1 : ಅಷ್ಟನ್ನು ಹೇಳಿದ್ದೇ, ಹೊಲೊಫರ್ನೆಸ್ ಅವಳನ್ನು ಊಟದ ಕೋಣೆಗೆ ಕರೆದುತಂದನು. ಅಲ್ಲಿ ಬೆಳ್ಳಿಯ ಪಾತ್ರೆಗಳಲ್ಲಿ ಊಟ ಸಿದ್ಧವಾಗಿ ಇಡಲಾಗಿತ್ತು. ತಾನು ತಿನ್ನುವ ಊಟವನ್ನೇ ಅವಳಿಗೂ ಬಡಿಸಿ, ತಾನು ಕುಡಿಯುವ ದ್ರಾಕ್ಷಾರಸವನ್ನೇ ಅವಳಿಗೂ ಕುಡಿಯಲು ಕೊಟ್ಟನು.
2 : ಅದಕ್ಕೆ ಜೂಡಿತಳು, “ನಾನಿದನ್ನು ತಿನ್ನಲಾರೆ; ತಿಂದರೆ ತಪ್ಪಾದೀತು.
3 : ನಾನು ತಂದಿರುವುದೇ ನನಗೆ ಸಾಕು. ಅದಲ್ಲದೆ ನಿಮಗೂ ಆಹಾರಪದಾರ್ಥಗಳು ಕೊರತೆ ಆಗಬಾರದು,” ಎಂದಳು. ಅದಕ್ಕೆ ಹೊಲೊಫರ್ನೆಸ್, “ನೀನು ಹೆಚ್ಚಿನ ಆಹಾರವನ್ನು ತರುವುದೆಂತು? ನಿನ್ನ ಕುಲದವರು ಇಲ್ಲಿ ಯಾರೂ ಇಲ್ಲವಲ್ಲಾ” ಎಂದನು.
4 : ಅದಕ್ಕೆ ಅವಳು, “ನನ್ನೊಡೆಯಾ, ನೀವು ಚಿರಾಯುವಾಗಿರಿ! ನಿಮ್ಮ ದಾಸಿ ಈ ಆಹಾರವನ್ನು ಮುಗಿಸುವ ಮುನ್ನವೇ ಸರ್ವೇಶ್ವರ ತಮ್ಮ ಸಂಕಲ್ಪವನ್ನು ನನ್ನ ಮುಖಾಂತರ ಈಡೇರಿಸುವರು,” ಎಂದಳು.
5 : ಹೊಲೊಫರ್ನೆಸನ ಸೇವಕರು ಅವಳನ್ನು ಕರೆದುಕೊಂಡು ಹೋಗಿ ಪ್ರತ್ಯೇಕವಾದ ಒಂದು ಗುಡಾರದಲ್ಲಿ ಇರಿಸಿದರು. ಅಲ್ಲಿ ಜೂಡಿತ್ ನಡುರಾತ್ರಿಯನ್ನು ಕಳೆದಳು.
6 : ಮುಂಜಾನೆ ಹಾಸಿಗೆಯಿಂದ ಎದ್ದು ಹೊಲೊಫರ್ನೆಸನಿಗೆ, “ದಾಸಿಯಾದ ನನಗೆ ಪ್ರಾರ್ಥನೆ ಮಾಡುವುದಕ್ಕಾಗಿ ಹೊರಕ್ಕೆ ಹೋಗಿಬರಲು ಅಪ್ಪಣೆಯಾಗಬೇಕು,” ಎಂದು ಈಗಾಗಲೇ ಬಿನ್ನವಿಸಿದ್ದಳು.
