1 : ಆದುದರಿಂದ ಸರ್ವೇಶ್ವರಸ್ವಾಮಿ ನಮ್ಮ ವಿರುದ್ಧ ಹಾಗು ನಮ್ಮ ಜನರಿಗೆ ನ್ಯಾಯ ಸ್ಥಾಪಕರಾಗಿದ್ದವರ ವಿರುದ್ಧ ನುಡಿದ ಎಚ್ಚರಿಕೆಯ ಮಾತನ್ನು ಕಾರ್ಯಗತಗೊಳಿಸಿದ್ದಾರೆ.
2 : ಜೆರುಸಲೇಮಿನಲ್ಲಿ ನಡೆದಂತೆ ಭೂಲೋಕದಲ್ಲಿ ಇನ್ನೆಲ್ಲಿಯೂ ನಡೆದಿಲ್ಲ: ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ
3 : ನಾವು ನಮ್ಮ ಗಂಡುಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನಬೇಕಾಗಿ ಬಂದಿತು.
4 : ಇದಲ್ಲದೆ, ನಮ್ಮ ಸುತ್ತಮುತ್ತಲಿನ ರಾಷ್ಟ್ರಗಳ ಕೈವಶವಾಗಿರುವಂತೆ ನಮ್ಮ ಜನರನ್ನು ಒಪ್ಪಿಸಲಾಗಿ, ಎಲ್ಲ ಜನರ ಮಧ್ಯೆ ಅವರು ನಿಂದೆದೂಷಣೆಗೆ ಗುರಿಯಾದರು; ಹಾಳು ಬೀಳಾಗಿಬಿಟ್ಟರು.
5 : ಇದರಿಂದ ಉನ್ನತ ಸ್ಥಿತಿಗೆ ಬದಲಾಗಿ ಹೀನಸ್ಥಿತಿಗೇ ನಾವು ಇಳಿದೆವು. ಏಕೆಂದರೆ, ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯ ಕರೆಗೆ ಕಿವಿಗೊಡದೆ ಅವರಿಗೆ ವಿರೋಧವಾಗಿ ಪಾಪಮಾಡಿದೆವು.
6 : ನಮ್ಮ ದೇವರಾದ ಸರ್ವೇಶ್ವರಸ್ವಾಮಿ ನ್ಯಾಯವಂತರು. ನಾವೂ ನಮ್ಮ ಪೂರ್ವಜರೂ ಇಂದು ನಾಚಿಕೆಗೀಡಾಗಿದ್ದೇವೆ.
7 : ನಮ್ಮ ದೇವರಾದ ಸರ್ವೇಶ್ವರ ನಮಗೆ ವಿರೋಧವಾಗಿ ನುಡಿದ ಉಪದ್ರವಗಳೆಲ್ಲ ನಮ್ಮ ಮೇಲೆ ಬಂದೆರಗಿವೆ.
8 : ಆದರೂ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ದುಷ್ಟಹೃದಯದ ಕೆಟ್ಟಕಲ್ಪನೆಗಳನ್ನು ತೊರೆದು, ದೇವರ ಪ್ರಸನ್ನತೆಗಾಗಿ ಅಂಗಲಾಚಿ ಬೇಡಿಕೊಳ್ಳಲಿಲ್ಲ.
9 : ಆದುದರಿಂದ ಸರ್ವೇಶ್ವರ ನಮ್ಮ ದುಷ್ಕ್ರಿಯೆಗಳನ್ನು ಎಚ್ಚರಿಕೆಯಿಂದ ಗಮನಿಸಿ, ಈ ಸಂಕಟಗಳನ್ನು ನಮ್ಮ ಮೇಲೆ ಬರಮಾಡಿರುವರು. ಸತ್ಯಸ್ವರೂಪರಾದ ಅವರು ಆಜ್ಞಾಪಿಸಿದ ಎಲ್ಲ ಕಾರ್ಯಗಳು ನ್ಯಾಯ ಸಮ್ಮತವಾಗಿವೆ.
10 : ನಾವಾದರೋ ಅವರ ಮಾತಿಗೆ ಕಿವಿಗೊಡಲಿಲ್ಲ; ಅವರು ನಮಗೆ ವಿಧಿಸಿದ ಆಜ್ಞೆಗಳನ್ನು ಪಾಲಿಸಲಿಲ್ಲ.
