1 : ನಿಮ್ಮ ಪವಿತ್ರ ಜನರಿಗಾದರೋ
ದೇವಾ, ಪ್ರಕಾಶಮಯ ಬೆಳಕಿತ್ತು.
ಈಜಿಪ್ಟರು ಅವರ ಸ್ವರ ಕೇಳಿದ್ದರೂ
ನೋಡಿರಲಿಲ್ಲ ಅವರ ರೂಪವನು
ತಮ್ಮ ಹಾಗೆ ಸಂಕಟಕ್ಕೀಡಾಗದ ಅವರನು
ಧನ್ಯರೆಂದು ಎಣಿಸಿದ್ದರು.
2 : ಹಿಂದೆ ನಿಮ್ಮಾ ಜನರಿಗೆ ಅವರು ಮಾಡಿದ
ಅನ್ಯಾಯಕ್ಕೆ
ಪ್ರತೀಕಾರ ಮಾಡಲಿಲ್ಲವೆಂದು ಸಲ್ಲಿಸಿದರು
ಕೃತಜ್ಞತೆ.
3 : ಕತ್ತಲೆಗೆ ಪ್ರತಿಯಾಗಿ ಬೆಳಗಿಸಿದಿರಿ
ನಿಮ್ಮ ಜನರಿಗೆ ಅಗ್ನಿಸ್ತಂಭವೊಂದನು.
ಅಪರಿಚಿತಾ ಪ್ರಯಾಣದಲ್ಲಿ ಅವರನು
ಅದು ಮುನ್ನಡೆಸಿತು
ಕೈಗೊಂಡಿದ್ದಾ ಪ್ರವಾಸದಲಿ ಅದವರಿಗೆ
ಪ್ರಭಾಕರನಂತಿತ್ತು.
4 : ಈಜಿಪ್ಟರಾದರೋ ಬಂಧಿತರಾಗಿದ್ದುದು
ಉಚಿತವಾಗಿತ್ತು ಬೆಳಕಿಲ್ಲದಾ
ಕತ್ತಲೆಯಲಿ.
ಕಾರಣ-ಯಾರ ಮೂಲಕ ನಿಮ್ಮ
ನಿಮಯದ ಬೆಳಕು ಜಗಕ್ಕೆ
ಬರಬೇಕಾಗಿತ್ತೋ
ಆ ನಿನ್ನ ಪುತ್ರ ಪುತ್ರಿಯರನು ಅವರು
ಇಟ್ಟಿದ್ದರು ಬಂಧನದಲಿ.
ಈಜಿಪ್ಟರ ಚೊಚ್ಚಲ ಮಕ್ಕಳು
5 : ದೇವಜನರ ಮಕ್ಕಳನು ಸಂಹರಿಸಲು
ಅವರು ಯೋಚಿಸಿದರು
ಬಿಸಾಡಲಾದ ಒಂದೇ ಒಂದು ಕೂಸು
ಸುರಕ್ಷಿತವಾಯಿತು.
ಅಂಥವರನ್ನು ದಂಡಿಸಲು ಅವರ ಅನೇಕ
ಮಕ್ಕಳನು ದೇವಾ, ನೀವು
ತೆಗೆದುಕೊಂಡಿರಿ.
ಅದು ಮಾತ್ರವಲ್ಲ, ಅವರೆಲ್ಲರನು ಒಟ್ಟಿಗೆ
ಮಹಾಸಾಗರದಲ್ಲಿ ಮುಳುಗಿಸಿದಿರಿ.
6 : ಆ ರಾತ್ರಿಯ ಘಟನೆಗಳನು ನಮ್ಮ
ಪೂರ್ವಜರಿಗೆ ಮೊದಲೇ ತಿಳಿಸಲಾಗಿತ್ತು
ಎಂದೇ ಅವರು ನಂಬಿದ್ದ ವಾಗ್ದಾನಗಳಿಂದ
ಧೈರ್ಯತಂದುಕೊಂಡರು.
7 : ಹೀಗೆ ಶತ್ರುಗಳ ಅಳಿವನು, ಸಜ್ಜನರ
ಉದ್ಧಾರವನು
ನಿಮ್ಮ ಜನರು ನಿರೀಕ್ಷಿಸಿದ್ದರು.
8 : ಯಾವ ಸಾಧನಗಳಿಂದ ಶತ್ರುಗಳಿಗೆ ನೀವು
ಮುಯ್ಯಿ ತೀರಿಸಿದಿರೋ
ಅವುಗಳಿಂದಲೇ ನಮ್ಮನ್ನು ತಮ್ಮ ಬಳಿಗೆ
ಕರೆದು ಗೌರವಿಸಿದಿರಿ.