7 : ಅವಳನ್ನು ತಡೆಯಬಾರದೆಂದು ಹೊಲೊಫರ್ನೆಸ್ ಕಾವಲಾಳುಗಳಿಗೆ ಆಜ್ಞೆ ಇತ್ತಿದ್ದನು. ಗುಡಾರದಲ್ಲಿ ಜೂಡಿತ್ ಮೂರು ದಿನ ಇದ್ದುಕೊಂಡು, ಪ್ರತೀರಾತ್ರಿ ಬೆಥೂಲಿಯದ ಬಾವಿಯ ಕೆಳಗೆ ಹೋಗಿ ಬರುತ್ತಿದ್ದಳು. ಅಲ್ಲಿ ಗಡಿಕಾವಲು ದಳವಿತ್ತು.
8 : ಬುಗ್ಗೆಯಬಳಿ ಸ್ನಾನ ಮಾಡಿಕೊಂಡು ತನ್ನ ಜನಾಂಗದ ಬಿಡುಗಡೆಗಾಗಿ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ ಪ್ರಾರ್ಥನೆ ಮಾಡುತ್ತಿದ್ದಳು.
9 : ಮಡಿಮಾಡಿಕೊಂಡು ತನ್ನ ಗುಡಾರಕ್ಕೆ ಹೋಗಿ ಸಾಯಂಕಾಲ ಊಟ ಬರುವವರೆಗೂ ಅಲ್ಲಿಯೇ ಇರುತ್ತಿದ್ದಳು.
10 : ನಾಲ್ಕನೇ ದಿನ ಹೊಲೊಫರ್ನೆಸನು ಬೇರೆಯವರನ್ನು ಬಿಟ್ಟು ತನ್ನ ಜೊತೆಯಲ್ಲಿದ್ದ ಅಧಿಕಾರಿಗಳನ್ನು ಮಾತ್ರ ಆಹ್ವಾನಿಸಿ ಔತಣವನ್ನು ಏರ್ಪಡಿಸಿದನು
11 : “ತನ್ನ ಆಪ್ತ ಕಾರ್ಯದರ್ಶಿಯಾದ ಕಂಚುಕಿ ಬಗೋವನಿಗೆ, “ನೀನು ನೋಡಿಕೊಳ್ಳುತ್ತಿರುವ ಆ ಹಿಬ್ರು ಮಹಿಳೆಯನ್ನು ಬರಹೇಳು; ಅವಳು ನಮ್ಮೊಂದಿಗೆ ಔತಣದಲ್ಲಿ ಭಾಗವಹಿಸಿ ಅನ್ನಪಾನಗಳನ್ನು ಸ್ವೀಕರಿಸುವಂತೆ ಹೇಳು.
12 : ಇಂಥಾ ಮಹಿಳೆಯನ್ನು ಮೋಹಿಸದೆ ಬಿಟ್ಟುಬಿಟ್ಟರೆ ನಮಗೇ ಅವಮಾನ; ಎಲ್ಲರು ನಮ್ಮನ್ನು ನೋಡಿ ಪರಿಹಾಸ್ಯ ಮಾಡುವರು” ಎಂದನು.
13 : ಆಗ ಬಗೋವನು ಹೊಲೊಫರ್ನೆಸನ ಕಡೆಯಿಂದ ಜೂಡಿತಳು ಇದ್ದೆಡೆಗೆ ಹೋದನು. “ಚೆಲುವಾದ ಯುವತಿಯೇ, ನನ್ನ ಒಡೆಯನ ಬಳಿಗೆ ಚಿತ್ತೈಸುವೆಯಾ? ನೀನು ಅವನ ಎದುರಿಗೆ ಗೌರವ ಸ್ಥಾನದಲ್ಲಿ ಕುಳಿತು ಸಂತೋಷದಿಂದ ದ್ರಾಕ್ಷಾರಸ ಕುಡಿಯುವೆ. ಅರಸ ನೆಬೂಕದ್ನೆಚ್ಚರನ ಅರಮನೆಯಲ್ಲಿನ ಅಸ್ಸೀರಿಯದ ಕುಲೀನ ಸ್ತ್ರೀಯರಂತೆ ನೀನೂ ಈ ದಿನ ಪರಿಗಣಿತಳಾಗುವೆ,” ಎಂದನು.
