1 : ಎಲ್ಲರಂತೆ ನಾನೂ ಸಾಯುವಂಥವನು,
ಮತ್ರ್ಯನು,
ಮಣ್ಣಿನಿಂದ ರೂಪಿತನಾಗಿ ಮಾನವಕುಲಕ್ಕೆ
ಸೇರಿದವನು.
2 : ಮನುಷ್ಯನ ವೀರ್ಯದ ಹಾಗು ದಾಂಪತ್ಯ
ಭೋಗದ ಪರಿಣಾಮ ನಾನು
ಹತ್ತು ತಿಂಗಳ ಅವಧಿಯಲಿ,
ತಾಯಿಯ ಉದರದಲಿ,
ನನ್ನೀ ದೇಹರೂಪಿತವಾಯಿತು.
3 : ಹುಟ್ಟಿದಾಗ ಇತರರಂತೆ ಗಾಳಿಯನೆ
ಉಸಿರಾಡಿದೆ
ಭೂತಾಯಿಯ ಮಡಿಲಿನಲಿ ಬೆಳೆದುಬಂದೆ
ನನ್ನ ಮೊದಲ ಧ್ವನಿ ಅಳುವಾಗಿತ್ತು
ಇತರ ಮಕ್ಕಳಂತೆ.
4 : ಬಟ್ಟೆ ಸುತ್ತಿ ನನ್ನ ಆರೈಕೆ ಮಾಡಿದರು
ಎಚ್ಚರಿಕೆಯಿಂದ.
5 : ಇನ್ನಾವ ಅರಸನ ಹುಟ್ಟೂ
ಬೇರೆಯಾಗಿರಲಿಲ್ಲ ಇದಕ್ಕಿಂತ.
6 : ಜೀವನದಲಿ, ಬರುವುದಕ್ಕೂ
ತೆರಳುವುದಕ್ಕೂ
ಇರುವುದು ಒಂದೇ ದಾರಿ ಎಲ್ಲರಿಗೂ.
ಸುಜ್ಞಾನಕ್ಕೆ ಸಲ್ಲತಕ್ಕ ಮರ್ಯಾದೆ
7 : ಇಂತಿರಲು ನಾನು ಮಾಡಿದೆ ಪ್ರಾರ್ಥನೆ
ಕೊಡಲಾಯಿತು ನನಗೆ ತಿಳುವಳಿಕೆ
ನಾನು ಮೊರೆಯಿಟ್ಟೆ ದೇವರಿಗೆ
ಸುಜ್ಞಾನವೆಂಬ ಚೈತನ್ಯೆ ಬಂದಳು ನನ್ನ
ಬಳಿಗೆ.
8 : ರಾಜದಂಡ, ಸಿಂಹಾಸನಕ್ಕೂ ಮಿಗಿಲಾಗಿ
ಅವಳನ್ನು ಇಷ್ಟಪಟ್ಟೆ
ಅವಳ ಮುಂದೆ ಸಿರಿಸಂಪತ್ತು
ಶೂನ್ಯವೆಂದು ಅರಿತುಕೊಂಡೆ.
9 : ಅವಳ ಮುಂದೆ, ಭೂಮಿಯ ಚಿನ್ನವೆಲ್ಲ
ಉಸುಬಿನ ಕಣದಂತೆ,
ಅಮೂಲ್ಯ ರತ್ನವು ಸಾಟಿಯಲ್ಲ,
ಬೆಳ್ಳಿಯೂ ಮಣ್ಣಿನ ಮುದ್ದೆಯಂತೆ.
10 : ಆರೋಗ್ಯ ಸೌಂದರ್ಯಗಳಿಗಿಂತ ಹೆಚ್ಚಾಗಿ
ಅವಳನ್ನು ಪ್ರೀತಿಸಿದೆ
ಬೆಳಕಿಗಿಂತ ಅವಳ ಕುಂದದ ಕಾಂತಿಯನ್ನೇ
ಆಯ್ದುಕೊಂಡೆ.
11 : ಅವಳೊಂದಿಗೆ ಉತ್ತಮ ವಸ್ತುಗಳೆಲ್ಲವೂ
ಬಂದವು
ಅವಳ ಕೈಯಲ್ಲಿತ್ತು ಅಗಣಿತವಾದ
ಐಶ್ವರ್ಯವು.
