Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸುಜ್ಞಾನಗ್ರಂಥ


1 : ಪವಿತ್ರ ಪ್ರವಾದಿಯೊಬ್ಬನ ಮುಖಾಂತರ ಸಫಲಗೊಳಿಸಿದಳು ಅವರ ಕಾರ್ಯಗಳನ್ನೆಲ್ಲಾ.
2 : ನಿರ್ಜನ ಮರುಭೂಮಿಯಲ್ಲವರು ಪ್ರಯಾಣ ಮಾಡಿದರು ಹಾದಿಗಳೇ ಇಲ್ಲದ ಪ್ರದೇಶಗಳಲಿ ಗುಡಾರ ಹಾಕಿದರು.
3 : ಶತ್ರುಗಳನ್ನು ಎದುರಿಸಿದರು ವೈರಿಗಳನು ಹಿಂದಕ್ಕಟ್ಟಿದರು.
4 : ಬಾಯಾರಿದಾಗ ನಿಮ್ಮನ್ನು ಬೇಡಿಕೊಂಡರು ಸೀಳಿದ ಬಂಡೆಯಿಂದ ಅವರಿಗೆ ನೀರು ಸಿಕ್ಕಿತು ಗಡಸು ಕಲ್ಲಿಂದ ನೀರು ಬಂದು ದಣಿವಾರಿಸಿತು.
5 : ಯಾವುದರಿಂದ ಶತ್ರುಗಳಿಗೆ ದಂಡನೆ ಆಯಿತೋ ಅದರಿಂದಲೇ ಇಸ್ರಯೇಲರ ಕಷ್ಟ ಪರಿಹಾರವಾಯಿತು.
6 : ನಿತ್ಯವೂ ಹರಿಯುವ ನದಿ ನೀರು ನೆತ್ತರಾಗಿ ಹೆಪ್ಪುಗಟ್ಟಲು ಕಂಗಾಲಾದರು ವೈರಿಗಳು.
7 : ಹಸುಮಕ್ಕಳನು ಸಂಹರಿಸಬೇಕೆಂಬ ರಾಜಾಜ್ಞೆಯನ್ನು ಹೀಗೆ ಧಿಕ್ಕರಿಸಿದಿರಿ ನಿಮ್ಮವರಿಗೋ ನಿರೀಕ್ಷೆ ಮೀರಿದ ವಿಫುಲ ನೀರನ್ನು ಹೀಗೆ ಒದಗಿಸಿದಿರಿ.
8 : ನಿಮ್ಮವರು ದಾಹತಾಪವನು ಅನುಭವಿಸುವಂತೆ ಮಾಡಿದಿರಿ ಈ ಪರಿ ಅವರ ವಿರೋಧಿಗಳನ್ನು ದಂಡಿಸಿದ ರೀತಿಯನು ತೋರಿದಿರಿ.
9 : ನಿಮ್ಮವರು ಪರೀಕ್ಷೆಗೆ ಗುರಿಯಾದರು; ಇದು ನಿಮ್ಮ ಕರುಣಾನುಸಾರ ಸುಶಿಕ್ಷಣವಾಗಿತ್ತು. ದುರುಳರು ನಿಮ್ಮ ಕುಪಿತ ನ್ಯಾಯತೀರ್ಪಿಗೆ ಗುರಿಯಾದರು ಈ ಮೂಲಕ ದುಷ್ಟರ ಶಿಕ್ಷೆಯ ತೀವ್ರತೆಯನು ಕಲಿತುಕೊಂಡರು.
10 : ಇವರನ್ನು ಒರೆಗೆ ಹಚ್ಚಿದಿರಿ ತಂದೆ ಮಕ್ಕಳನು ಗದರಿಸುವಂತೆ ಅವರನ್ನಾದರೋ ಪರಿಶೋಧಿಸಿದಿರಿ ಕಠೋರನಾದ ರಾಜನಂತೆ.