11 : “ಈಗ ಸ್ವಾಮಿ ಸರ್ವೇಶ್ವರಾ, ಇಸ್ರಯೇಲರ ದೇವರೇ, ಭುಜಪರಾಕ್ರಮದಿಂದ, ಸೂಚಕ ಹಾಗೂ ಅದ್ಭುತಕಾರ್ಯಗಳಿಂದ, ಮಹಾಶಕ್ತಿಯಿಂದ, ನಿಮ್ಮ ಜನರನ್ನು ಈಜಿಪ್ಟ್ ದೇಶದಿಂ ಹೊರತಂದಿರಿ. ಇದರಿಂದ ನೀವು ಗಳಿಸಿದ ಕೀರ್ತಿ ಇಂದಿಗೂ ಅಳಿಯದೆ ಇದೆ.
12 : ನಮ್ಮ ದೇವರಾದ ಸರ್ವೇಶ್ವರಾ, ನಾವು ಪಾಪಮಾಡಿದೆವು. ಅವಿಶ್ವಾಸಿಗಳಾಗಿ ಬಾಳಿದೆವು. ನಿಮ್ಮ ನ್ಯಾಯವಾದ ನಿಬಂಧನೆಗಳನ್ನು ಉಲ್ಲಂಘಿಸಿದೆವು.
13 : ನಿಮ್ಮ ಕೋಪ ನಮ್ಮಿಂದ ತೊಲಗಲಿ. ನೀವು ನಮ್ಮನ್ನು ಚದುರಿಸಿಬಿಟ್ಟಿರುವ ಅನ್ಯಜನರ ಮಧ್ಯೆ ನಾವು ಕೆಲವೇ ಕೆಲವರು ಮಾತ್ರ ಉಳಿದಿದ್ದೇವೆ.
14 : ಸರ್ವೇಶ್ವರಾ, ನಮ್ಮ ವಿಜ್ಞಾಪನೆಯನ್ನು ಆಲಿಸಿರಿ. ನಿಮಗಾಗಿ ನಮ್ಮನ್ನು ಬಿಡುಗಡೆ ಮಾಡಿರಿ. ನಮ್ಮನ್ನು ಸೆರೆಯಾಗಿ ಎಳೆದುತಂದವರು ನಮ್ಮನ್ನು ಕಟಾಕ್ಷಿಸಿ ನಮಗೆ ಕರುಣೆ ತೋರುವಂತೆ ಮಾಡಿರಿ.
15 : ಇದರಿಂದಾಗಿ ನೀವೇ ನಮ್ಮ ದೇವರಾದ ಸರ್ವೇಶ್ವರ ಎಂಬುದು ಇಡೀ ಲೋಕವು ಮನಗಾಣಲಿ. ಇಸ್ರಯೇಲರು ಮತ್ತು ಅವರ ಸಂತಾನದವರು ನಿಮ್ಮ ಹೆಸರಿನವರೇ ಆಗಿರುವರಲ್ಲವೆ?
16 : “ಸ್ವಾಮಿ ಸರ್ವೇಶ್ವರಾ, ನಿಮ್ಮ ಪವಿತ್ರ ಆಲಯದಿಂದ ನಮ್ಮನ್ನು ಕಟಾಕ್ಷಿಸಿ, ನಮ್ಮನ್ನು ಗಮನಕ್ಕೆ ತಂದುಕೊಳ್ಳಿ; ನಮ್ಮನ್ನು ಆಲಿಸಿರಿ ಸರ್ವೇಶ್ವರಾ, ದಯವಿಟ್ಟು ಕಣ್ತೆರೆದು ನೋಡಿ.
17 : ಪ್ರಾಣವು ದೇಹದಿಂದ ಬೇರ್ಪಟ್ಟ ನಂತರ ಪಾತಾಳಕ್ಕೆ ಇಳಿದ ಮೃತರು, ನಿಮ್ಮ ಮಹಿಮೆಯನ್ನೂ ಸತ್ಕ್ರಿಯೆಗಳನ್ನೂ ಕೊಂಡಾಡಲಾರರು.
18 : ಆದರೆ, ಸರ್ವೇಶ್ವರಾ, ಜೀವವುಳ್ಳ ಮಾನವನು ಅತಿಯಾಗಿ ನೊಂದುಕೊಂಡು, ಬಗ್ಗಿ, ನಿತ್ರಾಣವಾಗಿ, ಕಂಗೆಟ್ಟು ಹಸಿವಿನಿಂದ ಬಳಲುತ್ತಿದ್ದರೂ, ಆ ಬಡಪ್ರಾಣಿ ನಿಮಗೆ ಮಹಿಮೆಯನ್ನೂ ಸ್ತುತಿಯನ್ನೂ ಸಲ್ಲಿಸಬಹುದು.
19 : “ನಮ್ಮ ದೇವರಾಗಿರುವ ಸರ್ವೇಶ್ವರಾ, ನಮ್ಮ ಪೂರ್ವಜರ ಸತ್ಕಾರ್ಯಗಳ ನಿಮಿತ್ತವಾಗಲೀ, ನಮ್ಮ ಅರಸರುಗಳ ನಿಮಿತ್ತವಾಗಲೀ ನಾವು ಈಗ ಬಿನ್ನಹಗಳನ್ನು ಮಾಡುತ್ತಿಲ್ಲ.