9 : ಸಜ್ಜನರ ಸ್ವಂತ ಕುವರರು
ಬಲಿಯನ್ನರ್ಪಿಸಿದರು ರಹಸ್ಯವಾಗಿ
ದೇವನಿಯಮದ ನಿಬಂಧನೆಗಳನು
ಅಂಗೀಕರಿಸಿದರು ಒಮ್ಮನಸ್ಸಾಗಿ.
ಅಂತೆಯೇ ಹೆತ್ತವರು ತಾವು
ದೇವಜನರೆಂದು ಒಪ್ಪಿಕೊಂಡರು
ಸುಖ-ಸಂಕಟಗಳಲ್ಲಿ ಭಾಗಿಗಳೆಂದು
ಹಾಡಿದರು ಪೂರ್ವಜರ ಸ್ತುತಿಗೀತೆಯನು.
10 : ಅತ್ತ ಶತ್ರುಗಳ ಕರ್ಕಶ ಧ್ವನಿ ಕೇಳಲಾಗಿ
ಗೋಳಿಡುವ ರೋದನ ಹಬ್ಬಿತು ಬೆತ್ತಲಾಗಿ.
11 : ದಾಸನಿಗೂ ದಣಿಗೂ ಒಂದೇ
ದಂಡನೆಯಾಗಿತ್ತು
ಅರಸನಿಗೂ ಜನಸಾಮಾನ್ಯನಿಗೂ ಒಂದೇ
ವಿಪತ್ತು ಬಂದಿತ್ತು.
12 : ಅವರೆಲ್ಲರು ಒಂದೇ ವಿಧವಾದ ಸಾವಿಗೆ
ತುತ್ತಾಗಿದ್ದರು
ಎಣಿಸಲಾಗದಷ್ಟು ಶವಗಳು ರಾಶಿ
ಬಿದ್ದಿದ್ದವು.
ಹೂಣಿಡುವುದಕ್ಕೂ ಸಾಕಷ್ಟು ಜನ
ಬದುಕಿರಲಿಲ್ಲ
ಒಂದೇ ಪೆಟ್ಟಿಗೆ ಅವರ ಜೇಷ್ಠರೆಲ್ಲಾ
ಮಡಿದಿದ್ದರಲ್ಲಾ !
13 : ಮಂತ್ರ ತಂತ್ರಗಳಿಗೆ ಮಾರುಹೋಗಿ
ನಂಬಲಿಲ್ಲ ಅವರು ಯಾವುದನು
ತಮ್ಮ ಚೊಚ್ಚಲು ಮಕ್ಕಳಿಗೆ ಬಂದೊದಗಿದ
ನಾಶನ ಮುಂದಿಟ್ಟು
ಒಪ್ಪಿಕೊಂಡರು, ಈ ಜನ ದೇವರ ಸಂತಾನ
ಎಂದು.
14 : ಸೌಮ್ಯವಾದ ಮೌನ ಸಮಸ್ತವನು
ಆವರಿಸಲು
ನಟ್ಟಿರಳು ವೇಗವಾಗಿ ಚಲಿಸಿ ಬಂದಿರಲು,
15 : ನಿಮ್ಮ ಸರ್ವಶಕ್ತ ವಾಣಿ ತನ್ನ ರಾಜ
ಸಿಂಹಾಸನ ಬಿಟ್ಟು
ಪ್ರಬಲ ಯುದ್ಧವೀರನಂತೆ
ಸ್ವರ್ಗದಿಂದ ಜಿಗಿದು
ನಾಶನಕ್ಕೆ ಗುರಿಯಾದ ನಾಡಿನೊಳಕ್ಕೆ
ಬಂದಿತು.
16 : ಕಟ್ಟುನಿಟ್ಟಾದ ನಿನ್ನಾಜ್ಞೆಯೆಂಬ ಹದವಾದ
ಕತ್ತಿಯನು ಅದು ಹಿಡಿದುನಿಂತಿತ್ತು
ಎಲ್ಲವನು ಸಾವಿನಿಂದ ತುಂಬಿಸಿ, ನೆಲದ
ಮೇಲೆ ನಿಂತಿತ್ತು;
ಆದರೂ ಆಗಸವನ್ನೇ ಮುಟ್ಟುತ್ತಿತ್ತು.
17 : ಥಟ್ಟನೆ ಭೀಕರ ಸ್ವಪ್ನಗಳಿಂದ ಆ ಜನರು
ದಂಗುಬಡಿದಂತಾದರು
ಅನಿರೀಕ್ಷಿತ ಭಯಭೀತಿಯು ಅವರನು
ಆವರಿಸಿತು.
