಕೂಡ ತಪ್ಪಿಸಿಕೊಳ್ಳಲಾಗದ ಆ ವಿಗ್ರಹಗಳು ದೇವರುಗಳೇ ಅಲ್ಲ ಎಂದು ಜನರು ಭಾವಿಸದಿರುವುದಾದರೂ ಹೇಗೆ?
50 : ಅವು ಕೇವಲ ಮರದಿಂದ ಆದುವು. ಬೆಳ್ಳಿಬಂಗಾರದ ತಗಡಿನ ಹೊದಿಕೆಯುಳ್ಳವು. ಆದುದರಿಂದ ಅವು ದೇವರಲ್ಲ ಎಂಬುದು ಸ್ಪಷ್ಟವಾಗುವುದು.
51 : ಅವು ಮಾನವ ಕೈಕೆಲಸಗಳೇ ಹೊರತು ದೇವರುಗಳಲ್ಲ; ದೈವೀಚೈತನ್ಯ ಅವುಗಳಲ್ಲಿ ಇಲ್ಲವೇ ಇಲ್ಲ. ಇದು ಜನಾಂಗಗಳಿಗೂ ಜನಾಧಿಪತಿಗಳಿಗೂ ಎಲ್ಲರಿಗೂ ಗೊತ್ತಾಗುವುದು.
52 : ಹೀಗಿರಲು, ಅವು ದೇವರುಗಳಲ್ಲ ಎಂದು ಮನದಟ್ಟು ಮಾಡುವಂಥ ಅವಶ್ಯಕತೆ ಇದೆಯೆ?
53 : ಅವು ದೇಶಕ್ಕೊಬ್ಬ ರಾಜನನ್ನು ನೇಮಿಸಲಾರವು. ಜನರಿಗೆ ಮಳೆಯನ್ನು ಸುರಿಸಲಾರವು. ತಮ್ಮನ್ನೇ ಸುಧಾರಿಸಿಕೊಳ್ಳಲಾರವು. ಅನ್ಯಾಯವನ್ನು ಸರಿಪಡಿಸಲಾರವು. ಅವು ಭೂಮ್ಯಾಕಾಶಗಳ ಮಧ್ಯೆ ಹಾರಾಡುವ ಕಾಗೆಗಳಂತೆ ನಿಶ್ಯಕ್ತವಾಗಿವೆ.
54 : ದೇವಾಲಯಕ್ಕೆ ಬೆಂಕಿ ಬಿದ್ದರೆ, ಮರದ ಅಥವಾ ಬೆಳ್ಳಿಬಂಗಾರದ ಹೊದಿಕೆಯಿರುವ ಈ ದೇವರುಗಳು ದಿಮ್ಮಿಗಳಂತೆ ಸುಟ್ಟುಹೋಗುತ್ತವೆ. ಪೂಜಾರಿಗಳಾದರೋ ತಪ್ಪಿಸಿಕೊಂಡು ಓಡಿ ಹೋಗುತ್ತಾರೆ.
55 : ಶತ್ರುಗಳನ್ನಾಗಲೀ ಅರಸರುಗಳನ್ನಾಗಲೀ ಎದುರಿಸುವ ಶಕ್ತಿ ಅವಕ್ಕಿಲ್ಲ. ಇಂತಿರಲು, ಅವು ದೇವರುಗಳೆಂದು ಯಾರಾದರೂ ಒಪ್ಪಿಕೊಳ್ಳುವುದು ಹೇಗೆ? ಅಥವಾ ನೆನೆಸುವುದಾದರೂ ಹೇಗೆ?