20 : ಏಕೆಂದರೆ, ನಿಮ್ಮ ದಾಸರಾದ ಪ್ರವಾದಿಗಳ ಮುಖಾಂತರ ನೀವು ನುಡಿದಂತೆಯೇ ನಿಮ್ಮ ಕೋಪ ರೌದ್ರಗಳನ್ನು ನಮ್ಮ ಮೇಲೆ ಬರಮಾಡುತ್ತೀರಿ:
21 : ಅವರು ಹೇಳಿದ್ದೇನೆಂದರೆ: ‘ಸರ್ವೇಶ್ವರ ಹೀಗೆನ್ನುತ್ತಾರೆ: ಬಾಬಿಲೋನಿನ ಅರಸನ ನೊಗಕ್ಕೆ ನಿಮ್ಮ ಹೆಗಲನ್ನು ಕೊಟ್ಟು ಅವನಿಗೆ ಗುಲಾಮರಾಗಿ ದುಡಿಯಿರಿ; ಆಗ ನಿಮ್ಮ ಪೂರ್ವಜರಿಗೆ ಕೊಟ್ಟ ನಾಡಿನಲ್ಲೇ ಬಾಳುವಿರಿ.
22 : ಬಾಬಿಲೋನಿನ ಅರಸನಿಗೆ ಗುಲಾಮರಾಗಿ ದುಡಿಯಬೇಕೆಂಬ ಸರ್ವೇಶ್ವರರ ಮಾತಿಗೆ ನೀವು ಕಿವಿಗೊಡದಿದ್ದರೆ,
23 : ಜುದೇಯದ ಪಟ್ಟಣಗಳಲ್ಲಿಯೂ, ಜೆರುಸಲೇಮಿನ ಬೀದಿಗಳಲ್ಲಿಯೂ ಹರ್ಷಸಂಭ್ರಮಗಳ ಧ್ವನಿಯನ್ನು ಹಾಗು ವಧೂ ವರರ ಸ್ವರವನ್ನು ನಿಲ್ಲಿಸಿಬಿಡುವೆನು. ಇಡೀ ದೇಶವು ನಿರ್ಜನ ಪ್ರದೇಶವಾಗಿ ಪಾಳು ಬೀಳುವುದು.’
24 : “ಆದರೆ ಬಾಬಿಲೋನಿನ ಅರಸನಿಗೆ ಗುಲಾಮರಾಗಿ ದುಡಿಯಬೇಕೆಂದು ನಿಮ್ಮ ಪ್ರವಾದಿಗಳ ಮುಖಾಂತರ ನೀವು ನುಡಿದ ಮಾತಿಗೆ ನಾವು ಕಿವಿಗೊಡಲೇ ಇಲ್ಲ. ಆದುದರಿಂದ ನಿಮ್ಮ ದಾಸರಾದ ಪ್ರವಾದಿಗಳ ಮುಖಾಂತರ ನೀವು ನುಡಿದ ಎಚ್ಚರಿಕೆಯನ್ನು ಕಾರ್ಯಗತ ಮಾಡಿದ್ದೀರಿ; ಅದೇನೆಂದರೆ: ‘ನಮ್ಮ ಅರಸರುಗಳ ಮತ್ತು ನಮ್ಮ ಪೂರ್ವಜರ ಎಲುಬುಗಳನ್ನು ಸಮಾಧಿಗಳಿಂದ ತೆಗೆಯಲಾಗುವುದು’
25 : ಅಯ್ಯೋ, ಅವು ಹಗಲಿನ ತಾಪಕ್ಕೂ ಇರುಳಿನ ಚಳಿಗೂ ಈಡಾಗಿವೆ! ಕತ್ತಿ, ಕ್ಷಾಮ, ವ್ಯಾಧಿಗಳೆಂಬ ಮಹಾವಿಪತ್ತುಗಳಿಂದ ಅವರು ಮಡಿದರು.
26 : ಇಸ್ರಯೇಲ್ ಮತ್ತು ಯೆಹೂದ್ಯ ಮನೆತನದ ದುಷ್ಟತನದ ನಿಮಿತ್ತ ನಿಮ್ಮ ಹೆಸರಿನ ಮಹಾದೇವಾಲಯವನ್ನು ಇಂದಿನ ದುಃಸ್ಥಿತಿಗೆ ತರಲಾಗಿದೆ.