12 : ಇವುಗಳನ್ನೆಲ್ಲಾ ಅವಳು ತಂದುದರಿಂದ
ಆನಂದವಾಯಿತೆನಗೆ
ಆಕೆಯೇ ಇವುಗಳ ಜನನಿಯೆಂದು
ತಿಳಿದಿರಲಿಲ್ಲ ನನಗೆ.
13 : ಕಪಟವಿಲ್ಲದೆ ನಾ ಕಲಿತುಕೊಂಡೆ
ಮತ್ಸರವಿಲ್ಲದೆ ನಾ ಕಲಿಸಿಕೊಡುವೆ
ಅವಳ ಸಿರಿಯನು ನಾ ಮರೆಯಾಗಿಸೆ.
14 : ಆಕೆ ಎಂದೂ ತೀರಿಹೋಗದ ನಿಧಿ
ಮಾನವನಿಗೆ
ಗಿಟ್ಟುವುದು ದೇವರ ಪ್ರೀತಿ ಆಕೆಯನ್ನು
ಬಳಸುವವರಿಗೆ
ದೇವರ ಅನುಮತಿಯಿದೆ ಆಕೆಯಿಂದ
ಕಲಿಯುವವರಿಗೆ.
15 : ದೇವರು ನೀಡಲೆನಗೆ ಶಕ್ತಿ
ನ್ಯಾಯವಾದುದನೆ ನುಡಿಯಲಿಕೆ
ನನಗಿತ್ತ ಕೊಡುಗೆಗಳಿಗೆ ಅನುಗುಣವಾಗಿ
ಆಲೋಚಿಸಲಿಕೆ.
ಸುಜ್ಞಾನಿಯ ಮಾರ್ಗದರ್ಶಕ, ಜ್ಞಾನಿಗಳ
ನಿರ್ದೇಶಕ ಆತನೇ.
16 : ನಾವು, ನಮ್ಮ ನುಡಿಗಳು, ಎಲ್ಲ
ವಿವೇಕವು,
ಕಲಾಕೌಶಲ್ಯವು, ಜ್ಞಾನಸರ್ವವು
ಆತನಿಗೆ ಅಧೀನವು.
17 : ಸಕಲ ವಸ್ತುಗಳ ನೈಜ ಜ್ಞಾನವನು
ನನಗಿತ್ತವನು ದೇವರೇ
ವಿಶ್ವದ ರಚನೆ, ಪಂಚಭೂತಗಳ
ವ್ಯವಹಾರ, ತಿಳಿಸಿದವ ಆತನೆ.
18 : ಕಾಲಗಳ ಆದಿಮಧ್ಯಾಂತರಗಳನು,
ಋತುಗಳ ಬದಲಾವಣೆಗಳನು,
ಉತ್ತರಾಯಣ, ದಕ್ಷಿಣಾಯಣಗಳನು,
19 : ತಾರಾಗಣಗಳ ವಿನ್ಯಾಸವನು,
ವರ್ಷಗಳ ಚಲಾವಣೆಗಳನು,
20 : ಪ್ರಾಣಿಗಳ ಲಕ್ಷಣಗಳನು,
ಕಾಡುಮೃಗಗಳ ಉಗ್ರತೆಗಳನು,
ಗಾಳಿಗಳ ಭೀಕರತೆಯನು,
ಮಾನವನ ವೈಚಾರಿಕತೆಗಳನು,
ಗಿಡಬೇರುಗಳ ಗುಣಗಳನು,
ಸಸ್ಯಾದಿಗಳ ವೈವಿಧ್ಯತೆಗಳನು,
ಇವುಗಳನ್ನೆಲ್ಲ ನನಗೆ ತಿಳಿಯಪಡಿಸಿದವನು
ಆತನೆ.
21 : ವಿಶ್ವದ ಶಿಲ್ಪಿಯಾದ ಸುಜ್ಞಾನಿಯೇ ನನಗೆ
ಬೋಧಿಸಿದ್ದರಿಂದ
ನಾನು ತಿಳಿದುಕೊಂಡೆ ಗೋಚರ,
ಅಗೋಚರ ಸಂಗತಿಗಳನ್ನೆಲ್ಲಾ.