18 : ಒಬ್ಬನು ಇಲ್ಲಿ, ಇನ್ನೊಬ್ಬನು ಅಲ್ಲಿ
ಅರೆಜೀವಿಯಾಗಿ ಬಿದ್ದುಕೊಂಡನು
ತನ್ನ ಮರಣದ ಕಾರಣವನು ರುಜು
ಪಡಿಸುತ್ತಿದ್ದನು.
19 : ತಮ್ಮ ಸಂಕಟಕೆ ಕಾರಣವನು ತಿಳಿಯದೆ
ಅವರು ನಾಶವಾಗಬಾರದೆಂದು
ಅವರನು ಗಾಬರಿಗೊಳಿಸಿದ ಸ್ವಪ್ನಗಳೇ
ಅದನು ಮುನ್ಸೂಚಿಸಿದ್ದವು.
ಆರೋನನ ಪ್ರಾರ್ಥನೆ-ಇಸ್ರಯೇಲರ ರಕ್ಷಣೆ
20 : ದೇವಜನರಿಗೂ ಬಂದಿತು ಸಾವಿನ ಬವಣೆ
ಅನೇಕರು ಮಡಿದರು ಮರುಭೂಮಿಯಲೆ
ಆದರೆ ಬಹುಕಾಲ ಉಳಿಯಲಿಲ್ಲ
ನಿನ್ನಾ ಕೋಪಾವೇಶನೆ.
21 : ಕಾರಣ, ನಿರ್ದೋಷಿ ಮನುಷ್ಯನೊಬ್ಬನು
ಮುಂದೆ ಬಂದನು ತ್ವರೆಯಾಗಿ
ಪ್ರಾರ್ಥನೆಯನು, ದೋಷಪರಿಹಾರಕ
ಧೂಪವನು ಮಾಡಿಕೊಂಡನು
ತನ್ನ ಸೇವಾಯುಧಗಳನ್ನಾಗಿ.
ನಿಮ್ಮ ಕೋಪದೆದುರು ನಿಂತು,
ಆ ವಿಪತ್ತನ್ನು ಶಮನ ಮಾಡಿದನು
ತಾನು ನಿಮ್ಮ ಪರಿಚಾರಕನೆಂದು
ತೋರಿಸಿಕೊಂಡನು.
22 : ಅವನು ಆ ಉಪದ್ರವವನು ಶಮನ
ಮಾಡಿದ್ದು ತನ್ನಿಂದಲ್ಲ,
ತನ್ನ ದೇಹಬಲದಿಂದಲ್ಲ, ಶಸ್ತ್ರ ಪ್ರಯೋಗ
ದಿಂದಲೂ ಅಲ್ಲ;
ಪಿತೃಗಳಿಗೆ ಮಾಡಿದ ವಾಗ್ದಾನ
ಒಡಂಬಡಿಕೆಗಳನು
ನೆನಪಿಗೆ ತಂದುಕೊಟ್ಟನು
ವಾಕ್ಯದ ಮೂಲಕವೇ ಸಂಹಾರಕ
ದೂತನನು ಶಮನಮಾಡಿದನು.
23 : ಸತ್ತವರ ಶವಗಳು ಒಂದರ ಮೇಲೊಂದು
ರಾಶಿಯಾಗಿ ಬಿದ್ದಿರುವಾಗ
ಅವನು ನಡುವೆ ನಿಂತು ತಡೆಹಿಡಿದನು
ಕೋಪವನು
ಬದುಕಿರುವವರ ಕಡೆಗೆ ಅದು ಹರಿಯದಂತೆ
ಹಾದಿಯನು ಕಟ್ಟಿದನು.
24 : ಅವನು ಧರಿಸಿದ್ದ ನಿಲುವಂಗಿಯ ಮೇಲೆ
ಇಡೀ ವಿಶ್ವ ಚಿತ್ರಿತವಾಗಿತ್ತು
ರತ್ನಗಳ ನಾಲ್ಕು ಸಾಲುಗಳಲಿ ಪಿತೃಗಳ
ಗೌರವ ನಾಮವನು ಕೆತ್ತಲಾಗಿತ್ತು
ಅವನ ತಲೆಯ ಮೇಲಿದ್ದ ಪೇಟದಲಿ
ನಿಮ್ಮ ಮಹತ್ವವೇ ಬಿಂಬಿಸಿತ್ತು.
25 : ಇದನ್ನು ಕಂಡ ಹಿಮ್ಮೆಟ್ಟಿದನು
ಸಂಹಾರಕನು ಭಯಪಟ್ಟು
ನಿಮ್ಮ ಕೋಪದ ಬಿಸಿ ಅವನಿಗೆ ತಟ್ಟಿದ್ದೇ
ಸಾಕಾಗಿತ್ತು.
ಕೆಂಪು ಸಮುದ್ರ