27 : “ಆದರೂ, ನಮ್ಮ ದೇವರಾದ ಸರ್ವೇಶ್ವರಾ, ನೀವು ಅತ್ಯಂತ ತಾಳ್ಮೆ ಹಾಗು ಕರುಣೆ ಉಳ್ಳವರು. ಅದಕ್ಕೆ ತಕ್ಕಂತೆ ನಮ್ಮನ್ನು ನಡೆಸಿಕೊಂಡು ಬಂದಿದ್ದೀರಿ.
28 : ಇಸ್ರಯೇಲರ ಮಕ್ಕಳ ಎದುರಿಗೆ ನಿಮ್ಮ ಧರ್ಮಶಾಸ್ತ್ರವನ್ನು ಬರೆಯಬೇಕೆಂದು ನಿಮ್ಮ ದಾಸ ಮೋಶೆಗೆ ನೀವು ಆಜ್ಞಾಪಿಸಿದ ದಿನದಲ್ಲಿ ನೀವು ಹೇಳಿದಂತೆಯೇ ಆಯಿತು:
29 : ಅದೇನೆಂದರೆ, ‘ನೀವು ನನ್ನ ಮಾತಿಗೆ ಕಿವಿಗೊಡದೆ ಹೋದರೆ, ಖಂಡಿತವಾಗಿ ಈ ದೊಡ್ಡ ಜನಸಮೂಹವು, ನಾನು ಅದನ್ನು ಚದುರಿಸಿಬಿಡುವ ದೇಶದಲ್ಲಿ, ಬಹು ಚಿಕ್ಕದಾಗಿ ಉಳಿಯುವುದು:
30 : ಇವರು ನನ್ನ ಮಾತಿಗೆ ಕಿವಿಗೊಡುವುದಿಲ್ಲವೆಂದು ನಾನು ಬಲ್ಲೆ; ಏಕೆಂದರೆ ಇವರು ಬಹು ಮೊಂಡು ಹೃದಯಿಗಳು. ಆದರೆ ಇವರು ಸೆರೆಯಾಗಿ ಹೋದ ದೇಶದಲ್ಲಿ ಇವರಿಗೆ ಮನವರಿಕೆಯಾಗುವುದು.
31 : ಆಗ ಅವರ ದೇವರಾದ ಸರ್ವೇಶ್ವರ ನಾನೇ ಎಂಬುದನ್ನು ಅವರು ಅರಿತುಕೊಳ್ಳುವರು. ಆಲಿಸುವಂಥ ಹೃದಯವನ್ನೂ ಕಿವಿಗಳನ್ನೂ ಅವರಿಗೆ ದಯಪಾಲಿಸುವೆನು.
32 : ಅವರು ಸೆರೆಯಾಗಿ ಹೋದ ದೇಶದಲ್ಲಿ ನನ್ನನ್ನು ಹೊಗಳುವರು. ನನ್ನ ಹೆಸರನ್ನು ಸ್ಮರಿಸಿಕೊಳ್ಳುವರು.
33 : ತಮ್ಮ ಮೊಂಡುತನವನ್ನು ಮತ್ತು ದುಷ್ಟತನವನ್ನು ಬಿಟ್ಟು ತಿರುಗಿಕೊಳ್ಳುವರು. ಏಕೆಂದರೆ ಸರ್ವೇಶ್ವರನಿಗೆ ವಿರೋಧವಾಗಿ ಪಾಪಮಾಡಿದ ತಮ್ಮ ಪೂರ್ವಜರ ಗತಿ ಏನಾಯಿತೆಂದು ನೆನೆಸಿಕೊಳ್ಳುವರು.
34 : ಅವರ ಪೂರ್ವಜರಾದ ಅಬ್ರಹಾಮ, ಇಸಾಕ, ಯಕೋಬರಿಗೆ ನಾನು ಪ್ರಮಾಣ ಮಾಡಿಕೊಟ್ಟ ನಾಡಿಗೆ ಅವರನ್ನು ಪುನಃ ಕರೆತಂದು ಅವರು ಅದರ ಒಡೆಯರಾಗುವಂತೆ ಮಾಡುವೆನು. ನಾನು ಅವರನ್ನು ಅಭಿವೃದ್ಧಿಗೊಳಿಸುವೆನು. ಅವರು ಕಡಿಮೆಯಾಗುವುದೇ ಇಲ್ಲ.
35 : ನಾನು ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ನಾನು ಅವರಿಗೆ ದೇವರಾಗಿ ಇರುವೆನು, ಅವರು ನನಗೆ ಪ್ರಜೆಯಾಗಿರುವರು. ನನ್ನ ಜನರಾದ ಇಸ್ರಯೇಲರನ್ನು ಅವರಿಗೆ ಕೊಟ್ಟ ನಾಡಿನೊಳಗಿಂದ ಪುನಃ ಹೊರಗಟ್ಟುವುದಿಲ್ಲ.’