Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸುಜ್ಞಾನಗ್ರಂಥ


1 : ವ್ಯಕ್ತಿಯೊಬ್ಬನು ಹೊರಡುತ್ತಾನೆ ಸಮುದ್ರ ಪ್ರಯಾಣ ಮಾಡಲು ಹುಚ್ಚು ತೆರೆಗಳ ನಡುವೆ ಹಾಯ್ದು ಹೋಗುವುದಕ್ಕಿರುವ ನಾವೆಗಿಂತಲೂ ಮೊರೆಯಿಡುತ್ತಾನೆ ಒಂದು ತುಂಡು ಮರಕ್ಕೆ, ನೆರವಾಗಲೆಂದು.
2 : ನಾವೆಯೇನೋ ತಯಾರಾಯಿತು ಲಾಭದ ಆಶೆಯಿಂದ ಸಿದ್ಧವಾಯಿತು ಜ್ಞಾನವೆಂಬ ಕುಶಲತೆಯಿಂದ.
3 : ಆದರೆ ಎಲೈ ತಂದೆಯೇ, ಅದನ್ನು ಸಾಗಿಸುತ್ತದೆ ನಿಮ್ಮ ಅನುಗ್ರಹ ಕಡಲಲ್ಲಿ ಹಾದಿಯನ್ನೂ ಅಲೆಗಳ ನಡುವೆ ಸುರಕ್ಷತೆಯನ್ನೂ ನೀಡುವಾತ ನೀನಯ್ಯಾ !
4 : ಅನುಭವವಿಲ್ಲದವನೂ ಸಮುದ್ರ ಪ್ರಯಾಣ ಕೈಗೊಳ್ಳಬಹುದು ನೀನೇ ಎಲ್ಲ ಆಪತ್ತುಗಳಿಂದ ರಕ್ಷಿಸ ಬಲ್ಲಾತನೆಂದು ಅರಿತು.
5 : ನಿಮ್ಮ ಜ್ಞಾನದಿಂದಾದ ಕಾರ್ಯಗಳು ನಿಷ್ಪ್ರಯೋಜಕವಾಗಬಾರದೆಂಬುದು ನಿಮ್ಮ ಇಚ್ಛೆ. ಎಂದೇ ಆ ಮರದ ತುಂಡನ್ನೇ ಪ್ರಾಣದ ಆಧಾರವನ್ನಾಗಿಟ್ಟುಕೊಳ್ಳುತ್ತಾರೆ; ಅಲ್ಲೋಲ ಕಲ್ಲೋಲವಾದ ಸಮುದ್ರವನ್ನೇ ಸುರಕ್ಷಿತವಾಗಿ ದಾಟಿಬರುತ್ತಾರೆ.
6 : ಪುರಾತನ ಕಾಲದಲ್ಲಿ ಗರ್ವಿಷ್ಟರಾದ ಮಹಾ ಶರೀರಗಳು ನಾಶವಾಗುತ್ತಿರಲು ಲೋಕದ ನಿರೀಕ್ಷೆ ನಿಮ್ಮ ಕೈಯಿಂದಲೇ ಕಾರ್ಯಗತವಾಯಿತು. ಒಂದು ನಾವೆಯನು ಆಶ್ರಯಿಸಿಕೊಂಡದ್ದ ರಿಂದ ಮುಂದಿನ ಕಾಲಕೆ ಪೀಳಿಗೆಯೊಂದುಳಿಯಿತು.
7 : ಯಾವ ಮರದಿಂದ ನ್ಯಾಯನೀತಿ ಸ್ಥಾಪಿತವಾಯಿತೊ ಆ ಮರವು ಧನ್ಯವಾದುದೇ.
