1 : ಅದು ನೆಬೂಕದ್ನೆಚ್ಚರನ ಆಳ್ವಿಕೆಯ ಹನ್ನೆರಡನೇ ವರ್ಷ. ಅವನು ನಿನೆವೆ ಮಹಾನಗರದಲ್ಲಿ ನೆಲೆಸಿ ಅಸ್ಸೀರಿಯರನ್ನು ಆಳುತ್ತಾ ಇದ್ದನು. ಆಗ ಅರ್ಪಕ್ಷದನು ಎಕ್ಬತಾನ ಎಂಬ ನಗರದಲ್ಲಿದ್ದುಕೊಂಡು ಮೇದ್ಯರನ್ನು ಆಳುತ್ತಾ ಇದ್ದನು
2 : ಅರ್ಪಕ್ಷದನು ಎಕ್ಬತಾನ ನಗರದ ಸುತ್ತಲು ಕೋಟೆಯನ್ನು ಕಟ್ಟಿದ್ದನು. ಅದು ಇಪ್ಪತ್ತ ಎರಡು ಮೀಟರ್ ದಪ್ಪ, ಮೂವತ್ತು ಮೀಟರ್ ಎತ್ತರವಿತ್ತು. ಈ ಕಟ್ಟಡಕ್ಕೆ ಬಳಸಲಾಗಿದ್ದ ಕಲ್ಲುಗಳು ನೂರಮೂವತ್ತು ಸೆಂಟಿ ಮೀಟರ್ ದಪ್ಪ ಹಾಗೂ ಇನ್ನೂರ ಅರವತ್ತು ಸೆಂಟಿಮೀಟರ್ ಉದ್ದವಿದ್ದವು.
3 : ಕೋಟೆಯ ಪ್ರತಿಯೊಂದು ಬಾಗಿಲ ಬಳಿ ಗೋಪುರಗಳಿದ್ದವು. ಅವುಗಳ ಎತ್ತರ ನಲ್ವತ್ತನಾಲ್ಕು ಮೀಟರ್, ಬುಡದಗಲ ಇಪ್ಪತ್ತಾರು ಮೀಟರ್.
4 : ಕೋಟೆ ಬಾಗಿಲುಗಳ ಗಾತ್ರ: ಮೂವತ್ತು ಮೀಟರ್ ಎತ್ತರ ಹಾಗೂ ಹದಿನೆಂಟು ಮೀಟರ್ ಅಗಲ; ಈ ಬಾಗಿಲುಗಳ ಮೂಲಕ ಇಡೀ ಸೈನ್ಯ ಸುಲಭವಾಗಿ ಹೋಗಿಬರಬಹುದಾಗಿತ್ತು; ರಾವುತರು ಸರಾಗವಾಗಿ ಅಡ್ಡಾಡಬಹುದಾಗಿತ್ತು.
5 : ನೆಬೂಕದ್ನೆಚ್ಚರನು ಅರ್ಪಕ್ಷದನ ಮೇಲೆ ಯುದ್ಧಕ್ಕೆ ಹೊರಟನು. ಯುದ್ಧವು ರಾಜೆಸ್ಸಿನ ಬಳಿಯಿರುವ ದೊಡ್ಡ ಬಯಲು ಪ್ರದೇಶದಲ್ಲಿ ನಡೆಯಿತು.
6 : ಮಲೆನಾಡಿನ ಅನೇಕ ರಾಷ್ಟ್ರಗಳು, ಯೂಫ್ರೆಟಿಸ್, ಟೈಗ್ರಿಸ್ ಹಾಗು ಹೈದಾಸ್ ಪೆಸ್ ಇವುಗಳ ಕರಾವಳಿಯಲ್ಲಿದ್ದವರು ಮತ್ತು ಬಯಲು ಸೀಮೆಯಲ್ಲಿದ್ದು ಏಲಾಮಿನ ಅರಸ ಅರ್ಯೋಕನಿಗೆ ಅಧೀನರಾಗಿದ್ದವರು, ಅರ್ಪಕ್ಷದನಿಗೆ ಬೆಂಬಲಿಗರಾದರು. ಹೀಗೆ ಕಸ್ದೀಯರ ವಿರುದ್ಧ ಹೋರಾಡಲು ಅನೇಕ ರಾಷ್ಟ್ರಗಳು ಮುಂದಾದವು.