11 : ಅವರು ದೇವಜನರಿಗೆ ಹತ್ತಿರವಿದ್ದರೂ ದೂರವಿದ್ದರೂ ಒಂದೇ ಸಮನೆ ಸಂಕಟವನು ಅನುಭವಿಸುತ್ತಿದ್ದರು.
12 : ಇಂದಿನ ಸ್ಥಿತಿಯನು, ಹಿಂದಿನ ಸ್ಥಿತಿಯನು ನೆನೆದು ಅವರು ಪಡುತ್ತಿದ್ದ ಪಾಡು ಇಮ್ಮಡಿಯಾಗಿತ್ತು.
13 : ತಮಗಾದ ಶಿಕ್ಷೆಯಿಂದ ಇಸ್ರಯೇಲರಿಗೆ ಲಾಭವಾಯಿತೆಂದು ಕೇಳಲು ಸರ್ವೇಶ್ವರನಿಂದಲೇ ಇದಾಯಿತೆಂದು ಅವರಿಗೆ ಮನದಟ್ಟಾಯಿತು.
14 : ಹಿಂದೊಮ್ಮೆ ಅವನನ್ನು ಕೂಸಾಗಿ ಬಿಸಾಡಿ ಬಿಟ್ಟಿದ್ದರು; ಪರಿಹಾಸ್ಯ ಮಾಡಿದ್ದರು. ಈಗ ಸಜ್ಜನರಿಗಿಂತಲು ಬೇರೆ ವಿಧದಲಿ ಬಾಯಾರಿದವರಾಗಿ, ನಿಬ್ಬೆರಗಾದರು.
15 : ಅವರು ದುಷ್ಟ ಹಾಗು ವ್ಯರ್ಥ ಆಲೋಚನೆಗಳಿಂದ ದಾರಿತಪ್ಪಿದರು ಬುದ್ಧಿಹೀನ ಸರ್ಪವನು ಹಾಗು ವಿಕಾರ ಪ್ರಾಣಿಗಳನು ಪೂಜಿಸಿದರು ಆ ಪ್ರಾಣಿಗಳ ಗುಂಪನೇ ಅವರ ಮೇಲೆ ಕಳಿಸಿದಿರಿ ಮುಯ್ಯಿ ತೀರಿಸಲು.
16 : ಹೀಗೆ ಮಾನವ ಯಾವುದರಿಂದ ಪಾಪಮಾಡುತ್ತಾನೋ ಅದರಿಂದಲೇ ದಂಡಿಸಲ್ಪಡುತ್ತಾನೆ ಎಂಬುದನು ಕಲಿತುಕೊಳ್ಳಲು ಒದಗಿಸಿದಿರಿ ಸದವಕಾಶವನು.
17 : ಸರ್ವೇಶ್ವರಾ, ಸರ್ವಶಕ್ತಿಯಿಂದ ಕೂಡಿದ ನಿಮ್ಮ ಹಸ್ತವು ಆಕಾರರಹಿತ ಪ್ರಕೃತಿಯಿಂದ ಜಗತ್ತನ್ನು ನಿರ್ಮಿಸಿತು ಆ ಜನರನು ದಂಡಿಸಲು ನಿಮಗೇನು ಕೊರೆತೆಯಿತ್ತು? ಕರಡಿಗಳ, ಭೀಕರ ಸಿಂಹಗಳ ಗುಂಪನು ಕಳುಹಿಸಬಹುದಿತ್ತು.
18 : ಅಗ್ನಿಶ್ವಾಸ ಬಿಡುವಂಥ, ಮೂಗಲಿ ಹೊಗೆ ಭುಗಿಲೇಳಿಸುವಂಥ, ಕಣ್ಣುಗಳಿಂದ ಭೀಕರ ಕಿಡಿಕಾರುವಂಥ, ಹೊಸದಾಗಿ ನಿರ್ಮಾಣವಾದಂಥ, ಯಾರಿಗೂ ಗುರುತೇ ಇಲ್ಲದಂಥ ಮೃಗಗಳು ನೀವು ಕಳುಹಿಸಬಹುದಿತ್ತಲ್ಲಾ !