8 : ಆದರೆ ಕೈಯಿಂದ ಕೆತ್ತಿದ ವಿಗ್ರಹವೂ ಅದನ್ನು ಕೆತ್ತಿದವನೂ ಶಾಪಗ್ರಸ್ತರೇ ಕಾರಣ-ಅಳಿವ ಆ ವಸ್ತು ದೇವರೆನಿಸಿ ಕೊಂಡಿತು; ಅದನು ಕೆತ್ತಿದವನು ಮಾನವನೇ ಅಲ್ಲವೆ?
9 : ದುಷ್ಟನೂ ಅವನ ದುಷ್ಟಕಾರ್ಯವೂ ಸಮನಾಗಿಯೇ ಅಸಹ್ಯವಾದುವು ದೇವರಿಗೆ.
10 : ಕೃತಿಯು ತನ್ನ ಗೈದವನೊಂದಿಗೆ ದಂಡನೆಗೆ ಗುರಿಯಾಗುವುದು ಖರೆ.
11 : ಅನ್ಯಜನಗಳ ವಿಗ್ರಹಗಳಿಗೂ ದಂಡನೆಯಾಗುವುದು. ಕಾರಣ-ದೇವರಿಂದಾದ ವಸ್ತುಗಳಿಂದಲೇ ಅವು ರೂಪುಗೊಂಡವು ಅಸಹ್ಯ ವಸ್ತು, ನರಾತ್ಮಗಳಿಗೆ ಎಡರು, ಮೂಢರ ಕಾಲಿಗೆ ಉರುಲು.
12 : ವಿಗ್ರಹಗಳ ರಚನೆ ವ್ಯಭಿಚಾರಕ್ಕೆ ಆರಂಭವು ಅವುಗಳ ಯೋಜನೆ ಸಜ್ಜೀವನಕ್ಕೆ ಅಳಿವು.
13 : ವಿಗ್ರಹಗಳು ಆದಿಯಿಂದಲೂ ಇದ್ದವುಗಳಲ್ಲ ಅನಂತವಾಗಿಯೂ ಇರುವಂಥವುಗಳಲ್ಲ.
14 : ಅವು ಲೋಕವನು ಪ್ರವೇಶಿಸಿದ್ದು ಮಾನವನ ಒಣಹೆಮ್ಮೆಯಿಂದ ಎಂದೇ, ಅವು ಕೊನೆಗೊಳ್ಳುವ ವ್ಯವಸ್ಥೆ ಆಗಿದೆ ತ್ವರಿತದಿಂದ.
15 : ತಂದೆಯೊಬ್ಬನು ತನ್ನ ಮಗನ ಅಕಾಲಿಕ ಮರಣದಿಂದ ದುಃಖಕ್ಕೊಳಗಾದ ಶೋಕ ತಾಳಲಾಗದೆ, ಅವನ ಪ್ರತಿಮೆ ಒಂದನು ಮಾಡಿಕೊಂಡ. ದಿವಂಗತನಾದ ಮಗನನೇ ದೇವರೆಂದು ಗೌರವಿಸಲಾರಂಭಿಸಿದ ತನ್ನ ಅಧೀನರಿಗೆ ಪೂಜೆ-ಪುನಸ್ಕಾರಗಳ ಆಚರಣೆಯನು ಹೇಳಿಕೊಟ್ಟ.
16 : ಕ್ರಮೇಣ ಈ ದುಷ್ಟಪದ್ಧತಿ ಪ್ರಬಲವಾಗಿ ವಿಧಿರೂಪ ತಾಳಿತು ಅರಸನ ಅಪ್ಪಣೆಯ ಮೇರೆಗೆ ವಿಗ್ರಹಗಳು ಪೂಜಿತವಾದವು.