7 : ಅಸ್ಸೀರಿಯರ ಅರಸ ನೆಬೂಕದ್ನೆಚ್ಚರನು ಹಲವಾರು ನಾಡುಗಳಿಗೆ ದೂತರನ್ನು ಕಳುಹಿಸಿದನು; ಪರ್ಷಿಯದವರಿಗೆ, ಪಾಶ್ಚಾತ್ಯ ನಾಡಿನವರಿಗೆ, ಸಿಲಿಸಿಯಾ ಹಾಗು ದಮಸ್ಕಸ್‍ನವರಿಗೆ, ಲೆಬನೋನ್, ಅಂತಿಲೆಬನೋನ್ ಹಾಗು ಸಮುದ್ರದ ಕರಾವಳಿಯಲ್ಲಿದ್ದವರಿಗೆ;
8 : ಕಾರ್ಮೆಲ್, ಗಿಲ್ಯಾದ್, ಉತ್ತರ ಗಲಿಲೇಯ ಮತ್ತು ಎಸ್ದ್ರಲೋನ್ ಮಹಾಬಯಲು ಸೀಮೆಯವರಿಗೆ;
9 : ಸಮಾರಿಯ ಹಾಗು ಅದರ ಸುತ್ತಮುತ್ತಲಿನ ಪಟ್ಟಣದವರಿಗೆ, ಜೋರ್ಡನ್ ನದಿಯ ಆಚೆ ಇರುವ ಜೆರುಸಲೇಮ್, ಬೆಥಾನಿಯಾ, ಚೆಲೂಸ್, ಕಾದೇಶ್ ಪಟ್ಟಣದವರಿಗೆ; ಈಜಿಪ್ಟ್ ನದಿತೀರದವರಿಗೆ, ತಾಫನೆಸ್, ರಮ್ಸೇಸ್ ಹಾಗು ಇಡಿ ಗೋಷೆನ್ ನಾಡಿನವರಿಗೆ ಕರೆಕಳುಹಿಸಿದನು;
10 : ಅಷ್ಟು ಮಾತ್ರವಲ್ಲ, ಟಾನಿಸಿನ ಆಚೆಕಡೆಗೆ, ಮೆಂಫಿಸ್‍ವರೆಗೆ, ಈಜಿಪ್ಟಿನಲ್ಲಿದ್ದ ಎಲ್ಲರಿಗೆ ಮತ್ತು ಎಥಿಯೋಪಿಯಾದ ಎಲ್ಲೆಗಳಲ್ಲಿದ್ದವರಿಗೆ ದೂತರನ್ನು ಕಳುಹಿಸಿ ಸಹಾಯಕ್ಕೆ ಬರಬೇಕೆಂದು ಕೋರಿದನು.
11 : ಆದರೆ ಈ ದೇಶಗಳ ನಿವಾಸಿಗಳೆಲ್ಲರೂ ಅಸ್ಸೀರಿಯರ ಅರಸ ನೆಬೂಕದ್ನೆಚ್ಚರನ ಕರೆಗೆ ಓಗೊಡದೆ ಹೋದರು. ಅವನೊಂದಿಗೆ ಸೇರಿ ಯುದ್ಧಮಾಡಲು ನಿರಾಕರಿಸಿದರು. ಅವರ ದೃಷ್ಟಿಯಲ್ಲಿ ಅವನು ಒಬ್ಬಂಟಿಗನಾಗಿ ಕಂಡನು. ಅವನಿಗೆ ಯಾರೂ ಭಯಪಡಲಿಲ್ಲ. ಅವನ ರಾಯಭಾರಿಗಳನ್ನು ಬರೀ ಕೈಯಲ್ಲಿ ಹಿಂದಕ್ಕೆ ಅಟ್ಟಿ ಅವಮಾನಗೊಳಿಸಿದರು.