56 : ಮರದಿಂದ ಮಾಡಲಾದ ಬೆಳ್ಳಿಬಂಗಾರದ ಹೊದಿಕೆಯುಳ್ಳ ಈ ದೇವರುಗಳು ಕಳ್ಳಕಾಕರಿಂದ ಅಥವಾ ಸುಲಿಗೆಗಾರರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
57 : ಬಲಿಷ್ಠ ಜನರು ಅವುಗಳ ಮೇಲೆ ಇರುವ ಬೆಳ್ಳಿಬಂಗಾರವನ್ನೂ ಬಟ್ಟೆಬರೆಗಳನ್ನೂ ಕದ್ದುಕೊಂಡು ತಾವೇ ಬಳಸಿಕೊಳ್ಳುತ್ತಾರೆ. ಈ ದೇವರುಗಳಿಗೆ ಅವರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
58 : ಇಂಥಾ ಸುಳ್ಳು ದೇವರಾಗಿರುವುದಕ್ಕಿಂತ ಪರಾಕ್ರಮಶಾಲಿಯಾದ ಅರಸನಾಗಿ ಇರುವುದೇ ಮೇಲು. ಒಡೆಯನಿಗೆ ಪ್ರಯೋಜನಕರವಾದ ಒಂದು ಮಡಕೆ ಆಗಿರುವುದೇ ಲೇಸು. ಕದವು ಮನೆಯಲ್ಲಿರುವ ಪದಾರ್ಥಗಳನ್ನು ಸುರಕ್ಷಿತವಾಗಿಡುತ್ತದೆ. ಆ ದೇವರುಗಳಿಗಿಂತ ಅದಾದರೂ ಲೇಸು. ಅರಮನೆಯಲ್ಲಿರುವ ಒಂದು ಮರದ ಕಂಬವು ಕೂಡ ಈ ಸುಳ್ಳು ದೇವರುಗಳಿಗಿಂತ ಎಷ್ಟೋ ಮೇಲು!
59 : ಸೂರ್ಯ, ಚಂದ್ರ, ನಕ್ಷತ್ರಗಳು ಬೆಳಗುತ್ತಾ ತಮ್ಮ ಕರ್ತವ್ಯವನ್ನು ವಿಧೇಯತೆಯಿಂದ ನಿರ್ವಹಿಸುತ್ತವೆ.
60 : ಅಂತೆಯೇ ಮಿಂಚು ಉದ್ದ ಅಗಲ ಹೊಳೆಯುವಾಗ ಸುಂದರವಾಗಿ ಕಾಣುತ್ತದೆ. ಗಾಳಿಯು ಸಹ ಎಲ್ಲಾ ನಾಡುಗಳಲ್ಲೂ ಬೀಸುತ್ತದೆ.
61 : ದೇವರ ಆಜ್ಞೆಗನುಸಾರ ಮೋಡಗಳು ವಿಶ್ವದ ಮೇಲೆಲ್ಲಾ ಚಲಿಸುತ್ತವೆ.
62 : ಗುಡ್ಡಗಳನ್ನೂ ಕಾಡುಗಳನ್ನೂ ಸುಡಲು ಉನ್ನತದಿಂದ ಕಳುಹಿಸಲಾದ ಬೆಂಕಿಯು ಸಹ ದೇವರ ಆಜ್ಞೆಯನ್ನು ಪಾಲಿಸುತ್ತದೆ. ಈ ಸುಳ್ಳು ದೇವರುಗಳಾದರೋ ಸೌಂದರ್ಯದಲ್ಲಾಗಲೀ ಶಕ್ತಿಯಲ್ಲಾಗಲೀ ಅವುಗಳಿಗೆ ಸಮಾನವಲ್ಲ.
63 : ನ್ಯಾಯತೀರಿಸುವುದಕ್ಕಾಗಲೀ ಮಾನವರಿಗೆ ಒಳಿತನ್ನು ಮಾಡುವುದಕ್ಕಾಗಲೀ, ಶಕ್ತಿಸಾಮಥ್ರ್ಯವಿಲ್ಲದ ಇವುಗಳನ್ನು ದೇವರುಗಳೆಂದು ಎಣಿಸಲೂ ಬಾರದು, ಕರೆಯಲೂಬಾರದು. ಆದುದರಿಂದ ಅವು ದೇವರುಗಳಲ್ಲ, ಅವುಗಳಿಗೆ ನೀವು ಅಂಜಬೇಕಾಗಿಲ್ಲ.
