1 : ಎಸಾರದ್ದೋನ್ ಅರಸನಾಗಿದ್ದಾಗಲೇ ನಾನು ಮನೆಗೆ ಹಿಂದಿರುಗಿದೆ. ಪತ್ನಿ ಅನ್ನಳು ಮತ್ತು ಮಗ ತೊಬಿಯಾಸ್ ನನ್ನೊಡನೆ ಸೇರಿಕೊಂಡರು. ಪಂಚಾಶತ್ತಮ ಹಬ್ಬದಂದು ಒಳ್ಳೆಯ ಔತಣಕೂಟವನ್ನು ಏರ್ಪಡಿಸಲಾಗಿತ್ತು. ನಾನು ಭೋಜನಕ್ಕೆ ಕುಳಿತೆ.
2 : ವಿವಿಧ ತಿಂಡಿತಿನಸುಗಳನ್ನು ಮೇಜಿನ ಮೇಲೆ ಬಡಿಸಲಾಗಿತ್ತು. ಆಗ ನನ್ನ ಮಗ ತೊಬಿಯಾಸನಿಗೆ, “ಮಗನೇ, ನೀನು ಹೋಗಿ ನಿನೆವೆಯಲ್ಲಿ ಗಡೀಪಾರಾಗಿರುವ ನಮ್ಮ ಸಹೋದರರಲ್ಲಿ ಯಾರಾದರು ಬಡವ ಹಾಗು ಧರ್ಮನಿಷ್ಠನು ಇದ್ದರೆ ಅಂಥವನನ್ನು ಊಟಕ್ಕೆ ಕರೆದುಕೊಂಡು ಬಾ. ಅಂಥವನೊಂದಿಗೆ ನಾನು ಊಟ ಮಾಡಬೇಕು. ನೀನು ಹಿಂದಿರುಗಿ ಬರುವವರೆಗೂ ನಾನು ಕಾದಿರುತ್ತೇನೆ,” ಎಂದೆನು.
3 : ಅಂತೆಯೇ, ತೊಬಿಯಾಸನು ಒಬ್ಬ ಬಡ ಇಸ್ರಯೇಲನನ್ನು ಹುಡುಕಲು ಹೊರಟನು. ಅವನು ಹಿಂದಿರುಗಿ ಬಂದು, “ಅಪ್ಪಾ, ಅಪ್ಪಾ,” ಎಂದು ಕರೆದನು. ನಾನು, “ಏನು ಮಗನೇ?” ಎಂದು ಕೇಳಲು, ಅವನು, “ನಮ್ಮ ಕುಲದವರಲ್ಲಿ ಒಬ್ಬನನ್ನು ಈಗ ತಾನೇ ಹತ್ಯೆ ಮಾಡಿದ್ದಾರೆ. ಅವನ ಕೊರಳನ್ನು ಹಿಸುಕಿ ಅಂಗಡಿಬೀದಿಯಲ್ಲಿ ಬಿಸಾಡಿದ್ದಾರೆ. ಅವನು ಇನ್ನೂ ಅಲ್ಲೇ ಬಿದ್ದಿದ್ದಾನೆ,” ಎಂದನು.
4 : ತಕ್ಷಣ ನಾನು ಜಿಗಿದೆದ್ದು, ಭೋಜನವನ್ನು ಮುಟ್ಟದೆ ಹೊರಟೆ. ಆ ಅಂಗಡಿ ಬೀದಿಯಿಂದ ಶವವನ್ನು ಹೊತ್ತುತಂದೆ. ಸೂರ್ಯಾಸ್ತಮದ ನಂತರ ಸಮಾಧಿಮಾಡಲು ನನ್ನ ಕೊಠಡಿಯೊಂದರಲ್ಲಿ ಆ ಶವವನ್ನು ಅವಿತಿಟ್ಟೆ.
5 : ತರುವಾಯ ಸ್ನಾನಮಾಡಿ ದುಃಖದಿಂದ ಊಟಮಾಡಿದೆ.