12 : ನೆಬೂಕದ್ನೆಚ್ಚರನು ಅವರೆಲ್ಲರ ಮೇಲೆ ಉಗ್ರಕೋಪಗೊಂಡನು. ಸಿಲಿಸಿಯಾ, ದಮಸ್ಕಸ್ ಹಾಗು ಸಿರಿಯಾ ನಾಡುಗಳ ಮೇಲೆ ಸೇಡುತೀರಿಸಿಕೊಳ್ಳುವುದಾಗಿ ಶಪಥಮಾಡಿದನು; ಮೋವಾಬ್, ಅಮ್ಮೋನ್, ಸಮಸ್ತ ಜುದೇಯ ಮತ್ತು ಈಜಿಪ್ಟ್ ಇವುಗಳಲ್ಲಿರುವ ಎಲ್ಲರನ್ನು ಒಂದು ಸಮುದ್ರದಿಂದ ಇನ್ನೊಂದು ಸಮುದ್ರದವರೆಗೆ ಇರುವವರನ್ನು ಕತ್ತಿಗೆ ತುತ್ತಾಗಿಸುವುದಾಗಿ ತನ್ನ ಸಿಂಹಾಸನದ ಮೇಲೆ ಹಾಗು ರಾಜ್ಯದ ಮೇಲೆ ಆಣೆಯಿಟ್ಟು ಶಪಥಮಾಡಿದನು.
13 : ತನ್ನ ಆಳ್ವಿಕೆಯ ಹದಿನೇಳನೇ ವರ್ಷದಲ್ಲಿ ನೆಬೂಕದ್ನೆಚ್ಚರನು ಅರಸ ಅರ್ಪಕ್ಷದನ ಮೇಲೆ ದಾಳಿಮಾಡಿ ಸೋಲಿಸಿದನು. ಅವನ ಇಡೀ ಸೈನ್ಯವನ್ನು, ರಾಹುತರನ್ನು ಹಾಗೂ ರಥಗಳನ್ನು ಧ್ವಂಸ ಮಾಡಿದನು.
14 : ಅವನ ನಗರಗಳನ್ನೆಲ್ಲ ಆಕ್ರಮಿಸಿಕೊಂಡು, ಎಕ್ಬತಾನಕ್ಕೆ ಬಂದು ಅದರ ಗೋಪುರಗಳನ್ನು ವಶಪಡಿಸಿಕೊಂಡು, ಅದರ ಸಂತೆ ಪೇಟೆಗಳನ್ನು ಲೂಟಿಮಾಡಿದನು. ಆ ನಗರದ ವೈಭವವನ್ನೆಲ್ಲಾ ವಿಪರ್ಯಾಸಕ್ಕೆ ಗುರಿ ಮಾಡಿದನು.
15 : ರಾಜೆಸ್ಸಿನ ಗುಡ್ಡಗಳಲ್ಲಿ ಅರ್ಪಕ್ಷದನನ್ನು ಸೆರೆ ಹಿಡಿದು, ಭರ್ಜಿಯಿಂದ ತಿವಿದು, ಒಮ್ಮೆಗೇ ಅವನನ್ನು ಮುಗಿಸಿಬಿಟ್ಟನು.
17 : ತರುವಾಯ ನೆಬೂಕದ್ನೆಚ್ಚರನು ತನ್ನ ಸೈನ್ಯಸಮೇತ ಹಾಗೂ ಬೆಂಬಲಿಗರೊಂದಿಗೆ ನಿನೆವೆಗೆ ಹಿಂದಿರುಗಿದನು; ಸೈನ್ಯ ತಂಡೋಪ ತಂಡವಾಗಿತ್ತು; ಅಲ್ಲೇ ಅವನೂ ಅವನ ಸೈನ್ಯ ಸ್ತೋಮವೂ ದುಂದೌಣದಲ್ಲಿ ನೂರಿಪ್ಪತ್ತು ದಿನಗಳನ್ನು ಕಳೆದರು.