14 : ಅದಕ್ಕೆ ಜೂಡಿತಳು, “ನನ್ನ ಒಡೆಯನ ವಿರುದ್ಧ ಪ್ರತಿಭಟಿಸಲು ನಾನು ಎಷ್ಟರವಳು? ಅವರು ಬಯಸಿದ್ದೆಲ್ಲವನ್ನೂ ಮಾಡಲು ನಾನು ಹಿಂಜರಿಯುವುದಿಲ್ಲ. ನಾನು ಸಾಯುವವರೆಗೂ ಇಂಥ ಸಂತಸದ ಘಟನೆಯನ್ನು ಮರೆಯಲಾರೆ!” ಎಂದಳು.
15 : ಹೀಗೆಂದು ಜೂಡಿತಳು ಎದ್ದು, ಬಟ್ಟೆಗಳನ್ನು ಧರಿಸಿ, ತನ್ನ ಎಲ್ಲ ಆಭರಣಗಳನ್ನು ತೊಟ್ಟು ಹೊರಟಳು. ಸೇವಕಿಯು ಅವಳ ಮುಂದೆ ಹೋದಳು. ಬಗೋವನು ಜೂಡಿತಳಿಗೆ ಕೂರಲು ಕೊಟ್ಟಿದ್ದ ಕಂಬಳಿಯನ್ನು ಹೊಲೊಫರ್ನೆಸನ ಎದುರಿನಲ್ಲೇ ಹಾಸಿದನು. ಅದರ ಮೇಲೆ ಕುಳಿತುಕೊಂಡು ಊಟಮಾಡಲೆಂದು ಏರ್ಪಡಿಸಿದ್ದನು.
16 : ಜೂಡಿತ್ ಬಂದು ಆ ತನ್ನ ಸ್ಥಳದಲ್ಲಿ ಕುಳಿತಳು. ಅವಳನ್ನು ಕಂಡದ್ದೇ, ಹೊಲೊಫರ್ನೆಸನು ಪರವಶನಾಗಿ ತಳಮಳಗೊಂಡನು. ಅವಳೊಂದಿಗೆ ಮಲಗಬೇಕೆಂಬ ಹಂಬಲ ಅಧಿಕವಾಯಿತು. ಅವಳನ್ನು ಕಂಡ ದಿನದಿಂದಲೇ ಅವಳನ್ನು ಮೋಹಿಸಬೇಕೆಂದು ಆಶೆಯಿಂದ ಸಂದರ್ಭ ಕಾಯುತ್ತಿದ್ದನು.
17 : ಎಂತಲೇ ಹೊಲೊಫರ್ನೆಸನು, “ಕುಡಿ, ಸಂತೋಷಿಸೋಣ,” ಎಂದು ಉಸುರಿದ.
18 : ಅದಕ್ಕೆ ಜೂಡಿತಳು, “ಬಹಳ ಸಂತೋಷ, ಒಡೆಯಾ, ನನ್ನ ಜೀವನದಲ್ಲೇ ಇಂದು ಅತಿ ಶುಭಕರವಾದ ದಿನ,” ಎಂದು ಹೇಳಿ,
19 : ತನ್ನ ದಾಸಿ ಅಡಿಗೆ ಮಾಡಿದ್ದನ್ನು ತಿಂದು ದ್ರಾಕ್ಷಾರಸವನ್ನು ಕುಡಿದಳು.
20 : ಹೊಲೊಫರ್ನೆಸನು ಅವಳಿಂದ ಎಷ್ಟು ಪುಳಕಿತನಾದನೆಂದರೆ, ಧಾರಾಳವಾಗಿ ದ್ರಾಕ್ಷಾರಸವನ್ನು ಬಟ್ಟಲಿನಲ್ಲಿ ಸುರಿದು ಕುಡಿದನು. ತನ್ನ ಜೀವಮಾನದಲ್ಲೇ ಅಷ್ಟೊಂದು ಅವನು ಕುಡಿದಿರಲಿಲ್ಲ