64 : ಅರಸರುಗಳಿಗೆ ಆಶೀರ್ವಾದ ಮಾಡುವುದಕ್ಕಾಗಲೀ ಶಾಪಹಾಕುವುದಕ್ಕಾಗಲೀ ಅವುಗಳಿಗೆ ಶಕ್ತಿಯಿಲ್ಲ.
65 : ಜನಾಂಗಗಳಿಗೋಸ್ಕರ ಆಕಾಶದಲ್ಲಿ ಅವುಗಳಿಂದ ಸೂಚಕಕಾರ್ಯಗಳನ್ನು ಮಾಡಲು ಆಗುವುದಿಲ್ಲ. ಸೂರ್ಯನಂತೆ ಪ್ರಕಾಶಿಸುವುದಕ್ಕಾಗಲೀ ಚಂದ್ರನಂತೆ ಕಾಂತಿ ನೀಡುವುದಕ್ಕಾಗಲೀ ಅವುಗಳಿಂದ ಆಗದು.
66 : ಕಾಡುಮೃಗಗಳು ಅವುಗಳಿಗಿಂತ ಮೇಲು. ಏಕೆಂದರೆ, ಮೃಗಗಳು ಅಪಾಯದ ಸಂದರ್ಭದಲ್ಲಿ ತಪ್ಪಿಸಿಕೊಂಡು ಆಶ್ರಯಪಡೆಯುತ್ತವೆ.
67 : ಆದುದರಿಂದ ಆ ವಿಗ್ರಹಗಳು ದೇವರುಗಳೆಂಬುದಕ್ಕೆ ಎಳ್ಳಷ್ಟೂ ಆಧಾರವಿಲ್ಲ. ನೀವು ಅವುಗಳಿಗೆ ಅಂಜಬೇಡಿ.
68 : ಮರದಿಂದ ಮಾಡಲಾಗಿ ಬೆಳ್ಳಿಬಂಗಾರದ ತಗಡನ್ನು ಹೊದಿಸಿಕೊಂಡಿರುವ ಈ ದೇವರುಗಳು ಸೌತೆಕಾಯಿ ತೋಟದಲ್ಲಿ ನಿಲ್ಲಿಸಿರುವ ಬೆದರುಗೊಂಬೆಗೆ ಸಮಾನ.
69 : ಹಾಗೆಯೇ, ಮರದಿಂದ ತಯಾರಿಸಲಾದ ಬೆಳ್ಳಿಬಂಗಾರದ ತಗಡಿನ ಹೊದಿಕೆಯುಳ್ಳ ಈ ದೇವರು ಮುಳ್ಳುಪೊದೆಯಂತೆ. ಮುಳ್ಳುಪೊದೆ ಹಕ್ಕಿಗಳನ್ನು ಓಡಿಸುವುದಕ್ಕೆ ಬದಲು ಅವುಗಳಿಗೆ ಗೂಡನ್ನು ಒದಗಿಸುತ್ತದೆ; ಅಥವಾ ಅವು ಕತ್ತಲಲ್ಲಿ ಜನರು ಬಿಸಾಡುವ ಸತ್ತ ಹೆಣದಂತೆ.
70 : ಅವುಗಳಿಗೆ ತೊಡಿಸಿರುವ ಕೆನ್ನೀಲಿ ವಸ್ತ್ರ, ನಾರುಮಡಿಗಳು ನಶಿಸಿಹೋಗುತ್ತವೆ. ಅಂತಿಮವಾಗಿ ಗೆದ್ದಲು ತಿಂದು ನಾಡಿನಲ್ಲಿ ಅಪಹಾಸ್ಯಕ್ಕೀಡಾಗುತ್ತವೆ. ಇದರಿಂದ ಅವು ದೇವರುಗಳೇ ಅಲ್ಲ ಎಂದು ನಿಮಗೆ ಗೊತ್ತಾಗುತ್ತದೆ.
71 : ಆದುದರಿಂದ ವಿಗ್ರಹಪೂಜೆ ಮಾಡದ ಸಜ್ಜನನೇ ಮೇಲು; ಅಂಥವನಿಗೆ ಅಪಕೀರ್ತಿ ಸಮೀಪಕ್ಕೂ ಬಾರದು.