17 : ದೂರವಿದ್ದ ಅರಸನಿಗೆ ಪ್ರತ್ಯಕ್ಷ ಗೌರವ ಸಲ್ಲಿಸಲಾಗದೆ ಹೋಯಿತು ಎಂದೇ, ಆ ದೂರವಿದ್ದವನ ಪ್ರತಿಬಿಂಬವನು ಪ್ರಜ್ಞೆಯಿಂದ ಕಲ್ಪಿಸಲಾಯಿತು. ಕಣ್ಮುಂದೆ ಇದ್ದಂತೆ ಸನ್ಮಾನಿಸಲು ಪ್ರತಿಮೆಯೊಂದನು ಮಾಡಲಾಯಿತು ಹೀಗೆ ಮುಖಸ್ತುತಿ ಮಾಡುವ ಗೀಳನು ಪೂರೈಸಲಾಯಿತು.
18 : ಅರಸನನು ಅರಿಯದಿದ್ದವರೂ ಪಡೆದರು ಪ್ರೇರಣೆ ಮೂರ್ತಿಪೂಜೆಗೆ ಇದಕೆ ಕಾರಣವಾಯಿತು ಆಸಕ್ತನಾದ ಕಲಾವಿದನ ಮಹತ್ವಾಕಾಂಕ್ಷೆ.
19 : ಅಧಿಕಾರಿಯನು ಮೆಚ್ಚಿಸಲು ಪ್ರಯೋಗಿಸಿರಬೇಕು ಇವನು ತನ್ನ ಕಲಾಕುಶಲತೆಯನ್ನೆಲ್ಲಾ ಬಹುಶಃ ನೀಡಿರಬೇಕು ನಿಜಸ್ಥಿತಿಗಿಂತಲೂ ಹೆಚ್ಚಿನ ಸೌಂದರ್ಯ.
20 : ಅವನ ಕೈಕೆಲಸದ ಸೊಬಗಿನಿಂದ ಆಕರ್ಷಿತವಾದ ಜನಜುಂಗುಳಿಯು ಹಿಂದೆ ಮನುಷ್ಯನಾಗಿ ಸನ್ಮಾನಿತನಾದವನನು ದೇವಪೂಜಾರ್ಹನೆಂದು ಎಣಿಸತೊಡಗಿತು.
21 : ಸಜ್ಜೀವನಕೆ ಇದೊಂದು ಮೋಸದ ಜಾಲವಾಯಿತು ದೌರ್ಭಾಗ್ಯದಿಂದಲೋ ದಬ್ಬಾಳಿಕೆ ಯಿಂದಲೋ ಪೀಡಿತರಾದ ಜನರು ಕಲ್ಲುಕಂಬಗಳಿಗಿತ್ತರು, ದೇವರಿಗೆ ಹೊರತು ಬೇರಾರಿಗೂ ಸಲ್ಲದ, ಹೆಸರನು. ವಿಗ್ರಹಾರಾಧನೆಯ ಪರಿಣಾಮ
22 : ದೇವರ ಬಗ್ಗೆ ಅವರಿಗಿದ್ದ ಈ ತಪ್ಪು ಕಲ್ಪನೆ ಸಾಲದೆಂದು ಅಜ್ಞಾನವೆಂಬ ಘೋರವಾದ ಅನಿಷ್ಟ ಕದನಕ್ಕಿಳಿದರು. ಅದು ಮಾತ್ರವಲ್ಲ, ಇಂಥ ವಿಷಯ ಸ್ಥಿತಿಯನು ಶಾಂತಿಯೆಂದೆಣಿಸಿದರು!
23 : ಹಸುಳೆಗಳನು ಬಲಿಕೊಟ್ಟು, ಗುಟ್ಟಾದ ಪೂಜಾಪದ್ಧತಿಗಳನು ಆಚರಿಸಿದರು ಸ್ವಧರ್ಮ ವಿರುದ್ಧವಾದ ದುಂದೌತಣ, ಪಾನವಿಲಾಸಗಳಲಿ ಮೈಮರೆತರು.