ಸುಜ್ಞಾನದ ಮಹತ್ವ
22 : ಸುಜ್ಞಾನದಲ್ಲಿ ಚುರುಕಾಗಿ ಅರಿಯುವ
ಹಾಗೂ ಪವಿತ್ರವಾದ
ಚೈತನ್ಯವಿರುವುದು;
ಅದು ಅದ್ವಿತೀಯ, ನಾನಾವಿಧ,
ಅತಿಸೂಕ್ಷ್ಮ ಹಾಗು ಚಲಿಸುವಂಥದ್ದು;
ಅದು ಸ್ಪಷ್ಟೋಕ್ತಿಯುಳ್ಳದು,
ನಿಷ್ಕಳಂಕವಾದುದು,
ಸುರಕ್ಷಿತವಾದುದು, ನಿಚ್ಚಳವಾದುದು,
ಸತ್ಪರವಾದುದು, ಹದವಾದುದು;
23 : ನಿರಾತಂಕವಾದುದು, ಕರುಣಾಮಯಿ,
ಮಾನವಪ್ರಿಯವಾದುದು;
ಸುಸ್ಥಿರ, ನಿಶ್ಚಿತ, ನಿಶ್ಚಿಂತೆಯುಳ್ಳದ್ದು,
ಸರ್ವಶಕ್ತಿಯುಳ್ಳದ್ದು,
ಚುರುಕು, ನಿರ್ಮಲ, ಸೂಕ್ಷ್ಮ, ಎಲ್ಲ
ಜೀವಾತ್ಮಗಳಲ್ಲಿ
ಸೇರಿಕೊಳ್ಳುವಂಥದ್ದು.
24 : ಸುಜ್ಞಾನ ಎಲ್ಲಾ ಚಲನೆಗಿಂತಲು ಚುರುಕು
ಇಡೀ ವಿಶ್ವದಲ್ಲಿ ವ್ಯಾಪಿಸಿಕೊಳ್ಳುವಷ್ಟು
ಸ್ವಚ್ಛವಾದುದು.
25 : ಆಕೆ ದೇವರ ಶಕ್ತಿಯ ಉಸಿರು,
ಸರ್ವಶಕ್ತನ ನಿರ್ಮಲ ಪ್ರವಾಹ.
ಎಂದೇ ಆಕೆಯಲ್ಲಿ ಅಶುದ್ಧವಾದುದು
ಯಾವುದೂ ಪ್ರವೇಶಿಸುವಂತಿಲ್ಲ.
26 : ಸುಜ್ಞಾನವು ಅನಾದಿ, ಪರಂಜ್ಯೋತಿಯ
ಪ್ರಕಾಶ
ದೈವಪ್ರವೃತ್ತಿಯ ನಿಷ್ಕಳಂಕ ದರ್ಪಣ
ದೇವರ ಶ್ರೇಷ್ಟತೆಯ ಪ್ರತಿರೂಪ.
27 : ಒಂಟಿಯಾಗಿದ್ದುಕೊಂಡು ಎಲ್ಲವನ್ನು
ಆಕೆ ಮಾಡಬಲ್ಲಳು
ತನ್ನತನವನ್ನು ಕಳೆದುಕೊಳ್ಳದೆ ಎಲ್ಲವನ್ನು
ಹೊಸದಾಗಿಸುವಳು.
ಪ್ರತಿಯೊಂದು ಪೀಳಿಗೆಯಲ್ಲೂ ಸಂಚರಿಸಿ,
ಸಂತಾತ್ಮಗಳನ್ನು ಹೊಕ್ಕು,
ಮಾನವರನ್ನು ದೇವರ ಗೆಳೆಯರನ್ನಾಗಿ,
ಪ್ರವಾದಿಗಳನ್ನಾಗಿ ಮಾಡುವಳು.
28 : ಸುಜ್ಞಾನಿಯೊಂದಿಗಿರುವಾತನನ್ನೇ ಹೊರತು
ಇನ್ನಾರನ್ನೂ ಪ್ರೀತಿಸುವುದಿಲ್ಲ ದೇವರು.
29 : ಸುಜ್ಞಾನ ಸೂರ್ಯನಿಗಿಂತ ಸುಂದರಳು
ಯಾವ ತಾರಾಮಂಡಲಕ್ಕೂ
ಮಿಗಿಲಾದವಳು
ಬೆಳಕಿಗೆ ಹೋಲಿಸಿದರೆ ಅದನ್ನೂ
ಮೀರುವಳು.
30 : ಹಗಲು ಹೋಗಿ ಇರುಳಾಗುವುದು
ಸುಜ್ಞಾನಿಯ ಮುಂದೆ ಕೆಡುಕು ನಿಲ್ಲದು.
ಸುಜ್ಞಾನದ ಬಯಕೆ