6 : ಆಗ ಪ್ರವಾದಿ ಆಮೋಸನು ಬೇತೇಲಿನ ವಿರುದ್ಧ ನುಡಿದ ಆ ಮಾತುಗಳು ನನ್ನ ನೆನಪಿಗೆ ಬಂದವು:
“ಮಾರ್ಪಡಿಸುವೆನು ನಿಮ್ಮ ಕೊಂಡಾಟ ದಿನಗಳನ್ನು ಗೋಳಾಟದಿನಗಳನ್ನಾಗಿ, ನಿಮ್ಮ ಹರ್ಷ ಗೀತೆಗಳನ್ನು ಶೋಕಗೀತೆಗಳನ್ನಾಗಿ.” ಈ ನುಡಿ ನನಗೆ ಕಣ್ಣೀರನ್ನು ತಂದಿತು.
7 : ಸೂರ್ಯಾಸ್ತಮವಾದ ಮೇಲೆ ನಾನು ಹೊರಟು ಗುಳಿಯನ್ನು ತೋಡಿ ಆ ಶವವನ್ನು ಭೂಸ್ಥಾಪನೆ ಮಾಡಿದೆ.
8 : ನನ್ನ ನೆರೆಯವರು ಪರಿಹಾಸ್ಯ ಮಾಡುತ್ತಾ, “ಈತನಿಗೆ ಭಯಬೇಡವೆ? ಈ ಮೊದಲೇ ಇಂಥ ಕಾರ್ಯಕ್ಕಾಗಿ ಅವನು ತಲೆತೆತ್ತಬೇಕಾಗಿತ್ತು; ಪಲಾಯನಮಾಡಬೇಕಾಗಿತ್ತು. ಆದರೂ ಪುನಃ ಸತ್ತವರನ್ನು ಸಮಾಧಿ ಮಾಡಲು ಪ್ರಾರಂಭಿಸಿದ್ದಾನೆ,” ಎಂದುಕೊಂಡರು.
9 : ಅದೇ ರಾತ್ರಿ ಸ್ನಾನಮಾಡಿಕೊಂಡು ನನ್ನ ಅಂಗಳದ ಗೋಡೆಯ ಪಕ್ಕದಲ್ಲೇ ಮಲಗಿಕೊಂಡೆ. ಸೆಕೆಯಾಗಿದ್ದರಿಂದ ಮುಖವನ್ನು ಮುಚ್ಚಿಕೊಳ್ಳಲಿಲ್ಲ.
10 : ತಲೆಯ ಮೇಲ್ಭಾಗದ ಗೋಡೆಯಲ್ಲಿ ಗುಬ್ಬಚ್ಚಿಗಳಿದ್ದವೆಂದು ನನಗೆ ತಿಳಿದರಲಿಲ್ಲ. ಅವುಗಳ ಬಿಸಿಬಿಸಿ ಪಿಚ್ಚಿಕೆಗಳು ಕಣ್ಣುಗಳಿಗೆ ಬಿದ್ದವು. ಕಣ್ಣುಗಳ ಮೇಲೆ ಬಿಳಿಮಚ್ಚೆಗಳು ಉಂಟಾದವು. ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದೆ. ಮುಲಾಮುಗಳಿಂದ ಅದನ್ನು ಗುಣಪಡಿಸಲು ಅವರು ಪ್ರಯತ್ನಿಸಿದಷ್ಟೂ ನನ್ನ ದೃಷ್ಟಿ ಕಡಿಮೆಯಾಯಿತು. ಕೊನೆಗೆ ನಾನು ಸಂಪೂರ್ಣವಾಗಿ ಕುರುಡನಾದೆ. ನಾಲ್ಕು ವರ್ಷಗಳ ಕಾಲ ದೃಷ್ಟಿಯಿಲ್ಲದೆ ಇದ್ದೆ. ನನ್ನ ಬಂಧುಬಳಗದವರೆಲ್ಲ ನನ್ನ ಬಗ್ಗೆ ಅನುಕಂಪ ತಾಳಿದ್ದರು. ಅಹೀಕರನು ಎಲಾಮಿಯಸಿಗೆ ಹೋಗುವತನಕ ಎರಡು ವರ್ಷಕಾಲ ನನಗೆ ಜೀವನಾಂಶವನ್ನು ಒದಗಿಸಿ ಕೊಟ್ಟನು.