24 : ಜೀವನದಲ್ಲಾಗಲಿ, ದಾಂಪತ್ಯದಲ್ಲಾಗಲಿ ಪವಿತ್ರತೆಯನವರು ಕಾಪಾಡಲಿಲ್ಲ. ಬದಲಿಗೆ ದ್ರೋಹಬಗೆದು ಒಬ್ಬರನ್ನು ಒಬ್ಬರು ಕೊಲೆಮಾಡಿದರು ವ್ಯಭಿಚಾರ ಮಾಡಿ, ಒಬ್ಬನು ಮತ್ತೊಬ್ಬ ನನು ಸಂಕಟಕ್ಕೀಡುಮಾಡಿದನು.
25 : ಎಲ್ಲಾಕಡೆ ತುಂಬಿಕೊಂಡವು ರಕ್ತಪಾತ, ಕೊಲೆ, ಕಳವು, ಮೋಸ ಭ್ರಷ್ಟಾಚಾರ, ನಂಬಿಕೆದ್ರೋಹ, ಕಲಹ, ಸುಳ್ಳುಪ್ರಮಾಣ;
26 : ಸಜ್ಜನರ ಹಿಂಸೆ, ಕೃತಘ್ನತೆ, ಹೊಲೆ, ಗಡುಕುತನ, ಹಾದರ, ಅಕ್ರಮ ವಿವಾಹ, ವ್ಯಭಿಚಾರ, ಕಾಮವಿಲಾಸ, ದ್ರೋಹ ಇತ್ಯಾದಿ.
27 : ಇಂಥ ಅಕ್ರಮಗಳಿಗೆ ಆದಿ, ಅಂತ್ಯ ಕಾರಣ ಈ ಅವಾಚ್ಯ ವಿಗ್ರಹಗಳ ಆರಾಧನ.
28 : ಇಂಥವರು ಸಂತೋಷಪಡುತ್ತಾರೆ ಹುಚ್ಚರಂತೆ ಅವರು ಮಾಡುವುದು ಸುಳ್ಳು ಪ್ರವಾದನೆ; ಬಾಳುತ್ತಾರೆ ನೀತಿಗೆಟ್ಟವರಾಗಿ ಸುಳ್ಳಾಣೆಯಿಡುತ್ತಾರೆ ಸುಲಭವಾಗಿ.
29 : ಜೀವವಿಲ್ಲದ ವಿಗ್ರಹಗಳಲ್ಲಿ ನಂಬಿಕೆಯಿಡುವುದರಿಂದ, ಸುಳ್ಳಾಣೆಯಿಡುವುದರಿಂದ, ಹಾನಿಯಿಲ್ಲ ಎಂಬುದು ಅವರ ಇಂಗಿತ.
30 : ಇಮ್ಮಡಿ ಅಪರಾಧಗಳಿಗಾಗಿ ಅವರು ಗುರಿಯಾಗುವರು ನ್ಯಾಯವಾದ ದಂಡನೆಗೆ: ದೇವರಲ್ಲಿ ತಪ್ಪುಭಾವನೆ ತಾಳಿ ಶರಣಾದರು ವಿಗ್ರಹಗಳಿಗೆ ಪವಿತ್ರವಾದುದನ್ನಲಕ್ಷಿಸಿ, ಸುಳ್ಳು ಪ್ರಮಾಣ ದಿಂದ ವಂಚಕರಾದರು ಇತರರಿಗೆ.
31 : ದುರ್ಜನರನ್ನು ಬೆನ್ನಟ್ಟಿ ಬರುವುದು ಅವರು ಪ್ರಮಾಣಮಾಡಿ ಹೇಳುವಾ ವಸ್ತುಗಳ ಶಕ್ತಿಯಲ್ಲ ಅವರ ಪಾಪಗಳಿಗೆ ನ್ಯಾಯವಾದ ಶಿಕ್ಷೆ ಮಾತ್ರ. ನಿಜದೇವರು ನೀಡುವ ವರ: ಅಮರತ್ವ

· © 2017 kannadacatholicbible.org Privacy Policy