1 : ಸಜ್ಜನರ ಆತ್ಮಗಳಿರುವುವು ದೇವರ
ಕೈಯೊಳು
ಅವರನ್ನು ಮುಟ್ಟದು ಮಹಾಯಾತನೆ
ಯಾವುದು.
2 : ಮಂದಮತಿಯ ಕಣ್ಣಿಗೆ ಸತ್ತವರಂತೆ
ಅವರು ಕಾಣಿಸಿಕೊಂಡರು
ಅವರು ಗತಿಸಿ ಹೋದುದು ಅವನಿಂದ
ತೊಲಗಿದ ಕೇಡಂತಿತ್ತು.
3 : ಸಜ್ಜನರಿಗಾದ ಸಾವು ಮಹಾ ವಿಪತ್ತು
ಎಂದವನಿಗೆ ತೋರಿತು
ಅವರಾದರೋ ಶಾಂತಿಸಮಾಧಾನದಿಂದ
ನೆಮ್ಮದಿಯಾಗಿರುವರು.
4 : ಮಾನವನ ದೃಷ್ಟಿಯಲ್ಲಿ ಅವರು
ಕಂಡುಬಂದರು ಶಿಕ್ಷಿಸಲ್ಪಟ್ಟವರಂತೆ
ಅವರಲ್ಲಾದರೋ ತುಂಬಿತ್ತು ಅಮರತ್ವದ
ನಂಬಿಕೆ ನಿರೀಕ್ಷೆ.
5 : ಅವರು ಅನುಭವಿಸಿದ ಶಿಕ್ಷೆ ಅಲ್ಪ,
ಹೊಂದುವ ಸೌಭಾಗ್ಯ ಅಪಾರ
ಶೋಧಿಸಿದ ತರುವಾಯ ದೇವರಿಗೆ ಅವರು
ಕಂಡುಬಂದರು ಯೋಗ್ಯಾರ್ಹ.
6 : ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ
ಅಂಗೀಕೃತರಾದರು ಪೂರ್ಣ
ದಹನಬಲಿಯಂತೆ.
7 : ಪ್ರಕಾಶಿಸುವರು ದೇವರನು ಸಂದರ್ಶಿಸುವ
ಕಾಲದಲಿ
ಹೊಳೆಯುವರು ಒಣಹುಲ್ಲಿನೊಳಗಿನ
ಕಿಡಿಗಳೋಪಾದಿ.
8 : ನ್ಯಾಯತೀರಿಸುವರವರು ಜನಾಂಗಗಳಿಗೆ
ದೊರೆತನ ಮಾಡುವರವರು ಜನಗಳ ಮೇಲೆ
ದೇವರ ಪ್ರಜೆಗಳಾಗಿರುವರು ಸದಾಕಾಲಕೆ.
9 : ಸತ್ಯವನು ಅರಿವರು ದೇವರಲಿ
ಭರವಸೆಯಿಡುವವರು
ಅವರೊಂದಿಗೆ ಪ್ರೀತಿಯಿಂದ ಬಾಳುವರು
ನಂಬಿಗಸ್ತರು.
ದೇವರಿಂದ ಆಯ್ಕೆಯಾದವರಿಗಿರುವುದು
ಕೃಪಾನುಗ್ರಹವು
ದೇವರೇ ಕಾಪಾಡುವರು ಸಜ್ಜನರನು.
ದುರುಳರ ದುರ್ಗತಿ
10 : ಸಜ್ಜನರನು ತುಚ್ಛವಾಗಿ ಪರಿಗಣಿಸಿದವರು,
ಸರ್ವೇಶ್ವರನಿಗೆ ಇದಿರಾಗಿ
ಪ್ರತಿಭಟಿಸಿದವರು,
ತಮ್ಮ ವಾದಕ್ಕೆ ತಕ್ಕಂತೆ ಶಿಕ್ಷೆಗೆ
ಗುರಿಯಾಗುವರು.
11 : ಜ್ಞಾನೋಪದೇಶವನು ತೃಣೀಕರಿಸುವವನು
ನಿರ್ಭಾಗ್ಯಸ್ತ
ಅವನ ನಂಬಿಕೆ ವ್ಯರ್ಥ, ದುಡಿತ ದುರ್ಲಭ,
ನಿಷ್ಪ್ರಯೋಜಕ.
12 : ಅವರ ಮಡದಿಯರು ಮತಿಹೀನರು
ಅವರ ಮಕ್ಕಳು ದಾರಿತಪ್ಪಿದಂಥವರು
ಅವರ ಜನನವು ಶಾಪಗ್ರಸ್ತವಾದುದು.
13 : ವ್ಯಭಿಚಾರಕ್ಕೊಪ್ಪದ ನಿಷ್ಕಳಂಕಿ
ಬಂಜೆಯಾದರು ಧನ್ಯಳು !
ಸತ್ಯಾತ್ಮಗಳನು ದೇವರು
ಸಂದರ್ಶಿಸುವಾಗ ಫಲಪಡೆಯುವಳು.
14 : ಅನ್ಯಾಯವೆಸಗದ, ಸರ್ವೇಶ್ವರನನು
ಪ್ರತಿಭಟಿಸದ, ನಪುಂಸಕನು ಧನ್ಯನು !
ಅವನ ನೀತಿಸತ್ಯತೆಗನುಸಾರ ಸಿಗುವುದು
ವಿಶೇಷ ಕೃಪಾವರವು;
ದೊರಕುವುದು ಪವಿತ್ರ ಸ್ಥಾನದಲಿ
ಸಂತೋಷಕರವಾದ ಅಂತಸ್ತು.
15 : ಸತ್ಕಾರ್ಯಗಳ ಫಲವು
ಕೀರ್ತಿದಾಯಕವಾದುದು
ಅರಿವಿನ ಬೇರು ಎಂದಿಗೂ
ಒಣಗಿಹೋಗದು.
16 : ವ್ಯಭಿಚಾರಿಗಳ ಮಕ್ಕಳು
ಅಭಿವೃದ್ಧಿಯಾಗರು
ಅಕ್ರಮ ಸಂಸರ್ಗದಿಂದಾದ
ಸಂತಾನ ನಾಶವಾಗುವುದು.
17 : ಇಂಥವರು ಬಹುದಿನ ಬದುಕಿದರೂ
ಯಾರ ಗಣನೆಗೂ ಬಾರರು
ಮುದಿತನದಲ್ಲೂ ಅವರು
ಸನ್ಮಾನಹೀನರಾಗಿರುವರು.
18 : ಚಿಕ್ಕವರಾಗಿಯೇ ಅವರು ಸತ್ತರೆ
ಯಾವ ನಿರೀಕ್ಷೆಯೂ ಇರದು
ನ್ಯಾಯನಿರ್ಣಯ ದಿನದಲ್ಲಿ
ಯಾವ ಆದರಣೆಯೂ ದೊರಕದು.
19 : ದುರ್ಜನರ ಸಂತಾನದ ಅಂತ್ಯ
ಎಂದೆಂದಿಗೂ ಶೋಚನೀಯ.