11 : ಅಹೀಕರನು ಹೊರಟುಹೋದ ತರುವಾಯ ನನ್ನ ಪತ್ನಿ ಅನ್ನಾ ದುಡಿಯಬೇಕಾಗಿ ಬಂತು. ಅವಳು ಉಣ್ಣೆಯಿಂದ ನೂಲುತೆಗೆದು ಬಟ್ಟೆಯನ್ನು ನೇಯುತ್ತಿದ್ದಳು. ಕ್ರಯಮಾಡಿದವರಿಗೆ ಬಟ್ಟೆಯನ್ನು ತಲುಪಿಸಿ ಅವರಿಂದ ಹಣಪಡೆಯುತ್ತಿದ್ದಳು.
12 : ಡಿಸ್ಪ್ರೋಸ್ ತಿಂಗಳ ಏಳನೆಯ ದಿನದಂದು ತಾನೇ ನೆಯ್ದ ಬಟ್ಟೆಯ ತುಂಡೊಂದನ್ನು ಗೊತ್ತುಮಾಡಿದವರಿಗೆ ಕೊಟ್ಟಳು. ಅವರು ಅದಕ್ಕೆ ಪೂರ್ತಿ ಹಣವನ್ನು ಪಾವತಿ ಮಾಡಿದ್ದಲ್ಲದೆ ಊಟಕ್ಕೆಂದು ಒಂದು ಮೇಕೆಯನ್ನು ಸಹ ಕೊಡುಗೆಯಾಗಿ ಕೊಟ್ಟರು.
13 : ಆ ಮೇಕೆ ಮನೆಗೆ ಬಂದಾಗ ಅರಚಲು ಆರಂಭಿಸಿತು. ಆಗ ನನ್ನಾಕೆಯನ್ನು ಕರೆದು, “ಈ ಮೇಕೆ ಎಲ್ಲಿಂದ ಬಂತು? ಇದು ಕದ್ದು ತಂದ ಮೇಕೆಯಲ್ಲ ತಾನೇ? ಕದ್ದವಸ್ತುವನ್ನು ತಿನ್ನಲು ನಮಗೆ ಹಕ್ಕಿಲ್ಲ. ಇದನ್ನು ಮಾಲೀಕರಿಗೆ ಹಿಂದಿರುಗಿಸು,” ಎಂದು ಹೇಳಿದೆ.
14 : ಆದರೆ ಆಕೆ, “ಇಲ್ಲ, ನನ್ನ ಕೂಲಿಗಿಂತ ಹೆಚ್ಚಾಗಿ ಇದನ್ನು ಕೊಡುಗೆಯಾಗಿ ನನಗೆ ಕೊಟ್ಟರು,” ಎಂದು ಹೇಳಿದಳು. ನಾನು ಆಕೆಯನ್ನು ನಂಬಲಿಲ್ಲ. ಮಾಲೀಕರಿಗೆ ಅದನ್ನು ಹಿಂದಿರುಗಿಸಬೇಕೆಂದು ಒತ್ತಾಯ ಮಾಡಿದೆ. ಅವಳ ನಡತೆಯ ವಿಷಯದಲ್ಲಿ ನನಗೆ ತೀವ್ರ ನಾಚಿಕೆಯಾಯಿತು. ಅದಕ್ಕವಳು, “ನಿನ್ನ ದಾನಧರ್ಮ ಏನಾಯಿತು? ನಿನ್ನ ಸತ್ಕಾರ್ಯಗಳಿಂದ ಏನು ಬಂತು? ಅವುಗಳಿಂದ ನಿನಗೆ ಲಭಿಸಿದ ಪ್ರತಿಫಲ ಎಲ್ಲರಿಗೂ ಗೊತ್ತಾದ ವಿಷಯ!” ಎಂದು ಜರೆದಳು.