19 : ಅವು ಹಾನಿಮಾಡಿ ಆ ಜನರನ್ನು ಧ್ವಂಸಮಾಡಬಹುದಾಗಿತ್ತು; ಅವುಗಳ ನೋಟದಿಂದಲೆ ದಿಗಿಲುಗೊಂಡು ಅವರು ಸಾಯಬಹುದಿತ್ತು.
20 : ಇಲ್ಲವೆ, ನಿಮ್ಮ ನೀತಿ ಅವರನ್ನು ಬೆನ್ನಟ್ಟಿ ಹೋಗಬಹುದಿತ್ತು. ನಿಮ್ಮ ಶಕ್ತಿಯ ಶ್ವಾಸದಿಂದ ಅತ್ತಿತ್ತ ಚದರಿಸಬಹುದಿತ್ತು. ನಿಮ್ಮ ಒಂದೇ ಉಸಿರಿನಿಂದ ಅವರು ಬಿದ್ದು ಹೋಗಬಹುದಿತ್ತು ! ಆದರೆ ಇದೆಲ್ಲವು ನಿಮ್ಮ ಅಳತೆ, ಅಂಕೆ, ತೂಕದಂತೆ ನೆರವೇರಿತು. ದೇವರು ದಯಾಪರ
21 : ನಿಮ್ಮ ಸಾಮಥ್ರ್ಯವನು ಎಂದಾದರು ತೋರಿಸಬಲ್ಲವರು ನೀವು ನಿಮ್ಮ ಬಾಹುಬಲವನ್ನು ಎದುರಿಸಬಲ್ಲವನು ಯಾವನು?
22 : ನಿಮ್ಮ ದೃಷ್ಟಿಯಲಿ ಇಡೀ ವಿಶ್ವವು ತಕ್ಕಡಿಯಲ್ಲಿನ ಒಂದು ಅಣುವಿನಂತೆ ಮುಂಜಾನೆ ನೆಲಕ್ಕೆ ಬೀಳುವ ಮಂಜಿನ ಒಂದು ಹನಿಯಂತೆ.
23 : ಏನು ಮಾಡಲೂ ನಿಮಗೆ ಶಕ್ತಿಯಿದೆ, ಆದರೂ ಎಲ್ಲರಿಗೂ ಕರುಣೆ ತೋರುತ್ತೀರಿ. ಜನರು ನಿಮಗೆ ಅಭಿಮುಖರಾಗಲೆಂದೆ, ಅವರ ಪಾಪಗಳನು ಕಂಡರೂ ಕಾಣದಂತಿದ್ದೀರಿ.
24 : ಪ್ರೀತಿಸುತ್ತೀರಿ ಸೃಷ್ಟಿಯನೆಲ್ಲಾ ನೀವುಂಟು ಮಾಡಿದ್ದನು ಹೇಸುವುದಿಲ್ಲ ಹೇಸುತ್ತಿದ್ದರೆ ಉಂಟುಮಾಡುತ್ತಿರಲಿಲ್ಲ.
25 : ನಿಮ್ಮ ಚಿತ್ತ ಇದ್ದಹೊರತು, ಯಾವುದು ಬಾಳೀತು? ನಿಮ್ಮ ಕರೆ ಇಲ್ಲದಿದ್ದರೆ, ಉದ್ದುದು ಹೇಗೆ ಉಳಿದೀತು?
26 : ಹೇ ಸರ್ವೇಶ್ವರಾ, ಜೀವಾತ್ಮಗಳ ಪ್ರಿಯನೇ, ಎಲ್ಲವೂ ನಿಮ್ಮವಾದುದರಿಂದ, ಎಲ್ಲಕ್ಕೂ ಇದೆ ನಿಮ್ಮ ರಕ್ಷಣೆ

· © 2017 kannadacatholicbible.org Privacy Policy